ಸುರ್ಜೇವಾಲ ಭೇಟಿಯಾಗಿ ಸಚಿವ ಸ್ಥಾನ ಕೇಳುತ್ತೇನೆ: ರುದ್ರಪ್ಪ ಲಮಾಣಿ
ಹಾವೇರಿ : ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ನಾಳೆ (ಜು.8) ಭೇಟಿಯಾಗುತ್ತೇನೆ. ಇದೇ ವೇಳೆ ಸಚಿವ ಸ್ಥಾನವನ್ನು ಕೇಳುತ್ತೇನೆ ಎಂದು ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಇಂದಿಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನ ಕೊಡುವುದಾಗಿ ಸುರ್ಜೇವಾಲ ಈ ಹಿಂದೆ ಹೇಳಿದ್ದರು. ಸಚಿವ ಸ್ಥಾನ ಕೇಳಲು ಏನಾಗಿದೆ? ಕೇಳಲಿಕ್ಕೆ ಏನು ರೊಕ್ಕ(ಹಣ) ಕೊಡಬೇಕಾ?. ನಮ್ಮ ಬೇಡಿಕೆ ಇದೆ, ಕೊಡಿ ಎಂದು ಕೇಳುತ್ತೇನೆ. ಕೊಡುವುದು-ಬಿಡುವುದು ವರಿಷ್ಠರಿಗೆ ಬಿಟ್ಟಿದ್ದು ಎಂದು ಹೇಳಿದರು.
ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ನನ್ನನ್ನು ಕರೆದಿದ್ದಾರೆ. ಹೋಗಿ ಭೇಟಿಯಾದ ಮೇಲೆ ಏನು ಎಂದು ಗೊತ್ತಾಗಲಿದೆ. ಸರಕಾರದ ಸಾಧನೆ, ಸಂಘಟನೆ ಬಗ್ಗೆ ಚರ್ಚೆ ಮಾಡಬಹುದು. ನಾನು ಉಪಸಭಾಧ್ಯಕ್ಷನಾದ ಬಳಿಕ ಕೇಳಿದ ಅನುದಾನ ಕೊಟ್ಟಿದಾರೆ. 100ಕ್ಕೆ 100ರಷ್ಟು ಕೊಡುವುದು ಆ ದೇವರಿಂದಲೂ ಸಾಧ್ಯವಿಲ್ಲ ಎಂದು ಅವರು ಪ್ರತಿಕ್ರಿಯೆ ನೀಡಿದರು.