ರಾಜ್ಯದ 518 ಕಡೆಗಳಲ್ಲಿ ಆರೆಸ್ಸೆಸ್ ಪಥ ಸಂಚಲನ: ಸದನದಲ್ಲಿ ಮಾಹಿತಿ ನೀಡಿದ ಗೃಹ ಇಲಾಖೆ
ಬೆಳಗಾವಿ(ಸುವರ್ಣ ವಿಧಾನಸೌಧ), ಡಿ. 10: ‘ರಾಜ್ಯದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರೆಸ್ಸೆಸ್) ಪಥಸಂಚಲನ ವಿಚಾರಕ್ಕೆ ಪರ-ವಿರೋಧ ಚರ್ಚೆಯ ಬೆನ್ನಲ್ಲೇ 2025ನೇ ಸಾಲಿನಲ್ಲಿ ಒಟ್ಟು 518 ಕಡೆಗಳಲ್ಲಿ ಆರೆಸ್ಸೆಸ್ ಪಥಸಂಚಲನ ನಡೆದಿದೆ. ಆದರೆ ಯಾವುದೇ ಗಲಾಟೆ, ದೊಂಬಿ, ಕೋಮುಗಲಭೆ ನಡೆದಿಲ್ಲ’ ಎಂದು ಗೃಹ ಇಲಾಖೆ ತಿಳಿಸಿದೆ.
ಬುಧವಾರ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ವಿ.ಸುನೀಲ್ ಕುಮಾರ್ ಕೇಳಿದ ಚುಕ್ಕೆ ಗುರುತ್ತಿಲ್ಲದ ಪ್ರಶ್ನೆಗೆ ಉತ್ತರ ನೀಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಆರೆಸ್ಸೆಸ್ ಪಥಸಂಚಲನ ಸಂದರ್ಭದಲ್ಲಿ ಎಲ್ಲಿಯೂ ಗಲಾಟೆ, ದೊಂಬಿ ನಡೆದಿಲ್ಲ ಎಂದು ತಿಳಿಸಿದ್ದಾರೆ. ಆರೆಸ್ಸೆಸ್ ಪಥಸಂಚಲನಕ್ಕೆ ಅವಕಾಶ ಕಲ್ಪಿಸುವ ಸಂಬಂಧ ಪರ-ವಿರೋಧ ಚರ್ಚೆಗಳು ನಡೆಯುತ್ತಿದ್ದು, ರ್‍ಯಾಲಿಗೆ ಅವಕಾಶ ಕಲ್ಪಿಸುವ ವಿಚಾರ ಕೋರ್ಟ್ ಮೆಟ್ಟಿಲೇರಿದ ಪ್ರಸಂಗವೂ ನಡೆದಿತ್ತು.
ಬೆಂಗಳೂರಿನಲ್ಲಿ ನಡೆದ ಆರೆಸ್ಸೆಸ್ ಪಥಸಂಚಲನದಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ಸೇರಿದಂತೆ ಬಿಜೆಪಿಯ ಹಲವು ನಾಯಕರು ಭಾಗಿಯಾಗಿದ್ದರು. ಇದೇ ವೇಳೆ ಅನುಮತಿಯನ್ನು ಪಡೆಯದೆ ಪಥಸಂಚಲನ ನಡೆಸಲು ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂಬ ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಹಲವರು ಆಗ್ರಹಿಸಿದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಈ ವಿಚಾರ ವಿವಾದದ ಸ್ವರೂಪವನ್ನು ಪಡೆದುಕೊಂಡಿತ್ತು.
ಬೆಂಗಳೂರು ನಗರದಲ್ಲಿ ಅತ್ಯಂತ ಹೆಚ್ಚು 97 ಪಥ ಸಂಚಲನಗಳು ನಡೆದಿದ್ದು, ಒಟ್ಟು 30 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರೆ, ಕಲಬುರಗಿಯಲ್ಲಿ ಒಟ್ಟು 50ಕ್ಕೂ ಹೆಚ್ಚು ನಡೆದಿದ್ದು, ಬೀದರ್ ನಲ್ಲಿ 40ಕ್ಕೂ ಹೆಚ್ಚು ಪಥ ಸಂಚಲನಗಳು ನಡೆದಿವೆ. ಉಳಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 10 ಪಥಸಂಚಲನ ನಡೆದಿದ್ದು, ಒಟ್ಟು 8,410 ಮಂದಿ ಸ್ವಯಂ ಸೇವಕರು ಪಾಲ್ಗೊಂಡಿದ್ದಾರೆಂದು ಇಲಾಖೆ ವಿವರ ನೀಡಿದೆ.