ರಾಜ್ಯ ಸರಕಾರ ಈ ಬಾರಿ ʼಎಸ್‌ಸಿಪಿ-ಟಿಎಸ್‌ಪಿʼಗೆ 42,018 ರೂ.ಗಳನ್ನು ಒದಗಿಸಿದೆ : ಸಿಎಂ ಸಿದ್ದರಾಮಯ್ಯ
ಬೆಂಗಳೂರು : ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಗಾಗಿ ನಮ್ಮ ಸರ್ಕಾರ ಈ ಬಾರಿ 42,018 ರೂ.ಗಳನ್ನು ಒದಗಿಸಿದೆ. ನಾವು ಪರಿಶಿಷ್ಟ ಸಮುದಾಯಗಳ ಏಳಿಗೆಯನ್ನು ಪ್ರಾಮಾಣಿಕವಾಗಿ ಬಯಸುವವರು. ನಮ್ಮ ಕಾಳಜಿ ಕೇವಲ ಬಾಯಿ ಮಾತಿನದ್ದಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಉತ್ತರಿಸಿದ ಸಿಎಂ, 2020-21 ರಿಂದ 2022-23 ರವರೆಗೆ 3 ವರ್ಷಗಳ ಅವಧಿಯಲ್ಲಿ ಹಿಂದಿನ ಬಿಜೆಪಿ ಸರ್ಕಾರ ಎಸ್‌ಸಿಪಿ ಮತ್ತು ಟಿಎಸ್‌ಪಿಗಾಗಿ 80,415 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಆದರೆ ನಾವು 2023 ರಿಂದ ಈಗ ಮಂಡಿಸಿರುವ ಬಜೆಟ್‌ವರೆಗೆ 1,15,509 ಕೋಟಿ ರೂಪಾಯಿಗಳನ್ನು ಒದಗಿಸಿದ್ದೇವೆ. ಬಿಜೆಪಿಯ 3 ವರ್ಷಗಳಿಗೆ ಹೋಲಿಸಿದರೆ ನಾವು 35,094 ಕೋಟಿ ರೂಗಳನ್ನು ಹೆಚ್ಚಿಗೆ ಒದಗಿಸಿದ್ದೇವೆ. ಶೇ.43.64 ರಷ್ಟು ಹೆಚ್ಚಿನ ಅನುದಾನವನ್ನು ಒದಗಿಸಿದಂತಾಗುತ್ತದೆ. ಒಟ್ಟಾರೆ ಸಮಾಜ ಕಲ್ಯಾಣ ಇಲಾಖೆಗೆ ಶೇ.52.5 ರಷ್ಟು ಹೆಚ್ಚು ಅನುದಾನವನ್ನು ಕೊಟ್ಟಿದ್ದೇವೆ ಎಂದು ತಿಳಿಸಿದರು.
ವಿರೋಧ ಪಕ್ಷದ ನಾಯಕರು ಪ್ರಾಜೆಕ್ಟ್ ಟೈಗರ್ ಮತ್ತು ಪ್ರಾಜೆಕ್ಟ್ ಎಲಿಫೆಂಟ್ ಯೋಜನೆಗೂ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಹಣವನ್ನು ವಿನಿಯೋಗಿಸಲಾಗಿದೆ ಎಂದಿದ್ದಾರೆ. ಆದರೆ ಇದು ಕೇಂದ್ರ ಸರ್ಕಾರದ ಸಮಸ್ಯೆ. ಕೇಂದ್ರ ಸರ್ಕಾರವು ರೂಪಿಸಿರುವ ಕೇಂದ್ರ ಪುರಸ್ಕೃತ ಯೋಜನೆಗೆ ಮ್ಯಾಚಿಂಗ್ ಗ್ರಾಂಟ್ ಒದಗಿಸಿದ್ದೇವೆ ಅಷ್ಟೇ ಎಂದರು.
ಆಯವ್ಯಯ ಗಾತ್ರದ ಹೆಚ್ಚಳ :
2025-26ನೇ ಸಾಲಿನಲ್ಲಿ 4,09,549 ಕೋಟಿ ರೂ. ಗಾತ್ರದ ಬಜೆಟ್ಟನ್ನು ನಾನು ಮಂಡಿಸಿದ್ದೇನೆ. 2024-25ನೇ ಸಾಲಿನ ಆಯವ್ಯಯಕ್ಕೆ ಹೋಲಿಸಿದರೆ 2025-26ನೇ ಸಾಲಿನಲ್ಲಿ ನಮ್ಮ ರಾಜ್ಯದ ಬಜೆಟ್ ಗಾತ್ರ ಶೇ.10.3 ರಷ್ಟು ಹೆಚ್ಚಿನ ಬೆಳವಣಿಗೆ ಕಂಡಿದೆ. ಜನಸಂಖ್ಯೆಯ ಗಾತ್ರದಲ್ಲಿ ಕರ್ನಾಟಕವು 8ನೇ ಸ್ಥಾನದಲ್ಲಿದೆ. ತೆರಿಗೆ ಸಂಗ್ರಹಿಸಿಕೊಡುವ ವಿಚಾರದಲ್ಲಿ ಕರ್ನಾಟಕವು 2ನೇ ಸ್ಥಾನದಲ್ಲಿದೆ. ಜಿಎಸ್‌ಡಿಪಿಯಲ್ಲಿ ಕರ್ನಾಟಕವು ಮಹಾರಾಷ್ಟ್ರ ತಮಿಳುನಾಡಿನ ನಂತರ 3ನೇ ಸ್ಥಾನದಲ್ಲಿದೆ. ಆದರೆ, 2025-26ನೇ ಸಾಲಿನ ನಮ್ಮ ಬಜೆಟ್ ಉತ್ತರ ಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡಿನ ನಂತರ 5ನೇ ದೊಡ್ಡ ಬಜೆಟ್ ಆಗಿದೆ ಎಂದರು.
ಇದೇ ಸಂದರ್ಭದಲ್ಲಿ, 2025-26ನೇ ಸಾಲಿಗೆ ಸಂಬಂಧಿಸಿದಂತೆ ಕೇಂದ್ರದ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್ ಗಾತ್ರ 50.65 ಲಕ್ಷ ಕೋಟಿ ರೂ. 2024-25 ರಲ್ಲಿ 48.21 ಲಕ್ಷ ಕೋಟಿ ರೂ.ಗಳಷ್ಟಿತ್ತು. ಕೇಂದ್ರದ ಬಜೆಟ್ ಬೆಳವಣಿಗೆ ಶೇ. 5.06 ರಷ್ಟು ಮಾತ್ರ. ಇದರಲ್ಲಿ ಹಣದುಬ್ಬರವನ್ನು ಕಳೆದರೆ, ಕೇಂದ್ರದ ಬಜೆಟ್ಟಿನ ಗಾತ್ರ ನಕಾರಾತ್ಮಕವಾಗುತ್ತದೆ ಎಂದು ಹೇಳಿದರು.