×
Ad

ಶಾಸಕ ಸ್ಥಾನಕ್ಕೆ ಶಿವಾನಂದ ಎಸ್. ಪಾಟೀಲ ರಾಜೀನಾಮೆ

Update: 2025-05-02 14:06 IST

ಬೆಂಗಳೂರು : ಬಿಜೆಪಿ ಪಕ್ಷದಿಂದ ಉಚ್ಚಾಟಿತನಾಗಿರುವ ವಿಜಯಪುರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಂದ ಚುನಾವಣೆ ಎದುರಿಸುವ ಸವಾಲು ಸ್ವೀಕರಿಸಿರುವ ಕೃಷಿ, ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಅವರು ತಮ್ಮ ಶಾಸಕ ಸ್ಥಾನಕ್ಕೆ ಏಕಾಏಕಿ ರಾಜೀನಾಮೆ ಸಲ್ಲಿಸಿದ್ದಾರೆ.

ಶುಕ್ರವಾರ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಅವರನ್ನು ಖುದ್ದು ಭೇಟಿ ಮಾಡಿದ ಸಚಿವ ಶಿವಾನಂದ ಪಾಟೀಲ್ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದು, ‘ಶಾಸಕ ಸ್ಥಾನಕ್ಕೆ ಬಸವನಗೌಡ ಪಾಟೀಲ್ ಯತ್ನಾಳ್ ರಾಜೀನಾಮೆ ನೀಡಿದರೆ ಮಾತ್ರ ತನ್ನ ರಾಜೀನಾಮೆ ಪತ್ರ ಅಂಗೀಕರಿಸಬೇಕು’ ಎಂದು ಉಲ್ಲೇಖಿಸಿದ್ದಾರೆ.

ರಾಜೀನಾಮೆ ಪತ್ರ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಾನಂದ ಪಾಟೀಲ್, ‘ವೈಯಕ್ತಿಕ ಕಾರಣಕ್ಕೆ ರಾಜೀನಾಮೆ ನೀಡಿದ್ದೇನೆ. ಇದಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಇದು ವೈಯಕ್ತಿಕ ತೀರ್ಮಾನವಾಗಿದ್ದು, ಯತ್ನಾಳ ರಾಜೀನಾಮೆ ನೀಡಿ ನನ್ನ ವಿರುದ್ಧ ಚುನಾವಣೆ ಎದುರಿಸಲಿ’ ಎಂದು ಸವಾಲು ಹಾಕಿದರು.

ವಿಜಯಪುರದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ನಿಂದನೆ ಮಾಡಿದ್ದರು. ನನ್ನ ಪೂರ್ವಜರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ವೈಯಕ್ತಿಕವಾಗಿ ತೇಜೋವಧೆ ಮಾಡಿದ್ದಾರೆ. ಇಂತಹ ಮಾತುಗಳನ್ನು ಸಹಿಸುವುದಕ್ಕೆ ಆಗುವುದಿಲ್ಲ. ಹಾಗಾಗಿ, ಸ್ಪೀಕರ್‍ಗೆ ರಾಜೀನಾಮೆ ಕೊಟ್ಟು ಬಂದಿದ್ದೇನೆ ಎಂದ ಅವರು, ಯತ್ನಾಳ್ ಸವಾಲನ್ನು ಸ್ವೀಕರಿಸಿದ್ದೇನೆ. ಯತ್ನಾಳ್ ಅವರು ರಾಜೀನಾಮೆ ನೀಡಲಿ, ನಾನು ವಿಜಯಪುರದಲ್ಲಿ ಚುನಾವಣೆ ಎದುರಿಸುತ್ತೇನೆ. ಇಲ್ಲವೇ, ನೀವು (ಯತ್ನಾಳ್) ಬಸವನ ಬಾಗೇವಾಡಿಗೆ ಬಂದು ಚುನಾವಣೆಯಲ್ಲಿ ಸ್ಪರ್ಧಿಸಿ ಎಂದು ಸವಾಲು ಹಾಕಿದರು.

ನಾನು ಬಸವನಬಾಗೇಡಿ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದೇನೆ. ನೀವು ರಾಜೀನಾಮೆ ನೀಡಿ ಎಂದು ಅವರು ಶುಕ್ರವಾರದ ವರೆಗೆ ನನಗೆ ಗಡುವು ಕೊಟ್ಟಿದ್ದರು. ಅದರಂತೆ ನಾನು ಸ್ಪೀಕರ್‌ಗೆ ರಾಜೀನಾಮೆ ನೀಡಿದ್ದೇನೆ. ಯತ್ನಾಳ್ ಅವರಿಗಿಂತ ಮುಂಚೆಯೇ ನನ್ನ ರಾಜೀನಾಮೆ ಪಡೆಯಲು ಮನವಿ ಮಾಡಿದ್ದೇನೆ ಎಂದು ಅವರು ಉಲ್ಲೇಖಿಸಿದರು.

ಪರಿಶೀಲನೆ ಮಾಡುವೆ: ‘ಸಚಿವ ಶಿವಾನಂದ ಪಾಟೀಲ್ ರಾಜೀನಾಮೆ ನೀಡಿದ್ದಾರೆ. ಅವರಿಗೆ ಇನ್ನೊಬ್ಬರು ಶಾಸಕರು ವೈಯಕ್ತಿಕ ಸವಾಲು ಹಾಕಿದ್ದಾರೆ. ಸವಾಲು ಸ್ವೀಕಾರ ಮಾಡಿ ರಾಜೀನಾಮೆ ನೀಡಿದ್ದಾರೆ. ಸವಾಲು ಹಾಕಿದ್ದವರು ರಾಜೀನಾಮೆ ನೀಡಿದ ಬಳಿಕ ಅಂಗೀಕಾರ ಮಾಡಿ ಅಂದಿದ್ದಾರೆ. ನಾನು ಸಂವಿಧಾನ ಪ್ರಕಾರ ಪರಿಶೀಲನೆ ಮಾಡುತ್ತೇವೆ. ಅವರ ವಿಚಾರವನ್ನು ಲಿಖಿತ ರೂಪದಲ್ಲಿ ಈಗ ಕೊಟ್ಟಿದ್ದಾರೆ. ರಾಜೀನಾಮೆ ಕೊಡುವುದು ಅವರ ಹಕ್ಕು. ಇದು ಸರಿ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಿ ನಿರ್ಣಯ ಮಾಡುತ್ತೇವೆ’

-ಯು.ಟಿ.ಖಾದರ್, ವಿಧಾನಸಭಾ ಸ್ಪೀಕರ್

ರಾಜೀನಾಮೆ ಪತ್ರದಲ್ಲಿ ಏನಿದೆ?: ‘ವಿಜಯಪುರ ನಗರ ಶಾಸಕರಾದ ಬಸನಗೌಡ ಆರ್. ಪಾಟೀಲ್ (ಯತ್ನಾಳ್) ತಮ್ಮ ವಿಜಯಪುರ ಮತ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ನನ್ನ ವಿರುದ್ಧ ಬಸವನ ಬಾಗೇವಾಡಿ ಮತಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಸವಾಲು ಹಾಕಿದ್ದಾರೆ. ನಾನು ಅವರ ಸವಾಲನ್ನು ಸ್ವೀಕರಿಸಿ, ಅವರ ವಿರುದ್ಧ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದೇನೆ.

ಹಾಗಾಗಿ, ನಾನು ಪ್ರತಿನಿಧಿಸುತ್ತಿರುವ ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ಆದುದರಿಂದ, ಬಸನಗೌಡ ಆರ್.ಪಾಟೀಲ್ (ಯತ್ನಾಳ್) ಸವಾಲು ಹಾಕಿರುವಂತೆ ಅವರ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು. ಅವರ ರಾಜೀನಾಮೆ ಅಂಗೀಕಾರವಾದರೆ ಮಾತ್ರ, ದಯಮಾಡಿ ನನ್ನ ರಾಜೀನಾಮೆಯನ್ನೂ ಅಂಗೀಕರಿಸುವಂತೆ ತಮ್ಮಲ್ಲಿ ಕೋರುತ್ತೇನೆ ಎಂದು ಶಿವಾನಂದ ಪಾಟೀಲ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News