ರೇಣುಕಾಸ್ವಾಮಿ ಹತ್ಯೆ ಪ್ರಕರಣ: ನಟ ದರ್ಶನ್, ಪವಿತ್ರಗೌಡ ಕೋರ್ಟಿಗೆ ಹಾಜರು
Update: 2025-05-20 20:30 IST
ನಟ ದರ್ಶನ್ (File Photo)
ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಚಿತ್ರನಟ ದರ್ಶನ್ ಹಾಗೂ ಪವಿತ್ರಾ ಗೌಡ ನ್ಯಾಯಾಲಯಕ್ಕೆ ಹಾಜರಾದರು.
ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ವಿಚಾರಣೆ ಮುಂದುವರಿದಿದೆ.ಅದರಂತೆ ಮಂಗಳವಾರ ಇಲ್ಲಿನ 57ನೆ ಸಿಸಿಹೆಚ್ ನ್ಯಾಯಾಲಯದ ಎದುರು ಆರೋಪಿಗಳಾದ ದರ್ಶನ್ ಹಾಗೂ ಪವಿತ್ರಾ ಗೌಡ ಹಾಜರಾಗಿದ್ದಾರೆ.
ಕಳೆದ ಬಾರಿ ವಿಚಾರಣೆಗೆ ನಟ ದರ್ಶನ್ ಗೈರಾಗಿದ್ದರು. ಹೀಗಾಗಿ, ಅಸಮಾಧಾನ ವ್ಯಕ್ತಪಡಿಸಿದ್ದ ನ್ಯಾಯಾಲಯ, ಆರೋಪಿಗಳು ಕಡ್ಡಾಯವಾಗಿ ವಿಚಾರಣೆಗೆ ಹಾಜರಾಗಬೇಕು ಎಂದು ದರ್ಶನ್ ಪರ ವಕೀಲರಿಗೆ ಸೂಚಿಸಿತ್ತು. ಅದರಂತೆ, ಇಂದಿನ ವಿಚಾರಣೆಗೆ ನಟ ದರ್ಶನ್ ಅವರು ಖುದ್ದು ಹಾಜರಾಗಿದ್ದಾರೆ.
ಮತ್ತೊಂದೆಡೆ, ಆರೋಪಿ ಪವಿತ್ರಾ ಗೌಡ ಸಹ ವಿಚಾರಣೆಗೆ ಹಾಜರಾಗಿದ್ದಾರೆ. ಪ್ರಕರಣ ಸಂಬಂಧ ಜುಲೈ 10ಕ್ಕೆ ವಿಚಾರಣೆ ಮುಂದೂಡಿರುವ ನ್ಯಾಯಾಲಯ, ಅಂದು ಎಲ್ಲ ಆರೋಪಿಗಳಿಗೂ ಹಾಜರಾಗುವಂತೆ ಸೂಚಿಸಿದೆ.