×
Ad

‘ಮೀಸಲಾತಿ’ ಕಾಂಗ್ರೆಸ್ ಸರಕಾರದಿಂದ ನಿರಂತರ ಅನ್ಯಾಯ: ಗೋವಿಂದ ಕಾರಜೋಳ

Update: 2024-01-18 20:50 IST

ಬೆಂಗಳೂರು: ಮೀಸಲಾತಿ ವಿಷಯದಲ್ಲಿ ಸಿದ್ದರಾಮಯ್ಯರ ನೇತೃತ್ವದ ಕಾಂಗ್ರೆಸ್ ಸರಕಾರವು ನಿರಂತರ ಅನ್ಯಾಯ ಮಾಡಿದೆ ಎಂದು ಮಾಜಿ ಡಿಸಿಎಂ ಗೋವಿಂದ ಕಾರಜೋಳ ಆರೋಪಿಸಿದರು.

ಗುರುವಾರ ನಗರದಲ್ಲಿ ಮಾತನಾಡಿದ ಅವರು, ‘ಮಾದಿಗರಿಗೆ ಅನ್ಯಾಯ ಆಗಿದೆ. ಗೆದ್ದ ಬಳಿಕ ಮೊದಲ ಸಂಪುಟದಲ್ಲೇ ಅನ್ಯಾಯ ಸರಿಪಡಿಸುವುದಾಗಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ ಎಲ್ಲರೂ ಸೇರಿ ಚುನಾವಣೆ ವೇಳೆ ತಿಳಿಸಿದ್ದರು. 8 ತಿಂಗಳಾದರೂ ಮೀಸಲಾತಿ ಬಗ್ಗೆ ಯಾವುದೇ ಶಬ್ದ ಮಾತನಾಡಿಲ್ಲ. ಲೋಕಸಭಾ ಚುನಾವಣೆ ಹತ್ತಿರ ಬರುವ ಕಾರಣ ಕೇಂದ್ರಕ್ಕೆ ಆರ್ಟಿಕಲ್ 341ಗೆ ತಿದ್ದುಪಡಿಗೆ ಶಿಫಾರಸು ಮಾಡುವ ಮಾತನಾಡುತ್ತಿದೆ’ ಎಂದು ಟೀಕಿಸಿದರು.

‘ಸಂವಿಧಾನದ ಆರ್ಟಿಕಲ್ 341ಗೆ ತಿದ್ದುಪಡಿ ಅಗತ್ಯವೇ ಇಲ್ಲ. ಈಗಾಗಲೇ ನ್ಯಾ.ಅರುಣ್‍ಕುಮಾರ್ ಮಿಶ್ರಾ ಅವರು, ರಾಜ್ಯ ಸರಕಾರಕ್ಕೆ ಅಧಿಕಾರ ಇದೆ. ಒಳ ಮೀಸಲಾತಿ ಕೊಡಲು ಅಧಿಕಾರ ಇದೆ. ಹೆಚ್ಚುವರಿ ಸೇರಿಸಲು ಅಥವಾ ಇದ್ದಂಥ ಜಾತಿಗಳನ್ನು ತೆಗೆಯಲು ಅವಕಾಶ ಇಲ್ಲ ಎಂದು ತೀರ್ಪು ನೀಡಿದ್ದಾರೆ. ಆದರೆ, ಅವರು ಸುಪ್ರೀಂ ಕೋರ್ಟಿನ ವಿಸ್ತೃತ ನ್ಯಾಯಪೀಠಕ್ಕೆ ಕೊಡಲು ತಿಳಿಸಿದ್ದಾರೆ. ಕೇಂದ್ರ ಸರಕಾರವು ಈಗಾಗಲೇ ವಿಸ್ತೃತ ನ್ಯಾಯಪೀಠಕ್ಕೆ ವಿಷಯವನ್ನು ಮುಂದಿಟ್ಟಿದೆ ಎಂದು ತಿಳಿಸಿದರು. ಸಿದ್ದರಾಮಯ್ಯನವರು ಚುನಾವಣೆ ಬಂದಾಗ ಗಿಮಿಕ್, ಮೋಸದಾಟವನ್ನು ಮಾಡುತ್ತಿದ್ದು, ಈ ಮೋಸದಾಟ ಬಿಡಿ. ನಿಮಗೆ ನಿಜವಾದ ಇಚ್ಛಾಶಕ್ತಿ ಇದ್ದರೆ ನಾಳೆಯೇ ಒಂದು ಆದೇಶ ಮಾಡಿ. ಒಳಮೀಸಲಾತಿ ಜಾರಿಗೊಳಿಸಿ. ನಿಮ್ಮನ್ನು ಯಾರೂ ತಡೆಯಲು ಅಸಾಧ್ಯ. ಜಾತಿ-ಜಾತಿಗಳ ಮಧ್ಯೆ ವಿಷಬೀಜ ಬಿತ್ತುವ ಮೋಸದಾಟ ಮಾಡುತ್ತಿದ್ದೀರಿ ಎಂದು ಅವರು ಆಕ್ಷೇಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News