×
Ad

ಸಿದ್ದರಾಮಯ್ಯ ನಡೆಸಿದ ಸಮಾವೇಶ ಕಾಂಗ್ರೆಸ್‍ನ ಒಡಕನ್ನು ತೋರಿಸಿದೆ : ಆರ್.ಅಶೋಕ್

Update: 2025-07-20 20:02 IST

ಆರ್.ಅಶೋಕ್

ಬೆಂಗಳೂರು : ಕಾಂಗ್ರೆಸ್ ಪಕ್ಷದ ನಾಯಕರು ಬೀದಿಯಲ್ಲಿ ಬಡಿದಾಡಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ನಿನ್ನೆ ನಡೆಸಿದ ಸಮಾವೇಶ ಸರಕಾರಿ ಕಾರ್ಯಕ್ರಮವಲ್ಲ. ಬದಲಿಗೆ ಅದು ಡಿ.ಕೆ.ಶಿವಕುಮಾರ್ ಮುಗಿಸಲು ಮಾಡಿದ ಕಾರ್ಯಕ್ರಮ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ನಡೆಸಿದ ಸಮಾವೇಶ ಕಾಂಗ್ರೆಸ್‍ನ ಒಡಕನ್ನು ತೋರಿಸಿದೆ. ಅಲ್ಲಿ ಒಬ್ಬರೂ ಡಿ.ಕೆ.ಶಿವಕುಮಾರ್ ಪರ ಮಾತಾಡಲಿಲ್ಲ. ಡಿಕೆಶಿಗೆ ಪಾಠ ಕಲಿಸಲು ಹಾಗೂ ಅಪಮಾನ ಮಾಡಲು ಈ ಸಮಾವೇಶ ನಡೆಸಲಾಗಿದೆ. ಡಿಕೆಶಿ ಈಗ ಎರಡನೇ ದರ್ಜೆಯ ನಾಯಕರಾಗಿಬಿಟ್ಟಿದ್ದಾರೆ. ಡಿ.ಕೆ.ಶಿವಕುಮಾರ್ ಮುಗಿಸಲು ಗುದ್ದಲಿ ಪೂಜೆ ಮಾಡಲಾಗಿದೆ ಎಂದು ಲೇವಡಿ ಮಾಡಿದರು.

ಇದು ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರ ಆಂತರಿಕ ಜಗಳ. ಬಿಜೆಪಿಗೆ ಸರಕಾರವನ್ನು ಬೀಳಿಸುವ ಅಗತ್ಯವಿಲ್ಲ. ಈ ಸರಕಾರ ಕಾಂಗ್ರೆಸ್‍ನ ಆಂತರಿಕ ಕಲಹದಿಂದಲೇ ಬಿದ್ದುಹೋಗಲಿದೆ. ಸುರ್ಜೇವಾಲ ರಾಜ್ಯಕ್ಕೆ ಬಂದು ಶಾಸಕರ ಅಹವಾಲುಗಳನ್ನು ಆಲಿಸಿದ್ದಾರೆ. ಇವರ ಜಗಳ ಜನರ ಮುಂದೆ ಬಯಲಾಗಿದೆ ಎಂದು ಅವರು ತಿಳಿಸಿದರು.

ಪ್ರಧಾನಿ ಮೋದಿ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೈಸೂರಿನ ಸಮಾವೇಶದಲ್ಲಿ ಕೀಳಾಗಿ ಮಾತಾಡಿದ್ದಾರೆ. ಪ್ರಧಾನಿ ಬೊಗಳುತ್ತಾರೆಂದು ಹೇಳುವುದು ಕಾಂಗ್ರೆಸ್ ನಾಯಕರ ಮನಸ್ಥಿತಿಯನ್ನು ತೋರಿಸುತ್ತದೆ. ಈ ಹಿಂದೆ ಛಲವಾದಿ ನಾರಾಯಣಸ್ವಾಮಿ ಗಾದೆಮಾತು ಹೇಳಿದಾಗ ಸಂಸ್ಕೃತಿ ಬಗ್ಗೆ ಇವರೇ ಮಾತಾಡಿದ್ದರು. ಇನ್ನು ಅಧಿಕಾರಕ್ಕೆ ಬರುವುದಿಲ್ಲ ಎಂಬ ಕಾರಣಕ್ಕೆ ಇವರು ಈ ರೀತಿ ಕೀಳಾಗಿ ಮಾತಾಡುತ್ತಿದ್ದಾರೆ ಎಂದರು.

ಬೆಂಗಳೂರು ಹೋಳು: ಬೆಂಗಳೂರಿನಲ್ಲಿ ಅಭಿವೃದ್ಧಿ ಮಾಡದೆ ಹೋಳು ಮಾಡಲಾಗಿದೆ. ಸಂಚಾರ ದಟ್ಟಣೆ ಪ್ರವಾಹ, ಕಸದ ಸಮಸ್ಯೆ ಯಾವುದು ಈ ಕ್ರಮದಿಂದ ನಿವಾರಣೆಯಾಗುವುದಿಲ್ಲ. ಕೆಂಪೇಗೌಡರು ಕಟ್ಟಿದ ಬೆಂಗಳೂರನ್ನು ಒಡೆದರೆ ಪ್ರಗತಿಯಾಗಲ್ಲ. ಬ್ರ್ಯಾಂಡ್ ಎಂಬ ಸ್ಲೋಗನ್‍ನಿಂದ ಮಾತ್ರ ಅಭಿವೃದ್ಧಿ ಮಾಡುತ್ತಿದ್ದಾರೆ. ನಗರವನ್ನು ಒಡೆಯುವುದರಿಂದ ಆದಾಯ ಹಂಚಿಕೆಯಲ್ಲಿ ತಾರತಮ್ಯ ಉಂಟಾಗಿ ಇನ್ನಷ್ಟು ಕಲಹ ಉಂಟಾಗಲಿದೆ ಎಂದು ಅವರು ಎಚ್ಚರಿಸಿದರು.

ಸುರಂಗ ರಸ್ತೆ ಮಾಡಲು ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಗುಂಡಿ ಬಿದ್ದ ರಸ್ತೆಗಳನ್ನು ದುರಸ್ತಿ ಮಾಡಲು ಸರಕಾರದ ಬಳಿ ಹಣವಿಲ್ಲ. ಇಲ್ಲಿ ಗಟ್ಟಿಯಾದ ಬಂಡೆಗಳಿವೆ. ಇಲ್ಲಿ ಸುರಂಗ ಕೊರೆದು ರಸ್ತೆ ಮಾಡಲು ಸಾಧ್ಯವಿಲ್ಲ. ಕೇಂದ್ರ ಹೆದ್ದಾರಿ ಸಚಿವರನ್ನು ಭೇಟಿ ಮಾಡಿ ಸುರಂಗ ರಸ್ತೆ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು. ಇದರ ಬದಲು ಮೆಟ್ರೊ ಯೋಜನೆಗೆ ಒತ್ತು ನೀಡಿದರೆ ಸಾಕಾಗುತ್ತದೆ. ಮೆಟ್ರೊ ಯೋಜನೆಯನ್ನು ವಿಸ್ತರಿಸಿದರೆ, ಸಂಚಾರ ದಟ್ಟಣೆ ನಿವಾರಣೆಯಾಗುತ್ತದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News