ʼಎಸ್‍ಐಆರ್: 2002ರ ಮತದಾರರ ಪಟ್ಟಿಯಲ್ಲಿರುವಂತೆಯೇ ಮಾಹಿತಿಯನ್ನು ಭರ್ತಿ ಮಾಡಬೇಕುʼ
ಸಾಂದರ್ಭಿಕ ಚಿತ್ರ | Photo Credit : PTI
ಬೆಂಗಳೂರು : ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‍ಐಆರ್)ಗೆ ಸಂಬಂಧಿಸಿದಂತೆ ಚುನಾವಣಾ ಆಯೋಗ ನೀಡಿರುವ ಗಣತಿ ನಮೂನೆ (ಎನ್ಯುಮರೇಷನ್ ಫಾರಂ) ಭರ್ತಿ ಮಾಡುವ ವಿಚಾರದಲ್ಲಿ ಗೊಂದಲಗಳು ಇನ್ನೂ ಮುಂದುವರೆದಿವೆ.
2002ರ ಮತದಾರರ ಪಟ್ಟಿಯಲ್ಲಿರುವ ಹೆಸರುಗಳಲ್ಲಿ ಸಾಕಷ್ಟು ವ್ಯಾಕರಣ ದೋಷಗಳು ಕಂಡು ಬಂದಿರುವುದರಿಂದ, ಮತದಾರರು ತಮ್ಮ ಹೆಸರು ಹಾಗೂ ವಿವರಗಳನ್ನು ಯಾವ ರೀತಿ ಬರೆಯಬೇಕು ಎಂಬ ಗೊಂದಲದಲ್ಲಿದ್ದಾರೆ. ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಚುನಾವಣಾ ಆಯೋಗವು, ಮತದಾರರು ಸೆಲ್ಫ್ ಮ್ಯಾಪಿಂಗ್ ಅಥವಾ ಪ್ರೋಜಿನಿ ಮ್ಯಾಪಿಂಗ್ ಮಾಡುವಾಗ 2002ರಲ್ಲಿನ ಮತದಾರರ ಪಟ್ಟಿಯಲ್ಲಿರುವಂತೆಯೆ ತಮ್ಮ ಮಾಹಿತಿಯನ್ನು ಭರ್ತಿ ಮಾಡುವಂತೆ ತಿಳಿಸಿದೆ.
2002ರ ಮತದಾರರ ಪಟ್ಟಿಯಲ್ಲಿರುವ ಮಾಹಿತಿ ಹಾಗೂ 2025ರ ಮತದಾರರ ಪಟ್ಟಿಯಲ್ಲಿನ ವಿವರಗಳು ತಾಳೆಯಾಗದಿದ್ದರೆ ಚುನಾವಣಾ ನೋಂದಣಾಧಿಕಾರಿ ಮಾಹಿತಿ ಕೋರಿ ನೋಟಿಸ್ ನೀಡುತ್ತಾರೆ. ಆಗ, ಕೇಂದ್ರೀಯ ಚುನಾವಣಾ ಆಯೋಗವು ನಿಗದಿಪಡಿಸಿರುವ 11 ದಾಖಲೆಗಳ ಪೈಕಿ ಯಾವುದಾದರೂ ದಾಖಲೆಯನ್ನು ಚುನಾವಣಾ ನೋಂದಣಾಧಿಕಾರಿ ಎದುರು ಹಾಜರು ಪಡಿಸಿದ್ದಲ್ಲಿ, ಅವರು ಮುಂದಿನ ಕ್ರಮ ಕೈಗೊಳ್ಳುತ್ತಾರೆ.
ಆ.5ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಲಿದ್ದು, ಅದರಲ್ಲಿ ಹೆಸರು ಇಲ್ಲದಿದ್ದರೆ ಅರ್ಜಿ ನಮೂನೆ ಸಂಖ್ಯೆ 6 ಭರ್ತಿ ಮಾಡಿ ಹೊಸದಾಗಿ ಸೇರ್ಪಡೆ ಮಾಡಿಕೊಳ್ಳಲು ಅವಕಾಶವಿದೆ. ಮತದಾರರ ವಿವರಗಳಲ್ಲಿ ತಪ್ಪುಗಳಿದ್ದರೆ ಉದಾಹರಣೆಗೆ ಹೆಸರು, ವಿಳಾಸ ಬದಲಾವಣೆ, ಹೊಸ ಗುರುತಿನ ಚೀಟಿ ಪಡೆಯಲು ಅರ್ಜಿ ನಮೂನೆ ಸಂಖ್ಯೆ 8 ಅನ್ನು ಭರ್ತಿ ಮಾಡಿಕೊಡಬೇಕಿದೆ.
‘ಅಸಂಗತ ವಿವರಗಳಿದ್ದಲ್ಲಿ ಮಾತ್ರ ನೋಟಿಸ್: ಮತದಾರರ ಪಟ್ಟಿಯಲ್ಲಿನ ವಿವರಗಳು ಅಸಂಗತವಾಗಿದ್ದರೆ, ಅಂತಹ ಮತದಾರರನ್ನು ‘Logical Discrepancny ’ ಎಂದು ಪ್ರತ್ಯೇಕಿಸಲಾಗುವುದು. ಉದಾಹರಣೆಗೆ ಮತದಾರರ ಹೆಸರು, ವಯಸ್ಸು, ಅವರ ಹಾಗೂ ಪೋಷಕರ ವಯಸ್ಸಿನ ನಡುವಿನ ಅಂತರ ಕಡಿಮೆ ಇದ್ದರೆ, ಲಿಂಗ ತಪ್ಪಾಗಿ ನಮೂದಿಸಲ್ಪಟಿದ್ದರೆ ನೋಟಿಸ್ ನೀಡಿ, ದಾಖಲೆಗಳನ್ನು ಕೇಳುತ್ತೇವೆ. ಮತದಾರರು ಅಗತ್ಯ ದಾಖಲೆಗಳನ್ನು ಚುನಾವಣಾ ನೋಂದಣಿ ಅಧಿಕಾರಿಗೆ ಸಲ್ಲಿಸಿದರೆ ಅದನ್ನು ಪರಿಶೀಲಿಸಿ, ಸಮಪರ್ಕವಾಗಿದ್ದರೆ ಅವರು ಕಾನೂನು ರೀತಿ ಮುಂದಿನ ಕ್ರಮ ಕೈಗೊಳ್ಳುತ್ತಾರೆ’
-ವಿ.ಅನ್ಬುಕುಮಾರ್, ಮುಖ್ಯ ಚುನಾವಣಾಧಿಕಾರಿ