ನನ್ನನ್ನು ಪ್ರಿಯಾಂಕಾ ಎಂದು ಕರೆಯುತ್ತಾರೆ: ಸದನದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹಾಸ್ಯ
ಪ್ರಿಯಾಂಕ್ ಖರ್ಗೆ
ಬೆಳಗಾವಿ(ಸುವರ್ಣ ವಿಧಾನಸೌಧ), ಡಿ. 10: ‘ಹೆಸರು ಬದಲಾವಣೆ ಮಾಡಿದರೆ ಏನಾಗುತ್ತದೆ ಎಂದು ನನಗಿಂತ ಬೇರೆ ಉದಾಹರಣೆಯೇ ಇಲ್ಲ. ಪ್ರಿಯಾಂಕ್ ಖರ್ಗೆ ನನ್ನ ಹೆಸರು. ಆದರೆ, ಪ್ರಿಯಾಂಕಾ ಪ್ರಿಯಾಂಕಾ ಎಂದು ನನ್ನ ಲಿಂಗವನ್ನೇ ಬದಲು ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅಲವತ್ತುಕೊಂಡ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು.
ಬುಧವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಆಡಳಿತ ಪಕ್ಷದ ಸದಸ್ಯ ತಮ್ಮಯ್ಯ ಎಚ್.ಡಿ. ಅವರ ಹೆಸರನ್ನು ಸಚಿವ ಪ್ರಿಯಾಂಕ್ ಖರ್ಗೆ, ‘ತಿಮ್ಮಯ್ಯ’ ಎಂದು ಉಚ್ಚರಿಸಿದರು. ಇದಕ್ಕೆ ಆಕ್ಷೇಪಿಸಿದ ಸದಸ್ಯ ತಮ್ಮಯ್ಯ, ಸ್ಪೀಕರ್ ಅವರೇ ನನ್ನ ಹೆಸರನ್ನು ತಾವು ತಿಮ್ಮಯ್ಯ ಎಂದು ಕರೆದ ಪರಿಣಾಮ ಎಲ್ಲರೂ ನನ್ನನ್ನು ತಿಮ್ಮಯ್ಯ ಎಂದು ಕರೆಯುತ್ತಿದ್ದು, ನನ್ನ ಹೆಸರೇ ಬದಲಾಗಿದೆ ಎಂದು ಗಮನ ಸೆಳೆದರು.
ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ಯು.ಟಿ. ಖಾದರ್ ಅವರು, ತಮ್ಮ ಹೆಸರು ತಪ್ಪಾಗಿ ಕರೆದಿದ್ದು ಸರಿಯಲ್ಲ. ನಿಮ್ಮ ಹೆಸರು ತಮ್ಮಯ್ಯ ಎಂದು. ಹೀಗಾಗಿ ಸದನದ ಕಲಾಪದಲ್ಲಿ ಸದಸ್ಯರ ಹೆಸರನ್ನು ಯಾರೂ ತಪ್ಪಾಗಿ ಕರೆಯಬಾರದು. ಒಂದು ವೇಳೆ ಯಾರಾದರೂ ತಪ್ಪಾಗಿ ಹೆಸರು ಕರೆದರೆ ಅವರಿಗೆ ದಂಡವನ್ನು ವಿಧಿಸಲಾಗುವುದು ಎಂದು ಚಟಾಕಿ ಹಾರಿಸಿದರು.
ಬಳಿಕ ಉತ್ತರಿಸಲು ಎದ್ದುನಿಂತ ಸಚಿವ ಪ್ರಿಯಾಂಕ್ ಖರ್ಗೆ, ‘ಸದಸ್ಯರ ಹೆಸರನ್ನು ತಪ್ಪಾಗಿ ಕರೆದೆ ಕ್ಷಮೆ ಇರಲಿ. ಹೆಸರು ತಪ್ಪಾದರೆ ಏನಾಗುತ್ತದೆ ಎಂಬುದಕ್ಕೆ ನನಗಿಂತ ಬೇರೆ ಉದಾಹರಣೆಯೇ ಇಲ್ಲ. ನನ್ನ ಹೆಸರು ಪ್ರಿಯಾಂಕ್ ಖರ್ಗೆ. ಆದರೆ, ಪ್ರಿಯಾಂಕಾ ಪ್ರಿಯಾಂಕಾ ಎಂದು ನನ್ನ ಲಿಂಗವನ್ನೇ ಬದಲು ಮಾಡಿದ್ದಾರೆ’ ಎಂದು ಮಸಾಲೆ ಬೆರೆಸಿದ್ದು ಸದನದಲ್ಲಿ ಹಾಸ್ಯಕ್ಕೆ ನಾಂದಿಯಾಯಿತು.
ಸರಕಾರದಿಂದ ಉತ್ತರ ಪಡೆದ ಸದಸ್ಯರು ‘ಸಮರ್ಥ ಮಂತ್ರಿ ಎಂದು ಮೆಚ್ಚುಗೆ ಸೂಚಿಸಿದ ಬಳಿಕ ಆದರೆ, ಅಂದ್ರೆನೇ ಸಮಸ್ಯೆ. ಸಮರ್ಥ ಎಂದು ಹೇಳಿದ ನಂತರ ಆದರೆ ಎಂಬ ಪ್ರಶ್ನೆ ಏಕೇ?. ಏನೇ ಆದರೂ ಸರಕಾರ ಸದಸ್ಯರ ಪ್ರಶ್ನೆಗೆ ಸೂಕ್ತ ಉತ್ತರವನ್ನು ನೀಡಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ, ಸದಸ್ಯ ತಮ್ಮಯ್ಯ ಪ್ರಸ್ತಾಪಕ್ಕೆ ಪ್ರತಿಕ್ರಿಯೆ ನೀಡಿದರು.