×
Ad

ಬಾಕಿ ಇರುವ ಕಾರ್ಮಿಕ ಕಾರ್ಡ್ ವಿಲೇವಾರಿಗೆ ಕ್ರಮ: ಸಚಿವ ಸಂತೋಷ್‌ ಲಾಡ್

Update: 2025-12-10 13:34 IST

ಸಂತೋಷ್‌ ಲಾಡ್

ಬೆಳಗಾವಿ(ಸುವರ್ಣ ವಿಧಾನಸೌಧ), ಡಿ. 10: ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನಲ್ಲಿ ಮಂಜೂರಾತಿಗೆ ಬಾಕಿ ಇರುವ ಕಾರ್ಮಿಕ ಕಾರ್ಡ್‍ಗಳಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್ ಭರವಸೆ ನೀಡಿದರು.

ಬುಧವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಆಡಳಿತ ಪಕ್ಷದ ಸದಸ್ಯ ಯು.ಬಿ.ಬಣಕಾರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಹಿರೇಕೆರೂರು ತಾಲೂಕಿನಲ್ಲಿ 15,910 ಸಕ್ರಿಯ ಕಾರ್ಡ್‍ಗಳು ಇವೆ. ಈಗ 3,115 ಅರ್ಜಿಗಳು ಬಂದಿವೆ. ಆಪೈಕಿ 2,625 ವಿಲೇ ಮಾಡಲಾಗಿದೆ. ಶೇ.80ರಷ್ಟು ಕಾರ್ಡ್‍ಗಳಿಗೆ ಅನುಮೋದನೆ ನೀಡಲಾಗಿದೆ. ಉಳಿದವುಗಳನ್ನು ವಿಲೇವಾರಿ ಮಾಡಲು ಕೋರಿದ್ದಾರೆ ಎಂದು ಹೇಳಿದರು.

ತಾಲೂಕಿನಲ್ಲಿ ಬಾಕಿ ಉಳಿದ ಅರ್ಜಿಗಳ ಪರಿಶೀಲನೆ ನಡೆಸಲಾಗುವುದು. ಹಾವೇರಿ ಜಿಲ್ಲೆಯಲ್ಲಿ ಈ ಹಿಂದೆ ಗಣನೀಯ ಪ್ರಮಾಣದಲ್ಲಿ ನಕಲಿ ಕಾರ್ಮಿಕ ಕಾರ್ಡ್‍ಗಳು ನೋಂದಣಿಯಾಗಿದ್ದವು. ಹೊಸ ಕಾರ್ಡ್‍ಗಳ ಅರ್ಜಿಯನ್ನು ಇಲಾಖೆಯ ಅಧಿಕಾರಿಗಳು ಖುದ್ದು ಭೇಟಿ ನೀಡಿ ತಪಾಸಣೆ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಯಾವುದೇ ತೊಂದರೆ ಇದ್ದರೆ ತಕ್ಷಣ ಪರಿಹಾರ ಮಾಡಲಾಗುವುದು ಎಂದು ಭರವಸೆ ನೀಡಿದರು.

ಶ್ಲಾಘನೆ :

ಹಾವೇರಿ ಜಿಲ್ಲೆಯಲ್ಲಿ ನಕಲಿ ಕಾರ್ಮಿಕ ಕಾರ್ಡ್‍ಗಳ ರದ್ದುಪಡಿಸುವಲ್ಲಿ ಸಚಿವ ಸಂತೋಷ್‌ ಲಾಡ್ ಪ್ರಮುಖ ಪಾತ್ರ ವಹಿಸಿದರು ಎಂದು ಯು.ಬಿ.ಬಣಕಾರ್ ಶ್ಲಾಘಿಸಿದರು. ಜಿಲ್ಲೆಯಲ್ಲಿ, ಕಾರ್ಮಿಕ ಕಾರ್ಡ್‍ಗಳ ಅಕ್ರಮ ತಡೆಗಟ್ಟುವಲ್ಲಿ ಕ್ರಮ ಕೈಗೊಂಡರು. ಇನ್ನು ಕೆಲವೇ ದಿನಗಳಲ್ಲಿ ಜಿಲ್ಲೆಯಲ್ಲಿ ನಕಲಿ ಕಾರ್ಮಿಕ ಕಾರ್ಡ್‍ಗಳು ಸಂಪೂರ್ಣವಾಗಿ ರದ್ದಾಗಲಿವೆ. ಇದರ ಹಿಂದೆ ಲಾಡ್ ಅವರ ಶ್ರಮವಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News