×
Ad

ಕುರ್ಚಿ ಭದ್ರಪಡಿಸಿಕೊಳ್ಳಲು ʼಜಾತಿಗಣತಿʼ ಹೆಸರಿನಲ್ಲಿ ಸಮಾಜದಲ್ಲಿ ವಿಷಬೀಜ ಯಾಕೆ ಬಿತ್ತುತ್ತೀರಿ?: ಆರ್.ಅಶೋಕ್

Update: 2025-04-16 20:32 IST

 ಆರ್.ಅಶೋಕ್

ಬೆಂಗಳೂರು: ‘ಅಂಗೈಹುಣ್ಣಿಗೆ ಕನ್ನಡಿ ಬೇಕೇ’ ಎಂಬಂತೆ ಇಷ್ಟೆಲ್ಲಾ ಎಡವಟ್ಟುಗಳಿರುವ ಜಾತಿ ಜನಗಣತಿ ವರದಿಯನ್ನ ಸಂಪುಟದಲ್ಲಿ ಚರ್ಚೆ ಮಾಡುವ ಅವಶ್ಯಕತೆ ಏನಿದೆ? ನಿಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು, ಅಲುಗಾಡುತ್ತಿರುವ ಕುರ್ಚಿ ಭದ್ರಪಡಿಸಿಕೊಳ್ಳಲು ಜಾತಿ ಜನಗಣತಿ ಹೆಸರಿನಲ್ಲಿ ಸಮಾಜದಲ್ಲಿ ವಿಷಬೀಜ ಯಾಕೆ ಬಿತ್ತುತ್ತೀರಿ?’ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಪ್ರಶ್ನಿಸಿದ್ದಾರೆ.

ಬುಧವಾರ ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಅವರು, ಸಿಎಂ ಸಿದ್ದರಾಮಯ್ಯನವರ ಮೊದಲ ಅವಧಿಯಲ್ಲಿ ಕಾಟಾಚಾರಕ್ಕೆ ನಡೆಸಿದ ಜಾತಿ ಜನಗಣತಿ ಸಮೀಕ್ಷೆ ಸಾಲು ಸಾಲು ಎಡವಟ್ಟುಗಳಿಂದ ಕೂಡಿತ್ತು, ಅವ್ಯವಸ್ಥೆಯ ಗೂಡಾಗಿತ್ತು ಎನ್ನುವುದಕ್ಕೆ ಅಂದಿನ ಪತ್ರಿಕಾ ವರದಿಗಳೇ ಸಾಕ್ಷಿ. ಜಾತಿ ಜನಗಣತಿಗಾಗಿ ನಿಯೋಜನೆ ಮಾಡಲಾಗಿದ್ದ ಸಿಬ್ಬಂದಿಗಳಿಗೆ ಗಣತಿ ಅರ್ಜಿ ತುಂಬುವ ಬಗ್ಗೆ ತರಬೇತಿಯನ್ನೇ ನೀಡಿರಲಿಲ್ಲ ಎಂದು ಆಕ್ಷೇಪಿಸಿದ್ದಾರೆ.

‘ಗಣತಿ ಅರ್ಜಿಯಲ್ಲಿದ್ದ 56 ಕಾಲಂಗಳಲ್ಲಿ ಸಮೀಕ್ಷೆದಾರರು ಪ್ರಾಮಾಣಿಕವಾಗಿ ತುಂಬುತಿದ್ದುದು ಕೇವಲ 8-10 ಕಾಲಂ ಮಾತ್ರ. ಉಳಿದ ಕಾಲಂಗಳ ಭರ್ತಿಗೆ ಮಾನದಂಡ ‘ಅಂದಾಜು’, ‘ಅಕ್ಕ-ಪಕ್ಕದ ಮನೆಯವರ ಹೆಸರು’. ಉಪಜಾತಿ ಕಾಲಂನಲ್ಲಿ ಏನು ನಮೂದಿಸಬೇಕು ಎಂಬ ಗೊಂದಲದಿಂದ ಕಾಲಂ ಖಾಲಿ. ಬಿಸಿಲು, ಮಳೆಯ ನೆಪವೊಡ್ಡಿ ಸಮೀಕ್ಷೆದಾರರು ಮನೆಮನೆಗೂ ತೆರಳಿ ಸಮೀಕ್ಷೆ ನಡೆಸಲು ಹಿಂದೇಟು’ ಎಂದು ಅವರು ಹೇಳಿದ್ದಾರೆ.

ಹಲವೆಡೆ 2011ರ ಜನಗತಿಯ ನಕಲು ಪ್ರತಿಗಳನ್ನು ಆಧಾರವನ್ನಾಗಿಟ್ಟುಕೊಂಡು ಮಕ್ಕಳ ಕೈಯಲ್ಲಿ ಜಾತಿ ಗಣತಿ ಅರ್ಜಿ ಭರ್ತಿ. ಪುಟಕ್ಕೆ 5-10 ರೂ.ನೀಡಿ ಶಾಲಾ ಮಕ್ಕಳ ಕೈಯಲ್ಲಿ ಅರ್ಜಿ ಭರ್ತಿ. ಸಮೀಕ್ಷೆಗೆ ಒಳಪಟ್ಟವರ ಸಹಿಯನ್ನೂ ಮಕ್ಕಳೇ ಹಾಕುತ್ತಾರೆ. ಅಗತ್ಯವಿದ್ದಲ್ಲಿ ಹೆಬ್ಬೆಟ್ಟನ್ನು ಸಹ ಮಕ್ಕಳೇ ಒತ್ತುತ್ತಾರೆ. ಸಿಎಂ ಸಿದ್ದರಾಮಯ್ಯನವರೇ, ಇವೆಲ್ಲಾ ನಾವು ಮಾಡುತ್ತಿರುವ ಆರೋಪಗಳಲ್ಲ. ಅಂದಿನ ಸುದ್ದಿ ಮಾಧ್ಯಮಗಳಲ್ಲಿ ಬಂದಿರುವ ವರದಿಗಳು ಎಂದು ಅವರು ಉಲ್ಲೇಖಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News