×
Ad

ಸಿಎಂ ಸ್ಥಾನದ ವಿಚಾರವೇ ಬೇರೆ, ಯತೀಂದ್ರ ಹೇಳಿಕೆಯೇ ಬೇರೆ : ಸತೀಶ್ ಜಾರಕಿಹೊಳಿ

Update: 2025-10-27 18:44 IST

ಬೆಂಗಳೂರು, ಅ.27: ಮುಖ್ಯಮಂತ್ರಿ ಸ್ಥಾನದ ಕುರಿತು ಹುಟ್ಟುಹಾಕಿರುವ ಚರ್ಚೆ ಬಗ್ಗೆ ಪಕ್ಷದ ಹೈಕಮಾಂಡ್, ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಯವರೇ ತೀರ್ಮಾನಿಸಿ, ಉತ್ತರಿಸುತ್ತಾರೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಕುರಿತು ಮಾಧ್ಯಮಗಳಲ್ಲಿ ಚರ್ಚೆ ಹುಟ್ಟುಹಾಕಲಾಗಿದೆ. ಇದಕ್ಕೆ ಕಡಿವಾಣ ಹಾಕಿ ಎಂದು ನಾನು ಹೈಕಮಾಂಡ್‍ಗೆ ಹೇಳಲು ಬರುವುದಿಲ್ಲ. ಆದರೆ, ಹೈಕಮಾಂಡ್, ಸಿದ್ದರಾಮಯ್ಯ ಹಾಗೂ ಡಿಸಿಎಂ ಅವರೇ ಇದಕ್ಕೆ ಉತ್ತರ ನೀಡಲಿದ್ದಾರೆ ಎಂದು ತಿಳಿಸಿದರು.

ನಾನು 30 ವರ್ಷದಿಂದ ಅಹಿಂದ ಪಕ್ಷದಲ್ಲಿಯೇ ಇದ್ದೇನೆ. ಜೆಡಿಎಸ್‍ನಲ್ಲಿ ಇದ್ದಾಗಲೂ ಅಹಿಂದ ಭಾಗವೇ ಆಗಿದ್ದೇ, ಈಗಲೂ ಅಹಿಂದ ಭಾಗವೇ. ಸಚಿವರಾದ ಡಾ.ಜಿ.ಪರಮೇಶ್ವರ್, ಡಾ.ಎಚ್.ಸಿ.ಮಹದೇವಪ್ಪ ಎಲ್ಲರೂ ಅಹಿಂದ ಭಾಗವೇ. ಆದರೆ, ಯತೀಂದ್ರ ಸಿದ್ದರಾಮಯ್ಯ ಎಲ್ಲಿಯೂ ಸಿಎಂ ಸ್ಥಾನವಾಗಲಿ, ಅಧ್ಯಕ್ಷ ಸ್ಥಾನದ ಬಗ್ಗೆಯಾಗಲೀ ಕೇಳಿಲ್ಲ. ಸಿಎಂ ಸ್ಥಾನದ ವಿಚಾರವೇ ಬೇರೆ, ಯತೀಂದ್ರ ಹೇಳಿಕೆಯೇ ಬೇರೆ ಆಗಿದೆ ಎಂದು ಸ್ಪಷ್ಟನೆ ನೀಡಿದರು.

ನಮ್ಮ ನಡೆ ಯಾವುದು ಇಲ್ಲ. 2028ರ ಚುನಾವಣೆ ಆಗಬೇಕು, ಆಗ ಸ್ಥಿತಿಗತಿ ನೋಡಿಕೊಂಡು ನಿರ್ಧಾರ ಮಾಡೋಣ ಎಂದ ಅವರು, ದಲಿತ ಸಿಎಂ ಆಯ್ಕೆ ಸಂಬಂಧವೂ ಅವಕಾಶ ಬರುವವರೆಗೂ ಕಾಯಬೇಕು. ಈಗಂತೂ ಅವಕಾಶವಿಲ್ಲ. ಸಮಯಕ್ಕಾಗಿ ಕಾಯೋಣ ಅವಕಾಶ ಸೃಷ್ಟಿ ಆಗಬೇಕು ಎಂದು ಹೇಳಿದರು.

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರಂತೆ ಇನ್ನೊಬ್ಬ ಹುಟ್ಟಿಕೊಳ್ಳಲು ರಾಜ್ಯದಲ್ಲಿ ಆಗಲ್ಲ. ನವೆಂಬರ್ ಕ್ರಾಂತಿಯೂ ಆಗಲ್ಲ. ಕ್ರಾಂತಿ ಆಗಲು ಹೈಕಮಾಂಡ್ ಬಿಡಬೇಕಲ್ಲವೇ? ಎಂದು ಸತೀಶ್ ಜಾರಕಿಹೊಳಿ ನುಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News