×
Ad

ವಕ್ಫ್ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಜನಾಭಿಪ್ರಾಯ ಸಂಗ್ರಹ ಅಗತ್ಯ: ಶಿವಸುಂದರ್

Update: 2025-06-23 23:38 IST

ಬೆಂಗಳೂರು: ಸಂವಿಧಾನ ವಿರೋಧಿ ವಕ್ಫ್ ತಿದ್ದುಪಡಿ ಕಾಯ್ದೆ-2025ನ್ನು ವಿರೋಧಿಸಿ ಜನಾಭಿಪ್ರಾಯ ಸಂಗ್ರಹಿಸಬೇಕು. ಜತೆಗೆ ಬೀದಿಗಿಳಿದು ಹೋರಾಟ ನಡೆಸಬೇಕು ಎಂದು ಅಂಕಣಕಾರ ಶಿವಸುಂದರ್ ಸಲಹೆ ಮಾಡಿದ್ದಾರೆ.

ಸೋಮವಾರ ನಗರದ ಶಾಸಕರ ಭವನದಲ್ಲಿ ‘ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್’ ವತಿಯಿಂದ ನಡೆದ ‘ದುಂಡು ಮೇಜಿನ ಸಭೆ’ಯಲ್ಲಿ ಮಾತನಾಡಿದ ಅವರು, ಕಾನೂನುಗಳನ್ನು ರಚನೆ ಮಾಡುವುದು ಸಮುದಾಯಗಳ ಸಬಲೀಕರಣಕ್ಕೆ ಆದರೆ ವಕ್ಫ್ ತಿದ್ದುಪಡಿ ಕಾಯ್ದೆಯ ಮೂಲಕ ಡಿ-ಇಸ್ಲಾಮೈಸ್ ಮಾಡಲಾಗುತ್ತಿದೆ. ಮುಸ್ಲಿಂರ ನಂತರ ಕ್ರೈಸ್ತರು, ಬೌದ್ಧ ಧರ್ಮವನ್ನು ಗುರಿಯಾಗಿಸಿಕೊಂಡು ಸಮಾಜವನ್ನು ಬ್ರಾಹ್ಮಣೀಕರಣಗೊಳಿಸಲಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಕ್ಫ್ ಅನ್ನು ಯಾರು ಬೇಕಾದರೂ ಮಾಡಬಹುದು. ಆದರೆ ಬೇರೆಯವರ ಆಸ್ತಿಯನ್ನು ವಕ್ಫ್ ಮಾಡಲು ಸಾಧ್ಯವಿಲ್ಲ. ಅನೇಕ ರಾಜಮಹಾರಾಜರು ವಕ್ಫ್ ಮಾಡಿದ್ದಾರೆ. ಕೋಟ್ಯಾಂತರ ರೂ. ವಕ್ಫ್ ಆಸ್ತಿ ಆದಾಗ ಅದಕ್ಕೆ ಒಂದು ನಿಗದಿತ ವಕ್ಫ್ ಮಂಡಳಿಯನ್ನು ಮಾಡಲಾಯಿತು. 1995ರ ವಕ್ಫ್ ಬೋರ್ಡ್ ಕಾಯ್ದೆ ಸ್ಪಷ್ಟವಾಗಿ ಹೇಳಿದೆ. ವಕ್ಫ್ ಮಂಡಳಿ ಧಾರ್ಮಿಕ ಸಂಸ್ಥೆಯಾಗಿರುವುದರಿಂದ ಸಂವಿಧಾನದ ಪ್ರಕಾರ ಅದನ್ನು ಆ ಧರ್ಮದವರೇ ನಿರ್ವಹಣೆ ಮಾಡಬೇಕು. ಇದು ಸಂವಿಧಾನಾತ್ಮಕ ಹಕ್ಕು ಎಂದರು.

ಮಂತ್ರಿಗಳನ್ನು ಬಿಟ್ಟರೆ ವಕ್ಫ್ ಬೋರ್ಡ್‍ನಲ್ಲಿ ಎಲ್ಲರೂ ಮುಸ್ಲಿಮರೇ ಇರಬೇಕು ಎನ್ನುವುದು 1995ರ ಕಾಯ್ದೆ ಹೇಳುತ್ತದೆ. ಯಾವುದು ವಕ್ಫ್ ಎನ್ನುವುದನ್ನು ಸರ್ವೇ ಆಯುಕ್ತರು ನಿರ್ಧಾರ ಮಾಡುತ್ತಾರೆ. ಸರ್ವೇ ಆಯುಕ್ತರನ್ನು ಸರಕಾರಗಳು ನೇಮಕ ಮಾಡುತ್ತವೆ. ಸರ್ವೇಯನ್ನು ಮುಸ್ಲಿಮರೇ ಮಾಡಿಕೊಳ್ಳುವುದಿಲ್ಲ. ಈ ಕುರಿತು ಅನೇಕರಲ್ಲಿ ತಪ್ಪು ಕಲ್ಪನೆಗಳಿವೆ ಎಂದು ಶಿವಸುಂದರ್ ಹೇಳಿದರು.

ಯಾವುದೇ ಆಸ್ತಿಯನ್ನು ವಕ್ಫ್ ಎಂದು ನಿರ್ಧಾರ ಮಾಡಿದ ನಂತರ ಯಾರಿಗಾರೂ ಆಕ್ಷೇಪ ಇದ್ದರೆ ವಕ್ಫ್ ನ್ಯಾಯ ಮಂಡಳಿಯಲ್ಲಿ ಯಾರಾದರೂ ಪ್ರಶ್ನಿಸಬಹುದು. ವಕ್ಫ್ ನ್ಯಾಯ ಮಂಡಳಿಯಲ್ಲಿಯೂ ನ್ಯಾಯ ಸಿಗದಿದ್ದರೆ, ಹೈಕೋರ್ಟ್‍ಗೆ ಕೂಡ ಹೋಗಬಹುದು. ಆದರೆ ಬಿಜೆಪಿಯವರು ವಕ್ಫ್ ನ್ಯಾಯ ಮಂಡಳಿ ಆದೇಶಗಳನ್ನು ಯಾರೂ, ಎಲ್ಲಿಯೂ ಪ್ರಶ್ನಿಸಲು ಸಾಧ್ಯವಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದರು.

2025ರ ವಕ್ಫ್ ತಿದ್ದುಪಡಿ ಕಾಯ್ದೆಯಲ್ಲಿ 2025ರ ತಿದ್ದುಪಡಿಯಾದ ಮೇಲೆ ಕೂಡ ಇದುವರೆಗೂ ನೋಂದಣಿಯಾಗಿರುವ ವಕ್ಫ್ ಆಸ್ತಿಯನ್ನು ರದ್ದುಗೊಳಿಸುವುದಿಲ್ಲ. ನಂತರ ನೋಂದಣಿ ಮಾಡಲು ಮುತಾವಲ್ಲಿಗಳು ಯಾರು ವಕ್ಫ್ ಮಾಡಿದ್ದಾರೆ. ಮತ್ತು ಯಾವಾಗ ವಕ್ಫ್ ಮಾಡಿದ್ದಾರೆ ಎನ್ನುವ ದಿನಾಂಕವನ್ನು ನೀಡಬೇಕು ಎಂಬ ನಿಬಂಧನೆಗಳಿವೆ. 800 ವರ್ಷಗಳ ಹಿಂದೆ ಯಾರು ವಕ್ಫ್ ಮಾಡಿದ್ದು ಎಂದು ಯಾರಿಗೆ ಗೊತ್ತಿರುತ್ತದೆ ಎಂದು ಪ್ರಶ್ನಿಸಿದರು.

ವಕೀಲ ಎಂ.ಕೆ.ಮೇತ್ರಿ ಮಾತನಾಡಿ, ಮುಸ್ಲಿಂರ ಧಾರ್ಮಿಕ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ಸರಕಾರಿ ಆಸ್ತಿಯನ್ನಾಗಿ ಮಾಡುವ ಕೆಲಸ ನಡೆಯುತ್ತಿದೆ. ನಿಜಕ್ಕೂ ಕೂಡ ಇದು ಮುಸ್ಲಿಂ ಸಮುದಾಯಕ್ಕೆ ಮಾಡುವ ದ್ರೋಹ. ಯಾವುದೇ ವ್ಯಕ್ತಿ ವಕ್ಫ್ ಆಸ್ತಿಯಲ್ಲಿ ವಸತಿ ನಿರ್ಮಾಣ ಮಾಡಿಕೊಂಡಿದ್ದರೆ, ಅದನ್ನು ಬಿಡಲು ಸಾಧ್ಯವಿಲ್ಲ. ಎಲ್ಲರಿಗೂ ವಸತಿ ಹಕ್ಕು ಇರುತ್ತದೆ ಆದರೆ ಅದನ್ನು ನೀಡಬೇಕಿರುವುದು ಸರಕಾರವೇ ಹೊರತು ವಕ್ಫ್ ಅಲ್ಲ. ಸರಕಾರಗಳು ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಅವರು ತಿಳಿಸಿದರು.

ಸಭೆಯಲ್ಲಿ ಸಿಖ್ ವೈಯಕ್ತಿಕ ಕಾನೂನು ಮಂಡಳಿಯ ಅಧ್ಯಕ್ಷ ಜಗಮೋಹನ್ ಸಿಂಗ್, ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯಾಧ್ಯಕ್ಷ ಡಾ.ಮುಹಮ್ಮದ್ ಸಾದ್ ಬೆಲ್ಗಾಮಿ, ವಕೀಲೆ ಅಫ್ಸರ್ ಝಹಾನ್, ರೈತ ಹೋರಾಟಗಾರರಾದ ಬಡಗಲಪುರ ನಾಗೇಂದ್ರ, ವೀರಸಂಗಯ್ಯ, ನೂರ್ ಶ್ರೀಧರ್ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News