ಎನ್ಯುಮರೇಷನ್ ಫಾರಂ ವಿತರಣೆಯಲ್ಲಿ ಕರ್ತವ್ಯ ಲೋಪ ಆರೋಪ | 35 ಬಿಎಲ್‍ಒಗಳಿಗೆ ಶೋಕಾಸ್ ನೋಟಿಸ್ : ಮುಖ್ಯ ಚುನಾವಣಾಧಿಕಾರಿ
"ಶೇ.80ರಷ್ಟು ಗಣತಿ ನಮೂನೆಗಳನ್ನು ವಿತರಣೆ"
ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್
ಬೆಂಗಳೂರು : ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‍ಐಆರ್)ಗೆ ಸಂಬಂಧಿಸಿದಂತೆ ಎನ್ಯುಮರೇಷನ್ ಫಾರಂ(ಗಣತಿ ನಮೂನೆ)ಗಳನ್ನು ವಿತರಣೆ ಮಾಡುವಲ್ಲಿ ಕರ್ತವ್ಯ ಲೋಪ ಎಸಗಿದ ಆರೋಪದಡಿ 35 ಮಂದಿ ಬೂತ್ ಮಟ್ಟದ ಅಧಿಕಾರಿ (ಬಿಎಲ್‍ಒ)ಗಳಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ತಿಳಿಸಿದ್ದಾರೆ.
ಬುಧವಾರ ನಗರದ ಶೇಷಾದ್ರಿ ರಸ್ತೆಯಲ್ಲಿರುವ ಮುಖ್ಯ ಚುನಾವಣಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರೀಯ ಚುನಾವಣಾ ಆಯೋಗದ ನಿರ್ದೇಶನದಂತೆ ಬಿಎಲ್‍ಒಗಳು ಕಡ್ಡಾಯವಾಗಿ ಮತದಾರರ ಮನೆ ಮನೆಗೆ ಹೋಗಿ ಗಣತಿ ನಮೂನೆಗಳನ್ನು ವಿತರಣೆ ಮಾಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಆದರೆ, ಕೆಲವು ಕಡೆ ಬಿಎಲ್‍ಒಗಳು ಮತದಾರರನ್ನು ಕರೆಸಿಕೊಂಡು ಗುಂಪು ಗುಂಪಾಗಿ ಸೇರಿಸಿ ಗಣತಿ ನಮೂನೆಗಳನ್ನು ವಿತರಿಸುವ ಕುರಿತು ದೂರುಗಳ ಬಂದ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಬಿಎಲ್‍ಒಗಳಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಹೇಳಿದರು.
ರಾಜ್ಯದಲ್ಲಿ ಅತ್ಯಂತ ಉತ್ತಮ ರೀತಿಯಲ್ಲಿ ಗಣತಿ ನಮೂನೆಗಳನ್ನು ವಿತರಣೆ ಮಾಡಲಾಗುತ್ತಿದೆ. ಅದಾಗ್ಯೂ, ಎಸ್‍ಐಆರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಬರುವಂತಹ ದೂರುಗಳನ್ನು ಗಂಭೀರವಾಗಿ ಪರಿಗಣಿಸುತ್ತಿದ್ದೇವೆ. ಬಿಎಲ್‍ಒಗಳ ವಿರುದ್ಧದ ದೂರಿಗೆ ಸಂಬಂಧಿಸಿದಂತೆ ಕೇಂದ್ರೀಯ ಚುನಾವಣಾ ಆಯೋಗಕ್ಕೂ ವರದಿ ಕಳುಹಿಸಲಾಗಿದೆ ಎಂದು ಅವರು ತಿಳಿಸಿದರು.
ಆನ್‍ಲೈನ್ ಮೂಲಕ ಎನ್ಯುಮರೇಷನ್ ಫಾರಂ ಭರ್ತಿಗೆ ಅವಕಾಶ: ಗಣತಿ ನಮೂನೆ(ಎನ್ಯುಮರೇಷನ್ ಫಾರಂ)ಗಳನ್ನು ಆನ್ ಲೈನ್ ಮೂಲಕ(ವೆಬ್‍ಸೈಟ್ https://voters.eci.gov.in/ ) ಭರ್ತಿ ಮಾಡುವ ಸೌಲಭ್ಯವು ಲಭ್ಯವಿದೆ. ಈಗಾಗಲೆ, 1,63,108 ಮಂದಿ ಆನ್‍ಲೈನ್ ಮೂಲಕ ಗಣತಿ ನಮೂನೆ ಭರ್ತಿ ಮಾಡಿದ್ದಾರೆ ಎಂದು ಅವರು ಹೇಳಿದರು.
ಅಂತಹವರು ಪುನಃ ಭೌತಿಕವಾಗಿ ಅರ್ಜಿಯನ್ನು ತುಂಬುವ ಅಗತ್ಯವಿಲ್ಲ. ಏಕೆಂದರೆ, ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಕೆಯಾಗುತ್ತಿದ್ದಂತೆ ಅದರ ಮಾಹಿತಿ ಸಂಬಂಧಪಟ್ಟ ಬಿಎಲ್‍ಒಗೆ ಹೋಗುತ್ತದೆ. ಆನಂತರ, ಬಿಎಲ್‍ಒ ಪರಿಶೀಲನೆ ಮಾಡಿ ಮುಂದಿನ ಕ್ರಮ ಕೈಗೊಳ್ಳುತ್ತಾರೆ ಎಂದು ಅನ್ಬುಕುಮಾರ್ ತಿಳಿಸಿದರು.
ಅದೇ ರೀತಿ, ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಿರುವ ಕಾರಣದಿಂದ ಭೌತಿಕವಾಗಿ ಭರ್ತಿ ಮಾಡಿದ ಅರ್ಜಿಯನ್ನು ಸ್ವೀಕರಿಸುವುದಿಲ್ಲ ಎಂದು ಬಿಎಲ್‍ಒ ಹೇಳುವಂತಿಲ್ಲ. ಒಂದು ವೇಳೆ ಆನ್‍ಲೈನ್‍ನಲ್ಲಿ ಭರ್ತಿ ಮಾಡಿರುವ ವಿವರಗಳಲ್ಲಿ ತಪ್ಪು ಇದ್ದರೆ ಜು.29ರೊಳಗೆ ತಿದ್ದುಪಡಿ ಮಾಡಲು ಬಿಎಲ್‍ಒಗಳಿಗೆ ಅವಕಾಶ ಕಲ್ಪಿಸಲಾಗಿದೆ. ಮತದಾರರು ಆನ್‍ಲೈನ್ ಅಥವಾ ಭೌತಿಕ ಅರ್ಜಿ ಪೈಕಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಂಡರೆ ಗೊಂದಲಗಳು ಇರುವುದಿಲ್ಲ ಎಂದು ಮುಖ್ಯ ಚುನಾವಣಾಧಿಕಾರಿ ತಿಳಿಸಿದರು.
ಗಣತಿ ನಮೂನೆಗಳನ್ನು ವಿತರಿಸಿ, ಸಂಗ್ರಹಿಸಲು ಜು.29ರವರೆಗೆ ಕಾಲಾವಕಾಶವಿದೆ. ಈಗಾಗಲೆ, ಶೇ.80ರಷ್ಟು ಗಣತಿ ನಮೂನೆಗಳನ್ನು ವಿತರಣೆ ಮಾಡಲಾಗಿದೆ. ಯಾರ ಮನೆಗೆ ಗಣತಿ ನಮೂನೆ ತಲುಪಿಲ್ಲವೋ ಅವರಿಗೆ ಬಿಎಲ್‍ಒಗಳು ತಲುಪಿಸಲಿದ್ದಾರೆ. ಚುನಾವಣಾ ಆಯೋಗದ ವೆಬ್‍ಸೈಟ್‍ನಲ್ಲಿ ಬಿಎಲ್‍ಒಗಳ ಸಂಪರ್ಕ ಸಂಖ್ಯೆಯನ್ನು ಪ್ರಕಟಿಸಲಾಗಿದ್ದು, ಅಗತ್ಯವಿರುವವರು ಅವರಿಗೆ ಸಂಪರ್ಕ ಮಾಡಬಹುದು ಎಂದು ಅವರು ಹೇಳಿದರು.
ಎಸ್‍ಐಆರ್ ಪ್ರಕ್ರಿಯೆ ಪ್ರಾರಂಭವಾದ ನಂತರ ರಾಜ್ಯ ಸರಕಾರವು ಮತದಾರರಿಗೆ ಶಾಶ್ವತ ನಿವಾಸ ಪ್ರಮಾಣ ಪತ್ರವನ್ನು ನೀಡಲು ಆದೇಶ ಹೊರಡಿಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯ ಚುನಾವಣಾಧಿಕಾರಿ, ಈ ಹಂತದಲ್ಲಿ ನಾನು ಯಾವುದೆ ಪ್ರತಿಕ್ರಿಯೆ ನೀಡುವುದಿಲ್ಲ. ಆ.5ರಂದು ನಡೆಯಲಿರುವ ಅರ್ಜಿಗಳ ಪರಿಶೀಲನಾ ಹಂತದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಎಸ್‍ಐಆರ್ ಪ್ರಕ್ರಿಯೆ ಯಾವ ರೀತಿ ನಡೆಯುತ್ತಿದೆ ಎಂದು ಮೇಲ್ವಿಚಾರಣೆಗಾಗಿ ದಿಲ್ಲಿಯಿಂದ ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳ ತಂಡ ಬಂದಿದೆ. ಅವರು ರಾಜ್ಯದ ಬೇರೆ ಬೇರೆ ಕಡೆ ಪ್ರವಾಸ ಕೈಗೊಂಡು ಪರಿಶೀಲನೆ ನಡೆಸುತ್ತಾರೆ ಎಂದು ಅನ್ಬುಕುಮಾರ್ ಹೇಳಿದರು.
ಜಿಲ್ಲಾವಾರು ಮಾಹಿತಿ: ಚಿತ್ರದುರ್ಗ ಶೇ.98.95, ದಾವಣಗೆರೆ ಶೇ.98.74, ಉತ್ತರ ಕನ್ನಡ ಶೇ.98.66, ಮಂಡ್ಯ ಶೇ.97.65, ವಿಜಯನಗರ ಶೇ.97.57, ಕೊಪ್ಪಳ ಶೇ.96.59, ಹಾಸನ ಶೇ.95.21, ಯಾದಗಿರಿ ಶೇ.94.92, ಕೋಲಾರ ಶೇ.94.69ರಷ್ಟು ಗಣತಿ ನಮೂನೆಗಳನ್ನು ವಿತರಿಸಿದ್ದರೆ, ಬಿಬಿಎಂಪಿ ಭಾಗದಲ್ಲಿ ಬಿಬಿಎಂಪಿ ಕೇಂದ್ರ ಶೇ.48.54, ಬಿಬಿಎಂಪಿ ಉತ್ತರ ಶೇ.48.25, ಬೆಂಗಳೂರು ನಗರ ಶೇ.46.04 ಹಾಗೂ ಬಿಬಿಎಂಪಿ ದಕ್ಷಿಣದಲ್ಲಿ ಶೇ.44.18ರಷ್ಟು ಮಾತ್ರ ವಿತರಣೆಯಾಗಿದೆ. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದರು.
ವಿಧಾನಸಭಾ ಕ್ಷೇತ್ರವಾರು ಮಾಹಿತಿ: ದೇವದುರ್ಗ ಶೇ.100, ಕುಮಟ ಶೇ.100, ಹಿರೇಕೆರೂರು ಶೇ.100, ಮಾಯಕೊಂಡ ಶೇ.100, ಮೇಲುಕೋಟೆ ಶೇ.99.96, ಹೊಳೆ ನರಸೀಪುರ ಶೇ.99.94, ಕಾರವಾರ ಶೇ.99.93, ರೋಣ ಶೇ.99.91, ಕನಕಗಿರಿ ಶೇ.99.52, ಹಾನಗಲ್ ಶೇ.99.42, ಕೂಡ್ಲಿಗಿ ಶೇ.99.19, ಹಿರಿಯೂರು ಶೇ.99.66, ಚಿತ್ರದುರ್ಗ ಶೇ.99.65, ಚಳ್ಳಕೆರೆ ಶೇ.99.61, ಮೊಳಕಾಲ್ಮೂರು ಶೇ.98.98, ದಾವಣಗೆರೆ ದಕ್ಷಿಣ ಶೇ.99.38, ಕುಷ್ಟಗಿ ಶೇ.98.52, ಯಮಕನಮರಡಿ ಶೇ.98.50ರಷ್ಟು ಗಣತಿ ನಮೂನೆಗಳನ್ನು ವಿತರಿಸಲಾಗಿದೆ ಎಂದು ಅವರು ಹೇಳಿದರು.
ಅದೇ ರೀತಿ, ಬೊಮ್ಮನಹಳ್ಳಿ ಶೇ.36.59, ಹೆಬ್ಬಾಳ ಶೇ.42.39, ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಶೇ.41.25ರಷ್ಟು ಮಾತ್ರ ಪ್ರಗತಿಯಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಗುವುದು ಎಂದು ಅನ್ಬುಕುಮಾರ್ ತಿಳಿಸಿದರು.
ರಾಜ್ಯದಲ್ಲಿ 5,54,32,314 ಮತದಾರರಿದ್ದು, 4,48,16,723 ಗಣತಿ ನಮೂನೆಗಳನ್ನು ವಿತರಣೆ ಮಾಡಿದ್ದು, ಶೇ.80.85ರಷ್ಟು ಪ್ರಗತಿ ಸಾಧಿಸಲಾಗಿದೆ. ಇನ್ನುಳಿದ 1,06,15,591 ಗಣತಿ ನಮೂನೆಗಳನ್ನು ಆದಷ್ಟು ಬೇಗ ಮತದಾರರಿಗೆ ತಲುಪಿಸುವ ಕೆಲಸವನ್ನು ಬಿಎಲ್‍ಒಗಳು ಮಾಡಲಿದ್ದಾರೆ. 224 ವಿಧಾನಸಭಾ ಕ್ಷೇತ್ರಗಳ ಪೈಕಿ 112 ಕ್ಷೇತ್ರಗಳಲ್ಲಿ ಶೇ.90ಕ್ಕಿಂತ ಹೆಚ್ಚು ಪ್ರಗತಿ ಸಾಧಿಸಲಾಗಿದೆ.
53,435 ಮಂದಿ ಮತದಾರರು ಮೃತಪಟ್ಟಿರುವುದು, 65,479 ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡಿರುವುದು, 9,174 ಮಂದಿ ಈಗಾಗಲೆ ಬೇರೆ ಕಡೆ ಮತದಾರರಾಗಿ ನೋಂದಣಿ ಮಾಡಿಕೊಂಡಿರುವುದು ಸೇರಿದಂತೆ 1,30,975 ಮಂದಿಯ ಗಣತಿ ನಮೂನೆಗಳು ಸ್ವೀಕೃತವಾಗಿಲ್ಲ ಎಂದು ಅನ್ಬುಕುಮಾರ್ ತಿಳಿಸಿದ್ದಾರೆ.