“25% ಉಸಿರಾಟ ಕಡಿಮೆ ಮಾಡಿ ದೇಶಭಕ್ತಿ ಪ್ರದರ್ಶಿಸಿ” : ಮೋದಿ ಹೇಳಿಕೆಗಳಿಗೆ ನಟ ಕಿಶೋರ್ ಕುಮಾರ್ ವ್ಯಂಗ್ಯ
ಬೆಂಗಳೂರು: ಚಿನ್ನ ಖರೀದಿಸಬೇಡಿ, ಅನಿಲ, ಪೆಟ್ರೋಲ್, ಡೀಸೆಲ್ ಹಾಗೂ ಇತರ ಪೆಟ್ರೋಲಿಯಂ ಉತ್ಪನ್ನಗಳ ಬಳಕೆಯನ್ನು ಮಿತಿಗೊಳಿಸಿ, ವಿದೇಶ ಪ್ರವಾಸ ಕಡಿಮೆ ಮಾಡಿ ಮತ್ತು ವರ್ಕ್ ಫ್ರಂ ಹೋಮ್ ರೂಢಿಸಿಕೊಳ್ಳಿ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ಅಣಕಿಸಿ ನಟ ಕಿಶೋರ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿರುವ ಅವರು, “ಮುಂದಿನ ಪ್ರಕಟಣೆಯಲ್ಲಿ ಈ ನಾನ್-ಬಯಲಾಜಿಕಲ್ ಸರ್ಕಾರವು ಹಸ್ದೇವ್ನಿಂದ ನಿಕೋಬಾರ್ವರೆಗೆ ನಮ್ಮ ಕಾಡುಗಳನ್ನು ಮಿಸ್ಟರ್ ಎ ಗೆ ಮಾರಾಟ ಮಾಡುವಲ್ಲಿ ನಿರತವಾಗಿದ್ದು, ಭಾರತವನ್ನು ವಿಶ್ವದ ಅತ್ಯಂತ ಕಲುಷಿತ ದೇಶವನ್ನಾಗಿ ಮಾಡಿ, ಮಾಲಿನ್ಯವನ್ನು ನಿಭಾಯಿಸಲು ಅಸಮರ್ಥವಾಗಿರುವುದರಿಂದ ಸಾರ್ವಜನಿಕರು 25% ರಷ್ಟು ಉಸಿರಾಟವನ್ನು ಕಡಿಮೆ ಮಾಡಿ ದೇಶಭಕ್ತಿಯನ್ನು ಪ್ರದರ್ಶಿಸಬೇಕು ಎಂದು ಹೇಳಬಹುದು” ಎಂದು ವ್ಯಂಗ್ಯವಾಡಿದ್ದಾರೆ.
ಪ್ರಧಾನಿ ಮೋದಿ ಅವರ ಹೇಳಿಕೆಯನ್ನು ಉಲ್ಲೇಖಿಸಿ ಕಿಶೋರ್ ಕುಮಾರ್ ಮಾಡಿರುವ ಈ ಪೋಸ್ಟ್ ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ರೋಹಿತ್ ಪಾಂಡುರಂಗಪ್ಪ ಎಂಬವರು ಪ್ರತಿಕ್ರಿಯಿಸಿ, “ಇದನ್ನು ಪ್ರಜ್ಞೆ ಮತ್ತು ಮುನ್ನೆಚ್ಚರಿಕೆಯ ಸಿದ್ಧತೆ ಎಂದು ಕರೆಯುತ್ತಾರೆ. ಸಿಂಗಾಪುರ ಹಾಗೂ ಜಪಾನ್ನಂತಹ ಅಭಿವೃದ್ಧಿ ಹೊಂದಿದ ದೇಶಗಳ ಪ್ರಧಾನಿಗಳೂ ಸಾರ್ವಜನಿಕರಿಗೆ ಮನವಿ ಮಾಡುತ್ತಿದ್ದಾರೆ. ಮಧ್ಯಪ್ರಾಚ್ಯದ ಯುದ್ಧ ಯಾವ ಮಟ್ಟಿಗೆ ವಿಸ್ತರಿಸಬಹುದು ಎಂಬುದು ಯಾರಿಗೂ ಗೊತ್ತಿಲ್ಲ” ಎಂದು ಹೇಳಿದ್ದಾರೆ.
ಪ್ರಶಾಂತ್ ಮಾಲೂರು, “ಕಿಶೋರ್ ಕುಮಾರ್ ಹುಲಿ, ನಿಮ್ಮನ್ನು ಒಳ್ಳೆಯ ಉದ್ದೇಶಗಳಿರುವ ಬುದ್ಧಿವಂತ ನಟ ಎಂದುಕೊಂಡಿದ್ದೆ. ಆದರೆ ಈ ಮಟ್ಟದ ಟೀಕೆ ಅಗ್ಗದ ಹಾಗೂ ಮೂರ್ಖತನದ ನಡೆ” ಎಂದು ಟೀಕಿಸಿದ್ದಾರೆ.
ರೆನಿ ಪ್ಲಕ್ಕಲ್ ವಿಲಿಯಂ ಎಂಬವರು ಪ್ರತಿಕ್ರಿಯಿಸಿ, “ದೇಶ ಸಂಕಷ್ಟದಲ್ಲಿರುವಾಗ ಒಮ್ಮೆ ಆದರೂ ಜವಾಬ್ದಾರಿಯುತ ನಾಗರಿಕರಂತೆ ವರ್ತಿಸಿ. ಪ್ರಧಾನಿ ಮೇಲೆ ದ್ವೇಷವಿದೆ ಎಂಬ ಕಾರಣಕ್ಕೆ ದೇಶವನ್ನು ಸಂಕಷ್ಟಕ್ಕೆ ತಳ್ಳಬೇಡಿ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಶ್ರೀಕಾಂತ್ ಎಂ. ಪದ್ಮನಾಭ, “ನೀವು ಪ್ರೌಢ ವ್ಯಕ್ತಿ ಎಂದು ಭಾವಿಸಿದ್ದೆ. ಆದರೆ ಅನಗತ್ಯ ಹೇಳಿಕೆಗಳನ್ನು ನೀಡುತ್ತಿದ್ದೀರಿ. ಜನರಿಗಾಗಿ ನಿಮ್ಮ ಕೊಡುಗೆ ಶೂನ್ಯ”ಎಂದು ಟೀಕಿಸಿದ್ದಾರೆ.
ರಾಧಾಕೃಷ್ಣ ಕೌಂಡಿನ್ಯ ಎಂಬವರು, “ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುವ ವಿಧಾನವೇ ಕುತರ್ಕವಾಗಿಬಿಟ್ಟಾಗ, ಚರ್ಚೆಯಲ್ಲಿ ಭಾಗವಹಿಸುವ ವ್ಯಕ್ತಿಯ ವ್ಯಕ್ತಿತ್ವ ಕುಸಿಯಲು ಆರಂಭವಾಗುತ್ತದೆ” ಎಂದು ಬರೆದಿದ್ದಾರೆ.