ಚುನಾವಣಾ ಆಯೋಗವು ಕೇಂದ್ರ ಸರಕಾರದ ಕೈಗೊಂಬೆ : ಸಚಿವ ಪ್ರಿಯಾಂಕ್ ಖರ್ಗೆ
ಗೃಹ ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು : ಎಸ್‍ಐಆರ್ ಪ್ರಕ್ರಿಯೆ ಕುರಿತಾಗಿ ರಾಜ್ಯ ಸರಕಾರದ ಸಲಹೆ ಮತ್ತು ಆಕ್ಷೇಪಣೆಗಳಿಗೆ ಯಾವುದೇ ರೀತಿಯಲ್ಲಿ ಸ್ಪಂದಿಸದ ಕೇಂದ್ರ ಚುನಾವಣಾ ಆಯೋಗವು, ಬಿಜೆಪಿ-ಜೆಡಿಎಸ್ ಯಾವುದೇ ವಿಷಯವನ್ನು ಪ್ರಸ್ತಾಪಿಸಿದರೆ ಚುನಾವಣಾ ಆಯೋಗ ತಕ್ಷಣ ಸ್ಪಂದಿಸುತ್ತದೆ. ಹೀಗಾಗಿ ಆಯೋಗವು ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಕೈಗೊಂಬೆಯಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರವು ಚುನಾವಣಾ ಆಯೋಗಕ್ಕೆ ಅಧಿಕೃತವಾಗಿ ಸಲಹೆಗಳನ್ನು ಸಲ್ಲಿಸಿದೆ. ಆದರೆ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದರೆ ಬಿಜೆಪಿ ಅಥವಾ ಜೆಡಿಎಸ್ ಯಾವುದೇ ವಿಷಯವನ್ನು ಪ್ರಸ್ತಾಪಿಸಿದರೆ ಚುನಾವಣಾ ಆಯೋಗ ತಕ್ಷಣ ಸ್ಪಂದಿಸುತ್ತದೆ ಎಂದರು.
ಪಶ್ಚಿಮ ಬಂಗಾಳದಲ್ಲಿ ಎಸ್‍ಐಆರ್ ಪ್ರಕ್ರಿಯೆ ಆರಂಭವಾದಾಗ ಬಿಜೆಪಿ ಪ್ರತಿಭಟನೆ ನಡೆಸಿತ್ತು ಎಂದು ನಾನು ಹಿಂದೆಯೇ ಹೇಳಿದ್ದೆ. ಅಲ್ಲಿನ ಎಲ್ಲ ಬೂತ್‍ಮಟ್ಟದ ಅಧಿಕಾರಿಗಳು ಮಮತಾ ಬ್ಯಾನರ್ಜಿ ಅವರ ಪ್ರಭಾವದಲ್ಲಿದ್ದಾರೆ ಎಂದು ಆರೋಪಿಸಿ, ಬಿಜೆಪಿ ದೂರು ನೀಡಿತ್ತು. ನಂತರ ತಾರ್ಕಿಕ ಕೊರತೆ (ಲಾಜಿಕಲ್ ಡಿಸ್ಕ್ರೆಪೆನ್ಸಿ) ಎಂಬ ನಿಯಮವನ್ನು ತಂದು ಅನೇಕರನ್ನು ಪಟ್ಟಿಯಿಂದ ತೆಗೆದುಹಾಕಲಾಯಿತು. ಇದೆಲ್ಲವೂ ಅವರ ನಿಗದಿತ ಕಾರ್ಯವಿಧಾನದ ಭಾಗವಾಗಿದೆ. ಹೀಗೆ ಎಸ್‍ಐಆರ್ ಪ್ರಕ್ರಿಯೆ ನಡೆಯುತ್ತದೆ ಎಂದು ಅವರು ಹೇಳಿದರು.
ಬಿಎಲ್‍ಓಗಳನ್ನು ಕಾಂಗ್ರೆಸ್ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಬಿಜೆಪಿ ಮತ್ತು ಜೆಡಿಎಸ್ ನಾಯಕರು ಆರೋಪ ಮಾಡಿದ್ದಾರೆ. ಆದರೆ ಹೇಗೆ ಮಾಡುತ್ತಿದ್ದಾರೆ ಎಂಬ ಬಗ್ಗೆ ಏನನ್ನು ಹೇಳುತ್ತಿಲ್ಲ ಅವರು ಹೇಳಿದರು.
ಇನ್ನು ಬೆಳಗಾವಿಯಲ್ಲಿ ಆರೆಸ್ಸೆಸ್ ಕಾರ್ಯಕ್ರಮ ನಡೆಯುತ್ತಿದ್ದು, ಅದು ಖಾಸಗಿ ಕಾರ್ಯಕ್ರಮವಾಗಿದೆ. ಅದಕ್ಕೆ ನಮ್ಮ ಅನುಮತಿ ಬೇಕಿಲ್ಲ. ಆದರೆ ಬೀದಿಗಿಳಿದು ಮೆರವಣಿಗೆ ಮಾಡಬೇಕಾದರೆ ನಮ್ಮ ಅನುಮತಿ ಬೇಕಾಗುತ್ತದೆ. ಬೀದಿಗಿಳಿದು ಮೆರವಣಿಗೆ ಮಾಡುವಾಗ ನಮ್ಮ ಅನುಮತಿ ಕೇಳುತ್ತಾರೆ. ಕಾನೂನು ಸುವ್ಯವಸ್ಥೆ ಎಲ್ಲವನ್ನು ನೋಡಿಕೊಂಡು ನಾವು ಅನುಮತಿ ಕೊಡುತ್ತೇವೆ. ಇಲ್ಲದಿದ್ದರೆ ಮುಂದೂಡಿ ಎಂದು ಹೇಳುತ್ತೇವೆ ಎಂದು ಅವರು ಹೇಳಿದರು.
ಕೇಂದ್ರ ಸರಕಾರ ಮಾನದಂಡಗಳ ಪ್ರಕಾರವೇ ವರದಿ ಸಲ್ಲಿಸಬೇಕು. ಆ ವರದಿ ಆಧರಿಸಿ ಕೇಂದ್ರ ಅಧ್ಯಯನ ತಂಡ ಇಲ್ಲಿಗೆ ಬಂದು ವಸ್ತುಸ್ಥಿತಿ ಅಧ್ಯಯನ ಮಾಡಿ ವರದಿ ಕೊಡುತ್ತದೆ. ಮುಖ್ಯಮಂತ್ರಿಗಳು ಬರ ಪರಿಸ್ಥಿತಿಯ ಬಗ್ಗೆ ಈಗಾಗಲೇ ಮಾತನಾಡಿದ್ದಾರೆ. ಪ್ರತಿ ಜಿಲ್ಲೆ, ತಾಲ್ಲೂಕಿಗೆ ಹೋಗಿ ಪರಿಶೀಲನೆ ಮಾಡಿ ವರದಿ ತಯಾರು ಮಾಡುತ್ತೇವೆ. ವರದಿ ಕೊಡುವುದು ನಮ್ಮ ಜವಾಬ್ದಾರಿ. ಪರಿಹಾರ ಘೋಷಣೆ ಮಾಡುವುದು ಕೇಂದ್ರ ಸರಕಾರದ ಜವಾಬ್ದಾರಿ.
-ಪ್ರಿಯಾಂಕ್ ಖರ್ಗೆ, ಗೃಹ ಸಚಿವ