ಜಿಬಿಎ ಚುನಾವಣೆಗೆ ಹೊಸ ಗಡುವು ವಿಧಿಸಿದ ಸುಪ್ರೀಂ ಕೋರ್ಟ್
ಆಗಸ್ಟ್ 31ರ ಒಳಗೆ ಚುನಾವಣೆ ನಡೆಸಲು ಆದೇಶ
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ(ಜಿಬಿಎ) ವ್ಯಾಪ್ತಿಯ ಐದೂ ಪಾಲಿಕೆಗಳಿಗೆ ಚುನಾವಣೆ ನಡೆಸಲು ಸುಪ್ರೀಂ ಕೋರ್ಟ್ ರಾಜ್ಯ ಸರಕಾರಕ್ಕೆ ಹೊಸ ಗಡುವು ವಿಧಿಸಿ ಆದೇಶಿಸಿದೆ.
ಈ ಹಿಂದೆ ಜೂನ್ ಅಂತ್ಯದೊಳಗೆ ಚುನಾವಣೆಗೆ ನಿರ್ದೇಶಿಸಿದ್ದ ಸುಪ್ರೀಂ ಕೋರ್ಟ್ ಆದೇಶದಲ್ಲಿ ಮಾರ್ಪಾಡು ಕೋರಿ ರಾಜ್ಯ ಸರಕಾರ ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ, ಆಗಸ್ಟ್ 31ರ ಒಳಗೆ ಚುನಾವಣೆ ನಡೆಸುವಂತೆ ತಾಕೀತು ಮಾಡಿದೆ.
ಚುನಾವಣೆ ನಡೆಸಲು ಸೆಪ್ಟಂಬರ್ ಅಂತ್ಯದ ವರೆಗೆ ಕಾಲಾವಕಾಶ ಕೋರಿ ಕರ್ನಾಟಕ ಸರಕಾರ ಹಾಗೂ ರಾಜ್ಯ ಚುನಾವಣಾ ಆಯೋಗ ಮನವಿ ಸಲ್ಲಿಸಿದ್ದವು. ಮನವಿ ಆಲಿಸಿದ ಸಿಜೆಐ ಅವರನ್ನು ಒಳಗೊಂಡ ನ್ಯಾಯಪೀಠ ಹೊಸ ಗಡುವು ವಿಧಿಸಿದೆ.
ರಾಜ್ಯ ಸರಕಾರ ಮತ್ತು ರಾಜ್ಯ ಚುನಾವಣಾ ಆಯೋಗ ಸಲ್ಲಿಸಿದ್ದ ಎರಡು ಪ್ರತ್ಯೇಕ ಅರ್ಜಿಗಳಲ್ಲಿ, ರಾಜ್ಯ ಸಿಬ್ಬಂದಿಯು ಜನಗಣತಿ, ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್), ಎಸೆಸೆಲ್ಸಿ ಮತ್ತು ಪಿಯುಸಿ ಮಂಡಳಿ ಪರೀಕ್ಷೆಗಳು ಇತ್ಯಾದಿಗಳಲ್ಲಿ ನಿರತರಾಗಿದ್ದಾರೆ. ಹೀಗಾಗಿ, ಜೂನ್ 30ರಿಂದ ಅನ್ವಯವಾಗುವಂತೆ ಹೆಚ್ಚುವರಿ ಮೂರು ತಿಂಗಳ ಸಮಯಾವಕಾಶ ಕೋರಿದ್ದವು.
ಜೂನ್ 30ರೊಳಗೆ ಚುನಾವಣೆಗಳನ್ನು ಪೂರ್ಣಗೊಳಿಸಲು ನಿರ್ದೇಶಿಸಿ ಜನವರಿ 12ರಂದು ಸುಪ್ರೀಂ ಕೋರ್ಟ್ ಹೊರಡಿಸಿದ್ದ ಆದೇಶವನ್ನು ಮಾರ್ಪಡು ಮಾಡುವಂತೆ ಅರ್ಜಿಯಲ್ಲಿ ಕೋರಲಾಗಿತ್ತು.
ಅದರಂತೆ ಹೊಸ ಗಡುವು ವಿಧಿಸಿ ಸುಪ್ರೀಂ ಕೋರ್ಟ್ ಆದೇಶಿಸಿದೆ.