ದ್ವಿತೀಯ ಪಿಯುಸಿ ಪರೀಕ್ಷೆ-2ರ ಫಲಿತಾಂಶ ಪ್ರಕಟ | ಶೇ.31.27ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ
ಸಾಂದರ್ಭಿಕ ಚಿತ್ರ (PTI)
ಬೆಂಗಳೂರು : ಪಿಯುಸಿ ಪರೀಕ್ಷೆ-2ರ ಫಲಿತಾಂಶವು ಶುಕ್ರವಾರದಂದು ಪ್ರಕಟವಾಗಿದ್ದು, ಪರೀಕ್ಷೆಯಲ್ಲಿ ಶೇ.31.27ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 1,94,077 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 60,692 ಮಂದಿ ಉತ್ತೀರ್ಣರಾಗಿದ್ದಾರೆ. 1,33,385 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಈ ಮೂಲಕ 2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಒಟ್ಟು ಫಲಿತಾಂಶ ಶೇ.77.96ಕ್ಕೆ ಏರಿಕೆಯಾಗಿದೆ.
2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗೆ ಮೊದಲ ಬಾರಿಗೆ ಪರೀಕ್ಷೆ ಬರೆಯುತ್ತಿರುವ ಹೊಸ ವಿದ್ಯಾರ್ಥಿಗಳು, ರಿಪೀಟರ್ಸ್ ಮತ್ತು ಖಾಸಗಿ ಅಭ್ಯರ್ಥಿಗಳು ಸೇರಿ 6,88,678 ಮಂದಿ ನೋಂದಣಿ ಮಾಡಿಕೊಂಡಿದ್ದರು. ಪರೀಕ್ಷೆ-1ರಲ್ಲಿ 4,76,256 ವಿದ್ಯಾರ್ಥಿಗಳು ಹಾಗೂ ಪರೀಕ್ಷೆ-2ರಲ್ಲಿ 60,692 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇಕಡವಾರು ತೇರ್ಗಡೆ ಪ್ರಮಾಣ 77.96ರಷ್ಟಿದೆ.
2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗೆ ಒಟ್ಟು 6,37,805 ಮಂದಿ ಹೊಸ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಪರೀಕ್ಷೆ-1ರಲ್ಲಿ 4,68,439 ಮತ್ತು ಪರೀಕ್ಷೆ-2ರಲ್ಲಿ 54,168 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ.81.94ರಷ್ಟು ಮಂದಿ ಹೊಸಬರು ತೇರ್ಗಡೆಯಾಗಿದ್ದಾರೆ.
ದ್ವಿತೀಯ ಪಿಯುಸಿ ಪರೀಕ್ಷೆ-2ನ್ನು ಎ.24ರಿಂದ ಮೇ 8ರವರೆಗೆ ಒಟ್ಟು 332 ಪರೀಕ್ಷಾ ಕೇಂದ್ರಗಳಲ್ಲಿ ರಾಜ್ಯಾದಂತ ನಡೆಸಲಾಯಿತು. ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವನ್ನು ಒಟ್ಟು 19 ಮೌಲ್ಯಮಾಪನ ಕೇಂದ್ರಗಳಲ್ಲಿ ಮೇ 8ರಿಂದ ಮೇ 15ರವರೆಗೆ 8,312 ಮೌಲ್ಯಮಾಪಕರಿಂದ ನಡೆಸಲಾಯಿತು.
ದ್ವಿತೀಯ ಪಿಯುಸಿ ಪರೀಕ್ಷೆ-1ರಲ್ಲಿ ಅನುತ್ತೀರ್ಣರಾದ ಹೊಸಬರು 1,53,620 ಪರೀಕ್ಷೆ-2ನ್ನು ಬರೆದಿದ್ದು, 54,168 ಮಂದಿ ಉತ್ತೀರ್ಣರಾಗಿದ್ದಾರೆ. ಫಲಿತಾಂಶ ಸುಧಾರಣೆ ಬಯಸಿ 71,964 ವಿದ್ಯಾರ್ಥಿಗಳು ಪರೀಕ್ಷೆ-2ನ್ನು ಬರೆದಿದ್ದು, ಈ ಪೈಕಿ 41,719 ವಿದ್ಯಾರ್ಥಿಗಳ ಅಂಕ ಹೆಚ್ಚಳವಾಗಿದೆ. 28,617 ಮಂದಿ ಅಂಕ ಕಡಿಮೆಯಾಗಿದೆ. 1,628 ವಿದ್ಯಾರ್ಥಿಗಳ ಅಂಕಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಪರೀಕ್ಷೆ-2ರಲ್ಲಿಯೂ ಬಾಲಕಿಯರೇ ಮೈಲುಗೈ ಸಾಧಿಸಿದ್ದು, ಶೇ.36.68ರಷ್ಟು ಉತ್ತೀರ್ಣತೆ ದಾಖಲಾಗಿದೆ. 69,263 ಬಾಲಕಿಯರು ಪರೀಕ್ಷೆಯನ್ನು ಬರೆದಿದ್ದು, 25,197 ಮಂದಿ ಉತ್ತೀರ್ಣರಾಗಿದ್ದಾರೆ. 84,357 ಬಾಲಕರು ಪರೀಕ್ಷೆಯನ್ನು ಬರೆದಿದ್ದು, 28,971 ಬಾಲಕರು ತೇರ್ಗಡೆಯಾಗಿದ್ದಾರೆ. ಶೇ.34.34 ಉತ್ತೀರ್ಣತೆ ದಾಖಲಾಗಿದೆ.
ಕಲಾ ವಿಭಾಗದಲ್ಲಿ 80,499 ಪರೀಕ್ಷೆಯನ್ನು ಬರೆದಿದ್ದು, 20,427 ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 58,903 ಪರೀಕ್ಷೆಯನ್ನು ಬರೆದಿದ್ದು, 21,052 ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ 54,675 ಪರೀಕ್ಷೆಯನ್ನು ಬರೆದಿದ್ದು, 19,213 ಉತ್ತೀರ್ಣರಾಗಿದ್ದಾರೆ.
ಉತ್ತರ ಪತ್ರಿಕೆಯ ಸ್ಕ್ಯಾನ್ ಪ್ರತಿಗಾಗಿ ಅರ್ಜಿ ಸಲ್ಲಿಸಲು ಮೇ 22ರವರೆಗೆ ಅವಕಾಶ ನೀಡಲಾಗಿದೆ. ಉತ್ತರ ಪತ್ರಿಕೆಯ ಸ್ಕ್ಯಾನ್ ಪ್ರತಿ ಡೌನ್‍ಲೋಡ್ ಮಾಡಿಕೊಳ್ಳಲು ಮೇ 24ರವರೆಗೆ ಅವಕಾಶ ನೀಡಲಾಗಿದೆ. ಮರುಮೌಲ್ಯಮಾಪನಕ್ಕಾಗಿ ಹಾಗೂ ಮರುಎಣಿಕೆಗಾಗಿ ಅರ್ಜಿ ಸಲ್ಲಿಸಲು ಮೇ 25ರವರೆಗೆ ಅವಕಾಶ ನೀಡಲಾಗಿದೆ.