ಸಾರಿಗೆ ನೌಕರರ ಮುಷ್ಕರ ಪ್ರಶ್ನಿಸಿದ ಪಿಐಎಲ್; ಜುಲೈ 15ರಂದು ಸಂಧಾನ ಸಭೆ
ಬೆಂಗಳೂರು : ಸಾರಿಗೆ ನೌಕರರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಜುಲೈ 15ರಂದು ಕಾರ್ಮಿಕ ಆಯುಕ್ತರೊಂದಿಗೆ ಸಂಧಾನ ಮಾತುಕತೆ ನಿಗದಿಯಾಗಿದೆ ಎಂದು ಸಾರಿಗೆ ನಿಗಮಗಳ ಪರ ವಕೀಲರು ಹೈಕೋರ್ಟ್‌ಗೆ ಬುಧವಾರ ಮಾಹಿತಿ ನೀಡಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಕಾರ್ಮಿಕ ಸಂಘಗಳ ಜಂಟಿ ಕ್ರಿಯಾ ಸಮಿತಿ ಕರೆ ನೀಡಿದ್ದ ಮುಷ್ಕರವನ್ನು ಪ್ರಶ್ನಿಸಿ ಬೆಂಗಳೂರಿನಲ್ಲಿ ಮನೆಗೆಲಸ ಮಾಡುತ್ತಿರುವ ಸಿ. ವೇದವತಿ ಹಾಗೂ ಕಟ್ಟಡ ಕಾರ್ಮಿಕ ಎಚ್.ವಿ. ಶ್ರೀಧರ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ಸಾರಿಗೆ ನೌಕರರ ಪರ ಕಾರ್ಮಿಕ ಸಂಘಟನೆಗಳ ವಕೀಲರು, ನ್ಯಾಯಾಲಯ ನಿರ್ದೇಶನ ನೀಡಿದ್ದರೂ ಸರ್ಕಾರ ಹಾಗೂ ಸಾರಿಗೆ ಇಲಾಖೆ ನೌಕರರ ಬೇಡಿಕೆಗೆ ಸ್ಪಂದಿಸಿಲ್ಲ. ಆದ್ದರಿಂದ, ಹೈಕೋರ್ಟ್ ಸಾರಿಗೆ ನೌಕರರ ಹಿತಾಸಕ್ತಿಯನ್ನೂ ಪರಿಗಣಿಸಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಾರಿಗೆ ನಿಗಮಗಳ ಪರ ವಕೀಲರು, ಈಗಾಗಲೇ ಜುಲೈ 15ರಂದು ಕಾರ್ಮಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿದೆ. ಅದರಲ್ಲಿ ನೌಕರರ ಬೇಡಿಕೆಗಳ ಪರಿಹಾರದ ಬಗ್ಗೆ ಸಮಗ್ರವಾಗಿ ಮತ್ತು ಸೌದಾರ್ಹಯುತವಾಗಿ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಇದನ್ನು ದಾಖಲಿಸಿಕೊಂಡ ನ್ಯಾಯಪೀಠ, ಸಂಧಾನ ಮಾತುಕತೆ ನಿಗದಿಯಾಗಿರುವ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಆಗಸ್ಟ್ 5ಕ್ಕೆ ಮುಂದೂಡಿತಲ್ಲದೆ, ಮುಷ್ಕರ ನಡೆಸದಂತೆ ನಿರ್ಬಂಧಿಸಿ ಈ ಹಿಂದೆ ನೀಡಿದ್ದ ಮಧ್ಯಂತರ ಆದೇಶವನ್ನು ಮುಂದಿನ ವಿಚಾರಣೆವರೆಗೆ ವಿಸ್ತರಿಸಿತು.