×
Ad

ರಾಮನ ಹೆಸರಿನಲ್ಲಿ ನಡೆದ ಭ್ರಷ್ಟಾಚಾರ ಪ್ರಶ್ನಿಸಿದಾಗ ಭ್ರಷ್ಟರಿಗಲ್ಲದೇ ಇನ್ನಾರಿಗೆ ಕಸಿವಿಸಿಯಾಗಲು ಸಾಧ್ಯ?: ಬಿ.ಕೆ.ಹರಿಪ್ರಸಾದ್

ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಕೆಪಿಸಿಸಿ ಅಧ್ಯಕ್ಷರಿಂದ ತೀವ್ರ ವಾಗ್ದಾಳಿ

Update: 2026-07-10 16:03 IST

ಬೆಂಗಳೂರು: ಚೆಕ್ ಮೂಲಕ ಲಂಚ ಪಡೆದ ಪ್ರಕರಣದಲ್ಲಿ ಜೈಲಿಗೆ ಹೋದ ದೇಶದ ಮೊದಲ ಮುಖ್ಯಮಂತ್ರಿಯ ಪುತ್ರ ಬಿ.ವೈ.ವಿಜಯೇಂದ್ರ ಇಂದು ಕಾಂಗ್ರೆಸ್ ಗೆ ನೈತಿಕತೆಯ ಪಾಠ ಹೇಳುತ್ತಾರೆ. ಭ್ರಷ್ಟಾಚಾರದ ಬಗ್ಗೆ ತಮ್ಮದೇ ಪಕ್ಷದ ನಾಯಕರಿಂದ ಗಂಭೀರ ಆರೋಪಗಳಿಗೆ ಗುರಿಯಾಗಿರುವ ಬಿ.ಎಸ್.ಯಡಿಯೂರಪ್ಪ, ಈಗಲೂ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪಿ. ಈ ರೀತಿ ಅಸಹಾಯಕ ಅಪ್ರಾಪ್ತ ವಯಸ್ಸಿನ ಹುಡುಗಿಯನ್ನು ಲೈಂಗಿಕವಾಗಿ ಪೀಡಿಸಿದ ಮನೆಯ ಹುಡುಗ ಪ್ರಭು ಶ್ರೀರಾಮಚಂದ್ರನ ಹಣ ಕಳವು ಆರೋಪಿಗಳ ಪರ ವಹಿಸುವುದರಲ್ಲಿ ವಿಶೇಷವೇನೂ ಕಾಣುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರರ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಹರಿಹಾಯ್ದಿದ್ದಾರೆ.

ನ್ಯಾಶನಲ್ ಹೆರಾಲ್ಡ್ ಮೇಲಿನ ಕೇಂದ್ರದ ದುರುದ್ದೇಶದ ಆರೋಪಗಳಿಗೆ ನ್ಯಾಯಾಲಯವೇ ಛೀಮಾರಿ ಹಾಕಿದೆ. ಅಕ್ರಮವಾಗಿದ್ದರೆ ಹನ್ನೆರಡು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವವರು ಕ್ರಮ ತೆಗದುಕೊಳ್ಳುವ ಧೈರ್ಯ ಯಾಕಿಲ್ಲ. ನ್ಯಾಷನಲ್ ಹೆರಾಲ್ಡ್ ಲಾಭ ಮಾಡುವ ಸಂಸ್ಥೆಯಲ್ಲ, ಜನಸೇವೆ ಮಾಡುವ ಟ್ರಸ್ಟ್. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಬಗ್ಗೆ ಮಾತನಾಡುವ ನೈತಿಕತೆ ಇದೆಯಾ ಈ ಬೇಬಿ ಯಡಿಯೂರಪ್ಪರಿಗೆ? ಅಷ್ಟಕ್ಕೂ ಅಯೋಧ್ಯೆಯಲ್ಲಿ ಭ್ರಷ್ಟಾಚಾರ ನಡೆದಿರುವುದು, ಜನ ಸಾಮಾನ್ಯರ ದೇಣಿಗೆಯನ್ನು ನುಂಗಿ ನೀರು ಕುಡಿದಿದ್ದು, ಯಾವುದೇ ರಶೀದಿ ಇಲ್ಲದೆ ಕೋಟ್ಯಂತರ ಹಣ ಲೂಟಿ ಹೊಡೆದಿದ್ದಾರೆ ಎಂಬುದನ್ನು ಇಡೀ ದೇಶ ನೋಡಿದೆ. ಬಿಜೆಪಿ ಪಕ್ಷದ ಸರಕಾರವೇ ಇರುವ ಉತ್ತರ ಪ್ರದೇಶ ಸರಕಾರ ಈ ಸಂಬಂಧ ಎಸ್ಐಟಿ ತನಿಖೆ ನಡೆಸುತ್ತಿದೆ. ಹೀಗಿರುವಾಗ ರಾಮನ ಹೆಸರಿನಲ್ಲಿ ನಡೆದ ಭ್ರಷ್ಟಾಚಾರವನ್ನು ನಾವು ಪ್ರಶ್ನಿಸಿದಾಗ ಭ್ರಷ್ಟರಿಗಲ್ಲದೇ ಇನ್ನಾರಿಗೆ ಕಸಿವಿಸಿಯಾಗಲು ಸಾಧ್ಯ ? ಎಂದವರು ಪ್ರಶ್ನಿಸಿದ್ದಾರೆ.

ಬಿ.ವೈ.ವಿಜಯೇಂದ್ರ ಇನ್ನೂ ರಾಜಕೀಯದಲ್ಲಿ ಎಳಸು. ರಾಮಮಂದಿರ ಹಗರಣವನ್ನು ಸಿಬಿಐಗೆ ವಹಿಸಬೇಕು ಎಂದರೆ ಸಿಬಿಐಯನ್ನು ನಂಬುತ್ತೇವೆ ಎಂದಲ್ಲ. ಸಿಬಿಐ ತನಿಖೆಗಾಗಿ ಒತ್ತಾಯಿಸುವುದರ ಉದ್ದೇಶ, ಪ್ರಕರಣವನ್ನು ರಾಜ್ಯ ಸರಕಾರದ ಅಥವಾ ಸ್ಥಳೀಯ ಪೊಲೀಸರ ಪ್ರಭಾವದಿಂದ ದೂರವಿಟ್ಟು ಸ್ವತಂತ್ರ ಸಂಸ್ಥೆಯ ಮೂಲಕ ತನಿಖೆ ನಡೆಸುವಂತೆ ಆಗ್ರಹಿಸುವುದು. ಹಾಗಂತ, ಬಿಜೆಪಿ ಕಾಲದಲ್ಲಿ ಸಿಬಿಐ ಸೇರಿದಂತೆ ಯಾವುದೇ ತನಿಖಾ ಸಂಸ್ಥೆಯ ಕಾರ್ಯವೈಖರಿ, ಅದರ ತನಿಖೆಯ ನಿಷ್ಪಕ್ಷ ಮತ್ತು ಅಂತಿಮ ವರದಿಯನ್ನು ಪ್ರಶ್ನಿಸುವ ಅಥವಾ ವಿಮರ್ಶಿಸುವ ಹಕ್ಕು ನಮಗೆ ಇರುತ್ತದೆ ಎಂದು ಸ್ಪಷ್ಟಪಡಿಸಿದರು.

ಬಿ.ವೈ.ವಿಜಯೇಂದ್ರ ಹಳೆಯ ದಾಖಲೆ ತೆಗೆದು ನೋಡಬೇಕು. ಅವರ ತಂದೆ ಬಿ.ಎಸ್.ಯಡಿಯೂರಪ್ಪ ಜೈಲಿಗೆ ಹೋಗುವ ಮೊದಲು ಎಷ್ಟು ಪ್ರಕರಣ ಸಿಬಿಐಗೆ ವಹಿಸಿದ್ದರು ? ಯಡಿಯೂರಪ್ಪ ಜೈಲಿಗೆ ಹೋದ ಬಳಿಕ ಬಂದ ಬಿಜೆಪಿ ಮುಖ್ಯಮಂತ್ರಿಗಳು ಎಷ್ಟು ಪ್ರಕರಣವನ್ನು ಸಿಬಿಐಗೆ ವಹಿಸಿದರು ? ಕೇಂದ್ರದಲ್ಲಿ ಯುಪಿಎ ಇರುವವರೆಗೆ ರಾಜ್ಯದ ಬಿಜೆಪಿ ಸರ್ಕಾರವು ಯಾವ ಪ್ರಕರಣವನ್ನೂ ಸಿಬಿಐಗೆ ವಹಿಸಿಲ್ಲ. ಆದರೆ 2013 ರ ಕಾಂಗ್ರೆಸ್ ರಾಜ್ಯ ಸರ್ಕಾರವು ಸಿಬಿಐ ವಿರುದ್ಧ ಹೋರಾಡುತ್ತಲೇ ಹಲವು ಪ್ರಕರಣಗಳನ್ನು ಸಿಬಿಐಗೆ ವಹಿಸಿತ್ತು. ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿ ಇದ್ದಾಗಲೇ ಸಿಬಿಐಗೆ ಕಾಂಗ್ರೆಸ್ ವಹಿಸಿದ ಎಲ್ಲಾ ಪ್ರಕರಣಗಳಲ್ಲೂ ನಮಗೆ ಕ್ಲೀನ್ ಚಿಟ್ ಸಿಕ್ಕಿದೆ. ಅದು ಸಿಬಿಐ ನ್ಯಾಯ ನೀಡಿದೆ ಎಂದಲ್ಲ, ನಾವು ನ್ಯಾಯಯುತವಾಗಿಯೇ ಬದುಕಿದ್ದೇವೆ, ರಾಜಕಾರಣ ಮಾಡಿದ್ದೇವೆ ಎಂದರ್ಥ ಎಂದು ಬಿ.ಕೆ.ಹರಿಪ್ರಸಾದ್ ಹೇಳಿದರು.

ರಾಮ ಮುಖ್ಯವೋ, ರಾಮನ ಹಣ ಕದ್ದವರು ಮುಖ್ಯವೋ ಎಂದು ವಿಜಯೇಂದ್ರರನ್ನು ಕೇಳಿದರೆ, ರಾಮನ ಹಣ ಕದ್ದವರ ಜೊತೆ ಸೇರಿಕೊಳ್ಳುತ್ತಾರೆ ಎಂದು ಅವರ ಹೇಳಿಕೆಯ ಮೂಲಕ ಜನ ಅರ್ಥ ಮಾಡಿಕೊಳ್ಳುತ್ತಾರೆ.

ರಾಮನಿಗೆ ನೀಡಿದ ದೇಣಿಗೆ ಲೂಟಿಗೆ ಪ್ರಧಾನಿ ನರೇಂದ್ರ ಮೋದಿಯ ರಾಜೀನಾಮೆ ಕೇಳದೇ ಇನ್ಯಾರ ರಾಜೀನಾಮೆ ಕೇಳಬೇಕು ? ರಾಮ ಮಂದಿರಕ್ಕೆ ಅಡಿಗಲ್ಲು ಹಾಕಿದ್ದು ಮೋದಿ, ರಾಮಮಂದಿರ ಕಟ್ಟಿದ್ದು ಮೋದಿ, ರಾಮಮಂದಿರಕ್ಕೆ ಪೈಂಟ್ ಮಾಡುವಾಗ ಪರಿಶೀಲನೆ ಮಾಡಿದ್ದು ಮೋದಿ, ರಾಮ ಮಂದಿರ ಉದ್ಘಾಟನೆ ಮಾಡಿದ್ದು ಮೋದಿ, ಅರ್ಚಕರ ಬದಲು ರಾಮನ ಪ್ರತಿಷ್ಠಾಪನೆ ಮಾಡಿದ್ದು ಮೋದಿ, ಟ್ರಸ್ಟ್ ರಚಿಸಿದ್ದು ಮೋದಿ, ಟ್ರಸ್ಟ್ ಗೆ ಸದಸ್ಯರನ್ನು ನೇಮಿಸಿದ್ದು ಮೋದಿ ! ಈಗ ಟ್ರಸ್ಟ್, ಬಿಜೆಪಿ, ಆರೆಸ್ಸೆಸ್ ನಾಯಕರು ಒಟ್ಟುಗೂಡಿ ರಾಮನ ಹುಂಡಿ ಹಣ ಲೂಟಿ ಮಾಡಿದರೆ ಮೋದಿಯ ರಾಜೀನಾಮೆ ಕೇಳದೇ ಇನ್ನಾರ ರಾಜೀನಾಮೆ ಕೇಳಬೇಕು? ಎಂದು ಪ್ರಶ್ನಿಸಿದ್ದಾರೆ..

ಮರ್ಯಾದಾ ಪುರುಷೋತ್ತಮ ರಾಮ ತಂದೆ ನೀಡಿದ ವಚನ ಪಾಲನೆಗಾಗಿ ವನವಾಸ ಹೋದರೆ, ಯಡಿಯೂರಪ್ಪನವರು ಅವರ ಪುತ್ರ ವಿಜಯೇಂದ್ರನಿಗಾಗಿ ಸಿಕ್ಕಸಿಕ್ಕ ಕಡೆಯೆಲ್ಲಾ ಸಹಿ ಮಾಡಿ, ಲಂಚ ಪಡೆದು ಜೈಲುವಾಸ ಅನುಭವಿಸಿದರು. ಹಾಗಾಗಿ ವಿಜಯೇಂದ್ರರು ಸದ್ಯ ಬಿಜೆಪಿಯೊಳಗಿನ ಅಸಮಾಧಾನವನ್ನು ತಣಿಸಿ ರಾಜ್ಯಾಧ್ಯಕ್ಷ ಸ್ಥಾನವನ್ನು ಉಳಿಸಿಕೊಳ್ಳುವ ಕಡೆ ಗಮನ ಹರಿಸಬೇಕು. ರಾಮ ಮಂದಿರ ಹಗರಣದ ಬಗ್ಗೆ ಪ್ರಶ್ನೆ ಕೇಳುವ ಕಾಂಗ್ರೆಸ್ಸಿಗರನ್ನು ಟೀಕಿಸುವ ಯಾವ ನೈತಿಕತೆಯೂ ವಿಜಯೇಂದ್ರರಿಗಿಲ್ಲ ಎಂಬುದನ್ನು ಅರಿತರೆ ಒಳ್ಳೆಯದು ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News