×
Ad

ದ್ವೇಷ ಭಾಷಣ, ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ ಮಂಡನೆ

ವಿಧೇಯಕದಲ್ಲಿ ಏನಿದೆ?: ಇಲ್ಲಿದೆ ವಿವರ

Update: 2025-12-10 13:31 IST

ಬೆಳಗಾವಿ(ಸುವರ್ಣ ವಿಧಾನಸೌಧ): ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ, 2025 ಅನ್ನು ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರು ಸಭೆಯಲ್ಲಿಂದು ಮಂಡಿಸಿದರು.

ರಾಜ್ಯದಲ್ಲಿ ದ್ವೇಷ ಭಾಷಣಗಳಿಗೆ ಕಡಿವಾಣ ಹಾಕಲು ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ(ಪ್ರತಿಬಂಧಕ) ವಿಧೇಯಕ- 2025ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಡಿ.4ರಂದು ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿತ್ತು.

ವಿಧೇಯಕದಲ್ಲಿ ಏನಿದೆ?:

ದ್ವೇಷ ಭಾಷಣದ ಪ್ರಸರಣೆ, ಪ್ರಕಟನೆ ಅಥವಾ ಪ್ರಚಾರವನ್ನು ಮತ್ತು ಸಮಾಜದಲ್ಲಿ ನಿರ್ದಿಷ್ಟ ವ್ಯಕ್ತಿ ಅಥವಾ ವ್ಯಕ್ತಿಗಳ ಸಮೂಹ ಅಥವಾ ಸಂಸ್ಥೆಗಳ ವಿರುದ್ಧ ಅಸಾಮರಸ್ಯ ದ್ವೇಷವನ್ನು ಹುಟ್ಟಿಸುವಂಥ ಅಪರಾಧಗಳನ್ನು ಪ್ರತಿಬಂಧಿಸುವುದು ಮತ್ತು ತಡೆಗಟ್ಟುವುದು ಹಾಗೂ ಅಂಥ ಅಪರಾಧಗಳಿಗೆ ದಂಡನೆ ವಿಧಿಸುವುದು ಮತ್ತು ಸಂತ್ರಸ್ತರಿಗೆ ತಕ್ಕ ಪರಿಹಾರವನ್ನು ಒದಗಿಸುವುದು ಈ ವಿಧೇಯಕದ ಉದ್ದೇಶವಾಗಿದೆ.

ಯಾವುದೇ ಪೂರ್ವಕಲ್ಪಿತ ಹಿತಾಸಕ್ತಿಯನ್ನು ಸಾಧಿಸಲು, ಬದುಕಿರುವ ಅಥವಾ ಮೃತರ ಬಗ್ಗೆ, ಅವರ ವರ್ಗ, ಗುಂಪು ಅಥವಾ ಸಮುದಾಯದ ವಿರುದ್ಧ ಹಾನಿ, ಅಸಾಮರಸ್ಯ, ವೈರತ್ವದ ಅಥವಾ ದ್ವೇಷದ, ಕೆಡುಕಿನ ಭಾವನೆಗಳನ್ನು ಮೂಡಿಸುವ ಉದ್ದೇಶದೊಂದಿಗೆ ಸಾರ್ವಜನಿಕವಾಗಿ ಮೌಖಿಕ ಅಥವಾ ಲಿಖಿತ ರೂಪದ ಪದಗಳಲ್ಲಿ ಅಥವಾ ಸಂಕೇತಗಳ ಮೂಲಕ ಅಥವಾ ದೃಶ್ಯರೂಪಕಗಳ ಮೂಲಕ ಅಥವಾ ವಿದ್ಯುನ್ಮಾನ ಸಂವಹನಗಳ ಮೂಲಕ ಅಥವಾ ಇನ್ಯಾವುದೇ ರೀತಿಯಲ್ಲಿ ಮಾಡಲಾದ ಯಾವುದೇ ಅಭಿವ್ಯಕ್ತಿಯನ್ನು ಒಳಗೊಳ್ಳುವುದು ದ್ವೇಷ ಭಾಷಣವಾಗಿದೆ ಎಂದು ವಿಧೇಯಕದಲ್ಲಿ ಉಲ್ಲೇಖಿಸಲಾಗಿದೆ.

ಮೊದಲ ಬಾರಿ ಅಪರಾಧ ಎಸಗಿದರೆ ಒಂದು ವರ್ಷಕ್ಕೆ ಕಡಿಮೆಯಲ್ಲದ, ಏಳು ವರ್ಷಗಳ ವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಮತ್ತು 50,000 ರೂ. ದಂಡ.

ಪುನರಾವರ್ತಿತ ಅಪರಾಧಗಳಿಗೆ ಕನಿಷ್ಠ ಎರಡು ವರ್ಷಗಳಿಗೆ ಕಡಿಮೆಯಲ್ಲದ, ಹತ್ತು ವರ್ಷಗಳವರೆಗೆ ವಿಸ್ತರಿಸಬಹುದಾದ ಅವಧಿಯ ಜೈಲು ಶಿಕ್ಷೆ ಮತ್ತು ಒಂದು ಲಕ್ಷ ರೂ. ದಂಡ ಹಾಗೂ ಜಾಮೀನು ರಹಿತ ಅಪರಾಧಗಳಾಗಿರುತ್ತವೆ.

ನ್ಯಾಯಾಲಯವು ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವ ಅವಕಾಶವೂ ಇರುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News