ಬೆಂಗಳೂರು : ಮಹಿಳೆಯರ ಆರೋಗ್ಯ ಮತ್ತು ಆರೈಕೆಗೆ ವಿಶೇಷ ಆದ್ಯತೆ ನೀಡುವ ಉದ್ದೇಶದಿಂದ 35 ವರ್ಷ ಮೇಲ್ಪಟ್ಟ ಮಹಿಳೆಯರಿಗಾಗಿ ‘ಋತು ತಾರೆ’ ಎಂಬ ಮಧ್ಯವಯಸ್ಕ ಮಹಿಳೆಯರ ಆರೋಗ್ಯ ಮತ್ತು ಮೆನೋಪಾಸ್ ಕಾರ್ಯಕ್ರಮವನ್ನು ರಾಜ್ಯ ಸರಕಾರ ಜಾರಿಗೆ ತಂದಿದೆ.

ಈ ಕುರಿತು ಆರೋಗ್ಯ ಇಲಾಖೆ ಆದೇಶ ಹೊರಡಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ತಿಂಗಳ ಪ್ರಾಯೋಗಿಕ ಕಾರ್ಯಕ್ರಮ ಆರಂಭವಾಗಲಿದೆ. ಮಹಿಳೆಯರ ಆರೋಗ್ಯವೆಂದರೆ ಕೇವಲ ತಾಯ್ತನಕ್ಕೆ ಸಂಬಂಧಿಸಿದ್ದಲ್ಲ. ಮೆನೋಪಾಸ್ ಹಂತದಲ್ಲಿ ಎದುರಾಗುವ ನಿದ್ರಾಹೀನತೆ, ದೇಹದಲ್ಲಿ ಏಕಾಏಕಿ ಉಂಟಾಗುವ ಬಿಸಿಯ ಅನುಭವ, ಕೀಲು ನೋವು, ಮೂಳೆಗಳ ದುರ್ಬಲತೆ, ಆತಂಕ ಹಾಗೂ ಮಾನಸಿಕ ಏರುಪೇರುಗಳೂ ಪ್ರಮುಖ ಆರೋಗ್ಯ ಸಮಸ್ಯೆಗಳಾಗಿವೆ. ಇವುಗಳನ್ನು ವಯಸ್ಸಿನ ಸಹಜ ಬದಲಾವಣೆ ಎಂದು ನಿರ್ಲಕ್ಷಿಸದೆ ಸೂಕ್ತ ತಪಾಸಣೆ ಮತ್ತು ಚಿಕಿತ್ಸೆ ಪಡೆಯುವುದು ಅಗತ್ಯ ಎಂದು ಸರಕಾರ ತಿಳಿಸಿದೆ.

‘ಋತು ತಾರೆ’ ಕಾರ್ಯಕ್ರಮದಡಿ ಮಹಿಳೆಯರಿಗಾಗಿ ಪ್ರತ್ಯೇಕ ಕ್ಲಿನಿಕ್‌ಗಳನ್ನು ತೆರೆಯಲಾಗುತ್ತದೆ. ಸಮಗ್ರ ಆರೋಗ್ಯ ತಪಾಸಣೆ, ಮಾನಸಿಕ ಆರೋಗ್ಯ ಮತ್ತು ಪೌಷ್ಟಿಕ ಆಹಾರದ ಕುರಿತು ಮಾರ್ಗದರ್ಶನ ನೀಡಲಾಗುತ್ತದೆ. ಅಗತ್ಯವಿರುವವರಿಗೆ ತಜ್ಞ ವೈದ್ಯರಿಂದ ಚಿಕಿತ್ಸೆ ಒದಗಿಸಲಾಗುತ್ತದೆ. ಅಲ್ಲದೆ, ಮಹಿಳೆಯರ ಆರೋಗ್ಯದ ವಿವರಗಳನ್ನು ದಾಖಲಿಸಲು ‘ಮಿಡ್-ಲೈಫ್ ಹೆಲ್ತ್ ಕಾರ್ಡ್’ ವಿತರಿಸಲಾಗುತ್ತದೆ ಎಂದು ಆದೇಶದಲ್ಲಿ ಹೇಳಿದೆ.

ಚಿತ್ರನಟಿ ರಮ್ಯಾ ಈ ಕಾರ್ಯಕ್ರಮದ ರಾಯಭಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಮೆನೋಪಾಸ್ ಮತ್ತು ಮಧ್ಯವಯಸ್ಕ ಮಹಿಳೆಯರ ಆರೋಗ್ಯದ ಕುರಿತು ಜಾಗೃತಿ ಮೂಡಿಸಿ, ಈ ಸಂದೇಶವನ್ನು ರಾಜ್ಯದ ಮೂಲೆಮೂಲೆಗೂ ತಲುಪಿಸುವಲ್ಲಿ ಅವರು ಸಹಕರಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ತಿಂಗಳ ಪ್ರಾಯೋಗಿಕ ಅನುಷ್ಠಾನ ಪೂರ್ಣಗೊಂಡ ಬಳಿಕ ಕಾರ್ಯಕ್ರಮವನ್ನು ರಾಜ್ಯಾದ್ಯಂತ ವಿಸ್ತರಿಸಲಾಗುತ್ತದೆ. ಮಹಿಳೆಯರ ಬದುಕಿನ ಪ್ರತಿಯೊಂದು ಹಂತದಲ್ಲೂ ಉತ್ತಮ ಆರೋಗ್ಯ ಸೇವೆ, ಸೂಕ್ತ ಆರೈಕೆ, ಘನತೆಯ ಬದುಕು ದೊರೆಯಬೇಕೆಂಬ ಉದ್ದೇಶದಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಸರಕಾರ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor