ಆಂಧ್ರದಲ್ಲಿ ಭೀಕರ ರಸ್ತೆ ಅಪಘಾತ; ಕೋಲಾರದ ಐವರು ಮೃತ್ಯು
ಕೋಲಾರ : ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಯಮ್ಮಿಗನೂರು ಬಳಿ ಶನಿವಾರ ಮುಂಜಾನೆ ಎರಡು ಕಾರುಗಳ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಕೋಲಾರ ಜಿಲ್ಲೆಯ ಒಂದೇ ಕುಟುಂಬದ ಇಬ್ಬರು ಮಕ್ಕಳ ಸಹಿತ ಐವರು ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಮೃತರನ್ನು ಕೋಲಾರ ಜಿಲ್ಲೆಯ ಚಿಕ್ಕಹೊಸಹಳ್ಳಿ ಗ್ರಾಮದ ವೆಂಕಟೇಶಪ್ಪ(60), ಅವರ ಪುತ್ರಿ ಮೀನಾಕ್ಷಿ(32), ಅಳಿಯ ಸತೀಶ್(36) ಮತ್ತು ಮೊಮ್ಮಕ್ಕಳಾದ ರುತ್ವಿಕ್ ಗೌಡ(3) ಮತ್ತು ಭುವಿತ್ ಗೌಡ(5) ಎಂದು ಗುರುತಿಸಲಾಗಿದೆ. ಇವರು ಶ್ರೀ ರಾಘವೇಂದ್ರ ಸ್ವಾಮಿಯ ದರ್ಶನಕ್ಕಾಗಿ ಮಂತ್ರಾಲಯಕ್ಕೆ ಪ್ರಯಾಣಿಸುತ್ತಿದ್ದಾಗ ದುರಂತ ಸಂಭವಿಸಿದೆ ಎಂದು ಸ್ಥಳೀಯ ಪೊಲೀಸ್ ಮೂಲಗಳು ತಿಳಿಸಿವೆ.
ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಯಮ್ಮಿಗನೂರು ಮಂಡಲದ ಕೋಟೆಕಲ್ ತಿರುವು ಬಳಿ ಫಾರ್ಚೂನರ್ ಮತ್ತು ಮಾರುತಿ ಸ್ವಿಫ್ಟ್ ಡಿಸೈರ್ ಕಾರು ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಸ್ವಿಫ್ಟ್ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಫಾರ್ಚೂನರ್‌ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಗಂಭೀರ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಹತ್ತಿರದ ಅಧೋನಿ ಆಸ್ಪತ್ರೆಗೆ ದಾಖಲಿಸಿ ಸ್ಥಳೀಯ ಪೊಲೀಸರು ಮುಂದಿನ ಕ್ರಮವಹಿಸಿದ್ದಾರೆ.