ಸತೀಶ್ ಸೈಲ್ ಮಧ್ಯಂತರ ವೈದ್ಯಕೀಯ ಜಾಮೀನು ವಿಸ್ತರಿಸಿದ ಹೈಕೋರ್ಟ್; ಆರೋಗ್ಯ ತಪಾಸಣೆಗೆ ವೈದ್ಯರ ಹೆಸರು ಸೂಚಿಸಲು ಈಡಿಗೆ ನಿರ್ದೇಶನ
ಸತೀಶ್ ಸೈಲ್
ಬೆಂಗಳೂರು : ಬೇಲೆಕೇರಿ ಬಂದರಿನಿಂದ ಅಕ್ರಮವಾಗಿ ಅದಿರು ಸಾಗಣೆ ಮತ್ತು ಮಾರಾಟ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಈಡಿ) ದಾಖಲಿಸಿರುವ ಪ್ರಕರಣದಲ್ಲಿ ಶಾಸಕ ಸತೀಶ್ ಸೈಲ್ ಅವರಿಗೆ ಗುರುವಾರದವರೆಗೆ ಮಧ್ಯಂತರ ವೈದ್ಯಕೀಯ ಜಾಮೀನು ವಿಸ್ತರಿಸಿ ಹೈಕೋರ್ಟ್ ಆದೇಶಿಸಿದೆ.
ಇದೇ ವೇಳೆ, ಸೈಲ್ ಅವರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲು ವೃತ್ತಿಪರ ವೈದ್ಯರ ಹೆಸರನ್ನು ಸೂಚಿಸುವಂತೆ ಈಡಿಗೆ ನ್ಯಾಯಾಲಯ ನಿರ್ದೇಶಿಸಿದೆ.
ವಿಚಾರಣೆಗೆ ಸಹಕರಿಸುತ್ತಿಲ್ಲ ಎಂಬ ಕಾರಣಕ್ಕೆ ಹೊರಡಿಸಿರುವ ಜಾಮೀನುರಹಿತ ಬಂಧನ ವಾರೆಂಟ್ (ಎನ್‌ಬಿಡಬ್ಲ್ಯು) ಹಾಗೂ ಈಡಿ ದಾಖಲಿಸಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನೀಡಲಾಗಿದ್ದ ಮಧ್ಯಂತರ ವೈದ್ಯಕೀಯ ಜಾಮೀನು ರದ್ದುಪಡಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಸತೀಶ್ ಸೈಲ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಸತೀಶ್ ಸೈಲ್‌ಗೆ ಮಂಜೂರು ಮಾಡಲಾಗಿರುವ ವೈದ್ಯಕೀಯ ಮಧ್ಯಂತರ ಜಾಮೀನನ್ನು ಗುರುವಾರದವರೆಗೆ ವಿಸ್ತರಿಸಲಾಗಿದೆ. ಈ ಮಧ್ಯೆ, ಸೈಲ್ ಅವರ ಆರೋಗ್ಯ ಪರಿಸ್ಥತಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿ ಅದನ್ನು ಖಾತ್ರಿಪಡಿಸಲು ಯಾವ ವೈದ್ಯರನ್ನು ನೇಮಿಸಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಈಡಿ ಸಲಹೆ ನೀಡಬೇಕು ಎಂದು ಆದೇಶಿಸಿತು.
ಸತೀಶ್ ಸೈಲ್ ಅವರು ಅನಾರೋಗ್ಯಪೀಡತರಾಗಿದ್ದರೆ, ಅವರು ಅನಾರೋಗ್ಯಪೀಡಿತರಾಗಿರಬೇಕು. ಅದರಲ್ಲಿ ಎರಡು ಮಾತಿಲ್ಲ. ಅವರ ಆರೋಗ್ಯಕ್ಕೆ ಸಂಬಂಧಿಸಿದ ವೈದ್ಯಕೀಯ ದಾಖಲೆಗಳನ್ನು ಖಾತ್ರಿಪಡಿಸಬೇಕು. ಈ ವಿಚಾರದ ಕುರಿತು ಯೋಚಿಸಿ, ನ್ಯಾಯಾಲಯಕ್ಕೆ ತಿಳಿಸಿ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ್ ಕಾಮತ್ ಅವರಿಗೆ ಸೂಚಿಸಿದ ನ್ಯಾಯಪೀಠ, ವಿಚಾರಣೆಯನ್ನು ನವೆಂಬರ್ 13ಕ್ಕೆ ಮುಂದೂಡಿತು.
ಹೀಗಿತ್ತು ವಾದ-ಪ್ರತಿವಾದ:
ಇದಕ್ಮೂ ಮುನ್ನ ಸೈಲ್ ಪರ ಹಿರಿಯ ವಕೀಲ ಸಂದೇಶ್ ಚೌಟ ವಾದ ಮಂಡಿಸಿ, ಸೆಪ್ಟೆಂಬರ್ 11ರಂದು ಅರ್ಜಿದಾರರಿಗೆ ಮಧ್ಯಂತರ ವೈದ್ಯಕೀಯ ಜಾಮೀನು ಮಂಜೂರು ಮಾಡಲಾಗಿತ್ತು. ಸೈಲ್ ಅವರು ಸ್ಥೂಲಕಾಯ, ನಿದ್ರಾಹೀನತೆಯಿಂದ ಬಳಲುತ್ತಿದ್ದು, ಅವರಿಗೆ ಯಕೃತ್ ಬದಲಾವಣೆ ಮಾಡಬೇಕು ಎಂದು ಇಎಸ್‌ಐ ಆಸ್ಪತ್ರೆ ವರದಿ ನೀಡಿರುವುದನ್ನು ಈಡಿ ದಾಖಲೆಗಳೇ ಹೇಳುತ್ತವೆ. ಅರ್ಜಿದಾರರು ಮಂಡಿಸಿರುವ ಯಾವುದೇ ದಾಖಲೆ ಸುಳ್ಳು ಅಥವಾ ಸರಿ ಇಲ್ಲ ಎಂದು ವಿಚಾರಣಾ ನ್ಯಾಯಾಲಯ ಹೇಳಿಲ್ಲ ಎಂದರು.
ಅಕ್ಟೋಬರ್ 4 ಮತ್ತು 5ರಂದು ಸೈಲ್ ಅವರ ಹೇಳಿಕೆಯನ್ನು ಈಡಿ ದಾಖಲಿಸಿಕೊಂಡಿದೆ. ಅಕ್ಟೋಬರ್ 7ರಂದು ದೂರು ದಾಖಲಿಸಿದೆ. ಸೈಲ್ ಅವರ ಒಂದೇ ಒಂದು ವೈದ್ಯಕೀಯ ದಾಖಲೆ ಸುಳ್ಳು ಎಂದು ಹೇಳಲಾಗಿಲ್ಲ. ಆದರೆ, ನೀವು ಅನಾರೋಗ್ಯಪೀಡಿತ ವಿಭಾಗಕ್ಕೆ ಬರುವುದಿಲ್ಲ ಎಂದು ಹೇಳಲಾಗಿದ್ದು, ಎರಡು ಅಗತ್ಯತೆ ಇನ್ನೂ ನಿಮ್ಮ ಪ್ರಕರಣದಲ್ಲಿ ಬಾಕಿ ಇದೆ ಎಂದು ವಿಶೇಷ ನ್ಯಾಯಾಲಯ ಹೇಳಿದೆ ಎಂದು ಹೈಕೋರ್ಟ್‌ಗೆ ವಿವರಿಸಿದರು.
ಈ ಡಿ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ. ಅರವಿಂದ್ ಕಾಮತ್, ಚೌಟ ಅವರು ಓದಿದು ಆದೇಶಗಳು ನನ್ನ ಬಳಿ ಇಲ್ಲ. ವಿಶೇಷ ನ್ಯಾಯಾಲಯ ಸೈಲ್ ಅವರನ್ನು ಜಾರಿ ನಿರ್ದೇಶನಾಲಯದ ಕಸ್ಟಡಿಗೆ ನೀಡಿದ ಬಳಿಕ ಅವರು ಅನಾರೋಗ್ಯದ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಇಎಸ್‌ಐ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯ ವರದಿ ಆಧರಿಸಿ ಸೈಲ್ ಅವರನ್ನು ಮತ್ತೊಮ್ಮೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಆನಂತರ, ವಿಶೇಷ ನ್ಯಾಯಾಲಯ ಸೈಲ್ ಅವರಿಗೆ ಮಧ್ಯಂತರ ವೈದ್ಯಕೀಯ ಜಾಮೀನು ಮಂಜೂರು ಮಾಡಿತ್ತು ಎಂದು ತಿಳಿಸಿದರು.
ಸೈಲ್ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಬೇಕು ಎಂದು ಇಎಸ್‌ಐ ಆಸ್ಪತ್ರೆಯ ವರದಿಯಲ್ಲಿ ಹೇಳಲಾಗಿದೆ. ಆದರೆ, ಸೈಲ್ ಅವರು ಅಂಕೋಲಾ, ಶಿರಸಿ ಎಲ್ಲ ಕಡೆ ಓಡಾಡುತ್ತಿದ್ದು, ಸ್ಥಳೀಯ ಚುನಾವಣೆಯಲ್ಲಿ ಭಾಗವಹಿಸಿರುವುದು ತಿಳಿದು ಬಂದಿದೆ ಎಂದರು. ಆಗ ನ್ಯಾಯಪೀಠ, ಇದು ನಿಮ್ಮ ರಿಸ್ಕ್‌ಗೆ ಬಿಟ್ಟ ವಿಚಾರವಾಗಿದ್ದು, ನೀವು ರಿಸ್ಕ್ ತೆಗೆದುಕೊಳ್ಳಲು ಮುಂದಾದರೆ ನಿಮ್ಮ ಕೋರಿಕೆ ಪರಿಗಣಿಸಲಾಗುವುದು ಎಂದು ಹೇಳಿತು.
ಅದಕ್ಕೆ ಕಾಮತ್ ಅವರು, ವೈದ್ಯಕೀಯ ವರದಿ ಮತ್ತು ಸೈಲ್ ಪರಿಸ್ಥಿತಿಯನ್ನು ಪರಿಶೀಲಿಸುವ ಕುರಿತು ನ್ಯಾಯಾಲಯ ಹೇಳಿರುವುದಕ್ಕೆ ನಮ್ಮ ಒಪ್ಪಿಗೆ ಇದೆ. ಸಹಜವಾಗಿ ಹೇಳಬೇಕೆಂದರೆ ನಾವು ಆರೋಗ್ಯದ ವಿಚಾರದಲ್ಲಿ ತಜ್ಞರಲ್ಲ ಎಂದರು. ಆಗ ನ್ಯಾಯಪೀಠ, ಸೈಲ್ ಅವರ ಆರೋಗ್ಯ ಪರಿಸ್ಥಿತಿಯ ಕುರಿತು ತಿಳಿದು, ಆನಂತರ ನೋಡೋಣ ಎಂದು ನುಡಿಯಿತು. ಈ ವೇಳೆ, ಮಧ್ಯಪ್ರವೇಶಿಸಿದ ಚೌಟ ಅವರು, ವೈದ್ಯಕೀಯ ಮಂಡಳಿಯನ್ನು ರಚಿಸಿದರೆ ಆರೋಗ್ಯ ತಪಾಸಣೆಗೆ ಒಳಗಾಗಲು ಸೈಲ್ ಸಿದ್ಧರಿದ್ದಾರೆ ಎಂದರು.
ವಾದ ಮುಂದುವರಿಸಿದ ಕಾಮತ್ ಅವರು, ಜಾಮೀನು ರದ್ದತಿ ವಿಚಾರ ಏಕೆ ಬಂದಿದೆ ಎಂಬುದನ್ನು ನ್ಯಾಯಾಲಯ ಪರಿಶೀಲಿಸಬೇಕು. ಸೈಲ್ ಆಸ್ಪತ್ರೆಯಲ್ಲಿರಬೇಕು ಎಂದು ವರದಿ ಹೇಳಿದ್ದರೂ ಅದನ್ನು ಪಾಲಿಸಲಾಗುತ್ತಿಲ್ಲ. ಇಎಸ್‌ಐ ಆಸ್ಪತ್ರೆಯ ವರದಿಯ ಅನುಪಾಲನೆಯನ್ನು ಸೈಲ್ ಮಾಡಬೇಕು. ಸೈಲ್ ಸಹಜವಾಗಿ ಓಡಾಟ ನಡೆಸುವಂತಿಲ್ಲ. ಒಂದು ಕಡೆ ಅನಾರೋಗ್ಯಪೀಡಿತ ಎಂದು ದಾಖಲೆ ತೋರಿಸುತ್ತಾರೆ. ಮತ್ತೊಂದೆಡೆ ಮುಕ್ತವಾಗಿ ಓಡಾಟ ನಡೆಸುತ್ತಿದ್ದಾರೆ. ಸಮೀಪದ ಒಳ್ಳೆಯ ಆಸ್ಪತ್ರೆಯಿಂದ ನೂರಾರು ಕಿ.ಮೀ. ದೂರ ಓಡಾಡುತ್ತಿದ್ದಾರೆ. ಈ ರಿಸ್ಕ್ ಅನ್ನು ಸೈಲ್ ತೆಗೆದುಕೊಳ್ಳುತ್ತಿದ್ದಾರೆ ಎಂದರೆ ನ್ಯಾಯಾಲಯದ ಮುಂದೆ ಸುಳ್ಳನ್ನು ಬಿಂಬಿಸುತ್ತಿದ್ದಾರೆ ಎಂದರ್ಥ ಎಂದರು.
ಇದಕ್ಕೆ ನ್ಯಾಯಪೀಠ, ಎಲ್ಲಿ ಸೈಲ್ ಅವರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಬೇಕು ಎಂಬುದನ್ನು ತಿಳಿಸಿ. ಆರೋಗ್ಯ ಪರಿಸ್ಥಿತಿಯ ಸುರಕ್ಷಿತ ಪರಿಶೀಲನೆ ಬಗ್ಗೆ ತಿಳಿಸಿ ಎಂದು ಹೇಳಿತು. ಒಂದೆರಡು ದಿನ ಕಾಲಾವಕಾಶ ನೀಡಿದರೆ ತಿಳಿಸಲಾಗುವುದು ಎಂದು ಕಾಮತ್ ಹೇಳಿದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಮಧ್ಯಂತರ ವೈದ್ಯಕೀಯ ಜಾಮೀನನ್ನು ವಿಸ್ತರಿಸಿ, ಜಾರಿ ನಿರ್ದೇಶನಾಲಯಕ್ಕೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿತು.
ಎನ್‌ಬಿಡಬ್ಲ್ಯು ನೀಡಿದ್ದ ವಿಶೇಷ ಕೋರ್ಟ್:
ಪ್ರಕರಣದ ಸಂಬಂಧ ನವೆಂಬರ್ 7ರಂದು ವಿಚಾರಣೆ ನಡೆಸಿದ್ದ ವಿಶೇಷ ನ್ಯಾಯಾಲಯ, ಸಾಕ್ಷಿ ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿ ಎಲ್ಲ ಆರೋಪಿಗಳೂ ಹಾಜರಿರುವಾಗ ಮೊದಲ ಆರೋಪಿಯಾದ ಸೈಲ್ ಅವರ ಗೈರು ಹಾಜರಿಯನ್ನು ಮನ್ನಿಸಲಾಗದು. ಆದ್ದರಿಂದ, ಸತೀಶ್ ಸೈಲ್ ವಿರುದ್ಧ ಬಲವಂತದ ಕ್ರಮ ತೆಗೆದುಕೊಳ್ಳಬೇಕಾಗಿದೆ ಎಂದು ಅಭಿಪ್ರಾಯಪಟ್ಟು, ಜಾಮೀನುರಹಿತ ವಾರಂಟ್ ಹೊರಡಿಸಿತ್ತು. ಜತೆಗೆ, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಂಜೂರು ಮಾಡಿದ್ದ ಮಧಂತರ ವೈದ್ಯಕೀಯ ಜಾಮೀನನ್ನೂ ರದ್ದುಪಡಿಸಿತ್ತು. ಇದರಿಂದ, ಸತೀಶ್ ಸೈಲ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.