×
Ad

ಶಾಶ್ವತ ನಿವಾಸಿ ಪ್ರಮಾಣ ಪತ್ರ ವಿತರಣೆ | ರಾಜ್ಯ ಸರಕಾರದ ಅಧಿಸೂಚನೆ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಶೋಭಾ ಕರಂದ್ಲಾಜೆ ಪತ್ರ

Update: 2026-07-10 19:30 IST

ಅಮಿತ್‌ ಶಾ(PTI)/ಶೋಭಾ ಕರಂದ್ಲಾಜೆ

ಬೆಂಗಳೂರು : ರಾಜ್ಯ ಸರಕಾರವು ಶಾಶ್ವತ ನಿವಾಸಿ ಪ್ರಮಾಣ ಪತ್ರ ವಿತರಣೆಗೆ ಸಂಬಂಧಿಸಿದಂತೆ ಹೊರಡಿಸಿರುವ ಅಧಿಸೂಚನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂವಿಧಾನಾತ್ಮಕ ಹಾಗೂ ರಾಷ್ಟ್ರೀಯ ಭದ್ರತಾ ಆಧಾರದ ಮೇಲೆ ತಕ್ಷಣ ಮಧ್ಯಪ್ರವೇಶ ಮಾಡುವಂತೆ ಕೋರಿ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದಿದ್ದಾರೆ.

ರಾಜ್ಯ ಸರಕಾರದ ಅಧಿಸೂಚನೆಯು ಸಂವಿಧಾನದ ಆಶಯಗಳಿಗೆ ಧಕ್ಕೆ ತರುತ್ತದೆ. ಅಲ್ಲದೇ, ದೇಶದ ಆಂತರಿಕ ಭದ್ರತೆಗೆ ಬಹು ದೊಡ್ಡ ಕಂಟಕವಾಗಲಿದೆ. ಸಂವಿಧಾನವು ದೇಶದ ಎಲ್ಲ ನಾಗರಿಕರಿಗೂ ಏಕ ಪೌರತ್ವ ಕಲ್ಪಿಸಿದೆ. ಆದರೆ, ಕರ್ನಾಟಕ ಸರಕಾರವು ಯಾವುದೇ ಸಾಂವಿಧಾನಿಕ ಅಥವಾ ಶಾಸನಬದ್ಧ ಮಾನ್ಯತೆ ಇಲ್ಲದ ‘ಶಾಶ್ವತ ನಿವಾಸಿಗಳು’ ಎಂಬ ಪ್ರತ್ಯೇಕ ವರ್ಗವನ್ನು ಸೃಷ್ಟಿಸಲು ಹೊರಟಿದೆ ಎಂದು ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

ಸ್ಥಳೀಯ ಕಂದಾಯ ಅಧಿಕಾರಿಗಳ ಪರಿಶೀಲನೆ ಮತ್ತು ಸ್ಥಳೀಯ ದಾಖಲೆಗಳ ಆಧಾರದ ಮೇಲೆ ಈ ಪ್ರಮಾಣ ಪತ್ರವನ್ನು ನೀಡಬಹುದಾಗಿದೆ. ಇದರಲ್ಲಿ ಭಾರತೀಯ ಪೌರತ್ವವನ್ನು ಕೇಂದ್ರ ಏಜೆನ್ಸಿಗಳ ಮೂಲಕ ಕಡ್ಡಾಯವಾಗಿ ಪರಿಶೀಲಿಸುವ ಯಾವುದೇ ದೃಢವಾದ ವ್ಯವಸ್ಥೆ ಇಲ್ಲ ಎಂದು ಅವರು ದೂರಿದ್ದಾರೆ.

ರಾಜ್ಯ ಸರಕಾರದ ಈ ನಡೆಯಿಂದಾಗಿ ದೇಶದೊಳಗೆ ಅಕ್ರಮವಾಗಿ ನುಸುಳಿರುವ ವಿದೇಶಿಗರು, ಅಕ್ರಮ ವಲಸಿಗರು ಸುಲಭವಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಈ ‘ಶಾಶ್ವತ ನಿವಾಸಿ ಪ್ರಮಾಣಪತ್ರ’ ಪಡೆಯುವ ಅಪಾಯವಿದೆ. ಇವರ ಕೈಗೆ ಈ ಪ್ರಮಾಣ ಪತ್ರ ಸಿಕ್ಕಿದರೆ, ಅವರು ಸರಕಾರದ ಎಲ್ಲ ಸವಲತ್ತುಗಳನ್ನು ಪಡೆದುಕೊಳ್ಳುವ ಅಪಾಯವಿದೆ. ಅಕ್ರಮ ವಲಸಿಗರನ್ನು ಪತ್ತೆ ಹಚ್ಚಿ ಗಡಿಪಾರು ಮಾಡುವ ಕೇಂದ್ರದ ಪ್ರಯತ್ನಕ್ಕೆ ರಾಜ್ಯ ಸರಕಾರದ ನಡೆ ಹಿನ್ನಡೆಯುಂಟು ಮಾಡುತ್ತದೆ ಎಂದು ಅವರು ಹೇಳಿದ್ದಾರೆ.

ಸರಿಯಾದ ಪರಿಶೀಲನೆ ನಡೆಸದೆ ಇಂತಹ ಪ್ರಮಾಣಪತ್ರಗಳನ್ನು ವಿತರಿಸುವುದು ಅಕ್ರಮ ವಲಸಿಗರಿಗೆ ಕಾನೂನಿನ ಮಾನ್ಯತೆ ಕಲ್ಪಿಸಿದಂತಾಗುತ್ತದೆ. ಇದು ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಗಂಭೀರ ಸಂಚಕಾರ ತರಬಹುದು. ಆದುದರಿಂದ, ಕರ್ನಾಟಕ ಖಾಯಂ ನಿವಾಸಿ ಪ್ರಮಾಣಪತ್ರ (ಪಿಆರ್‌ಸಿ), 2026'ರ ಸಾಂವಿಧಾನಿಕ ಸಿಂಧುತ್ವವನ್ನು ಪರಿಶೀಲಿಸಬೇಕು ಎಂದು ಕೋರಿರುವ ಅವರು, ಅಲ್ಲಿಯವರೆಗೆ ಅಧಿಸೂಚನೆಯ ಅನುಷ್ಠಾನವನ್ನು ತಡೆಹಿಡಿಯುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ತಿಳಿಸಿದ್ದಾರೆ.

ಅಲ್ಲದೇ, ಈ ಅಧಿಸೂಚನೆಯನ್ನು ಯಾವ ಶಾಸನಬದ್ಧ ಅಧಿಕಾರದ ಅಡಿಯಲ್ಲಿ ಹೊರಡಿಸಲಾಗಿದೆ ಎಂಬುದರ ಕುರಿತು ರಾಜ್ಯ ಸರಕಾರದಿಂದ ವರದಿ ತರಿಸಿಕೊಳ್ಳಬೇಕು ಎಂದು ಶೋಭಾ ಕರಂದ್ಲಾಜೆ ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News