×
Ad

ಲೈಂಗಿಕ ದೌರ್ಜನ್ಯ-ಹತ್ಯೆ ಪ್ರಕರಣ | ಪ್ರಜ್ವಲ್, ದರ್ಶನ್, ಬಿಎಸ್‌ವೈ, ಸೂರಜ್‌ ವಿರುದ್ಧ ರಮ್ಯಾ ವಾಗ್ದಾಳಿ

Update: 2024-06-22 13:40 IST

ನಟಿ ರಮ್ಯಾ 

ಬೆಂಗಳೂರು : ಲೈಂಗಿಕ ದೌರ್ಜನ್ಯ ಹಾಗೂ ಹತ್ಯೆ ಆರೋಪಗಳನ್ನು ಎದುರಿಸುತ್ತಿರುವ ನಟ ದರ್ಶನ್‌, ಪ್ರಜ್ವಲ್‌ ರೇವಣ್ಣ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸೂರಜ್‌ ರೇವಣ್ಣ ವಿರುದ್ಧ ಮಾಜಿ ಸಂಸದೆ, ನಟಿ, ರಮ್ಯಾ ವಾಗ್ದಾಳಿ ನಡೆಸಿದ್ದಾರೆ.

ಈ ಬಗ್ಗೆ  ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಅವರು, ‘ಕಾನೂನನ್ನು ಉಲ್ಲಂಘಿಸಿ ಸುದ್ದಿಯಲ್ಲಿರುವವರು ಶ್ರೀಮಂತರು ಮತ್ತು ಶಕ್ತಿಶಾಲಿಗಳು. ಇವರ ಹಿಂಸಾತ್ಮಕ ಕೃತ್ಯಗಳಿಂದಾಗಿ ಬಡವರು, ಮಹಿಳೆಯರು ಮತ್ತು ಮಕ್ಕಳ ಬಾಳು ಹಾಳಾಗಿದೆ. ಈ ಅಪರಾಧಗಳನ್ನು ಹೊರಗೆ ತಂದ ಪೊಲೀಸರಿಗೆ ಮತ್ತು ಮಾಧ್ಯಮಗಳಿಗೆ ಅಭಿನಂದನೆಗಳು. ವಿಚಾರಣೆ ತ್ವರಿತಗೊಳಿಸಿ ಪ್ರಕರಣಕ್ಕೆ ತಾರ್ತಿಕ ಅಂತ್ಯ ಕಂಡಾಗ ನಿಜವಾದ ನ್ಯಾಯ ಸಿಗುತ್ತದೆ. ನ್ಯಾಯವು ಮೇಲುಗೈ ಸಾಧಿಸದಿದ್ದರೆ, ನಾವು ಸಾರ್ವಜನಿಕರಿಗೆ ಯಾವ ಸಂದೇಶವನ್ನು ನೀಡುತ್ತೇವೆ?’ ಎಂದು ಬರೆದುಕೊಂಡಿದ್ದಾರೆ.

ಈ ಹಿಂದೆಯೂ ದರ್ಶನ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಅಧಿಕೃತ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಪ್ರತಿಕ್ರಿಯಿಸಿ ಪೋಸ್ಟ್ ಹಾಕಿದ್ದ ಅವರು, "ಕಾನೂನನ್ನು ಯಾರೂ ಕೈಗೆತ್ತಿಕೊಳ್ಳಬಾರದು. ಯಾವುದೇ ಕಾರಣಕ್ಕೂ ನೀವು ಜನರನ್ನು ಹೊಡೆಯಲು ಅಥವಾ ಕೊಲ್ಲಲು ಮುಂದಾಗಬೇಡಿ. ನ್ಯಾಯ ಸಿಗುತ್ತದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ನಿಮಗೆ ಗೊಂದಲವಿದ್ದರೂ ಕೂಡ ಒಂದು ದೂರು ನೀಡಿದರೆ ಸಾಕು ಎಂದು ಹೇಳಿದ್ದರು.

ʼಪೊಲೀಸ್ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿರುವ ಬಗ್ಗೆ ಮೆಚ್ಚುಗೆ ಮತ್ತು ಗೌರವದ ಮಾತು. ಇದು ಕೃತಜ್ಞತೆಯಿಲ್ಲದ ಕೆಲಸ ಮತ್ತು ಅವರು ತಮ್ಮ ಕೆಲಸವನ್ನು ಅತ್ಯುತ್ತಮವಾಗಿ ಮಾಡುತ್ತಿದ್ದಾರೆ. ಅವರು ರಾಜಕೀಯ ಪಕ್ಷಗಳ ಒತ್ತಡಕ್ಕೆ ಮಣಿಯುವುದಿಲ್ಲ. ಕಾನೂನು ಮತ್ತು ನ್ಯಾಯದಲ್ಲಿ ಜನರು ನಂಬಿಕೆ ಇಡುವಂತೆ ಮಾಡುತ್ತಿದ್ದಾರೆ ಎಂದು ನಾನು ನಿಜವಾಗಿಯೂ ಭಾವಿಸುತ್ತೇನೆʼ ಎಂದು ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News