ಬಾನು ಮುಷ್ತಾಕ್ ದಸರಾ ಉದ್ಘಾಟಿಸುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಅರ್ಜಿ; ನಾಳೆ ವಿಚಾರಣೆ
ಹೊಸದಿಲ್ಲಿ: ಬೂಕರ್ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್ ಅವರಿಗೆ ಮೈಸೂರು ದಸರಾ ಉದ್ಘಾಟಿಸಲು ಆಹ್ವಾನ ನೀಡುವ ಕರ್ನಾಟಕ ಸರಕಾರದ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಕೆಯಾಗಿದ್ದು, ಅರ್ಜಿ ವಿಚಾರಣೆಗೆ ನ್ಯಾಯಾಲಯ ಸಮ್ಮತಿಸಿದೆ.
ದಸರಾ ಹಬ್ಬ ಸೆಪ್ಟೆಂಬರ್ 22ರಿಂದ ಪ್ರಾರಂಭಗೊಳ್ಳಲಿದ್ದು, ಅರ್ಜಿಯ ತುರ್ತು ವಿಚಾರಣೆ ನಡೆಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಹಾಗೂ ನ್ಯಾ. ಕೆ.ವಿನೋದ್ ಚಂದ್ರನ್ ಅವರನ್ನೊಳಗೊಂಡ ನ್ಯಾಯಪೀಠಕ್ಕೆ ಅರ್ಜಿದಾರರು ಮನವಿ ಮಾಡಿದರು.
“ಕರ್ನಾಟಕದಲ್ಲಿ ಸೆಪ್ಟೆಂಬರ್ 22ರಂದು ಮೈಸೂರು ದೇವಾಲಯದ ಅಗ್ರೇಶ್ವ್ರಿ ದೇವಿ ಪೂಜೆ ಸಲ್ಲಿಸಲು ಹಿಂದೂಯೇತರ ವ್ಯಕ್ತಿಯೊಬ್ಬರಿಗೆ ಅವಕಾಶ ನೀಡಲಾಗಿದೆ. ಹೀಗಾಗಿ ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡಬೇಕು” ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದರು. ಈ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಪುರಸ್ಕರಿಸಿದರು.
ಇದಕ್ಕೂ ಮುನ್ನ, ಬಾನು ಮುಷ್ತಾಕ್ ಅವರಿಗೆ ಮೈಸೂರಿನ ದಸರಾ ಉದ್ಘಾಟಿಸಲು ನೀಡಿರುವ ಆಹ್ವಾನವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿತ್ತು. ಸರಕಾರದ ನಿರ್ಧಾರವು ಯಾವುದೇ ಸಾಂವಿಧಾನಿಕ ಅಥವಾ ಕಾನೂನಾತ್ಮಕ ಉಲ್ಲಂಘನೆ ಮಾಡುವುದಿಲ್ಲ ಎಂದು ಈ ವೇಳೆ ನ್ಯಾಯಾಲಯ ಅಭಿಪ್ರಾಯ ಪಟ್ಟಿತ್ತು.