×
Ad

RCB ವಿಜಯೋತ್ಸವ ಸಮಾರಂಭಕ್ಕೆ ರಾಜ್ಯಪಾಲರನ್ನು ಆಹ್ವಾನಿಸಿದ್ದು ನಾನೇ: ಸಿಎಂ ಸಿದ್ದರಾಮಯ್ಯ

"►RCB ತಂಡದಲ್ಲಿ ಕರ್ನಾಟಕದ ಆಟಗಾರರಿಲ್ಲದಿದ್ದರೂ ಜನರು ಆ ತಂಡದ ಪರವಾಗಿದ್ದಾರೆ" ►ಕಾಲ್ತುಳಿತ ಘಟನೆ ಕುರಿತು ಸದನದಲ್ಲಿ ಸಿಎಂ ಹೇಳಿದ್ದೇನು?

Update: 2025-08-22 18:59 IST

ಬೆಂಗಳೂರು: ವಿಧಾನಸೌಧದ ಮೆಟ್ಟಿಲುಗಳ ಮೇಲೆ ಆಯೋಜಿಸಿದ್ದ ಆರ್ ಸಿಬಿ ವಿಜಯೋತ್ಸವ ಸಮಾರಂಭಕ್ಕೆ ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್ ಅವರನ್ನು ಆಹ್ವಾನಿಸಿದ್ದು ನಾನೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಶುಕ್ರವಾರ ವಿಧಾನಸಭೆಯಲ್ಲಿ ನಿಯಮ 69ರ ಅಡಿಯಲ್ಲಿ ನಡೆದ ಚರ್ಚೆಗೆ ಸುದೀರ್ಘ ಉತ್ತರ ನೀಡಿದ ಅವರು, ಕೇವಲ ಕರ್ನಾಟಕ ರಾಜ್ಯದಲ್ಲಿ ಮಾತ್ರ ಕಾಲ್ತುಳಿತ ಘಟನೆ ನಡೆದಿಲ್ಲ. ದೇಶ-ವಿದೇಶದಲ್ಲೂ ಕಾಲ್ತುಳಿತ ಘಟನೆಗಳು ನಡೆದಿವೆ. ಉತ್ತರ ಪ್ರದೇಶ, ಮಧ್ಯಪ್ರದೇಶ, ಇಂಡೋನೇಷ್ಯಾದಲ್ಲೂ ಕಾಲ್ತುಳಿತ ಘಟನೆಗಳು ನಡೆದಿದೆ ಎಂದು ಉಲ್ಲೇಖಿಸಿದರು.

ಆರ್ ಸಿಬಿ ತಂಡ ಕರ್ನಾಟಕ ರಾಜ್ಯದ್ದೇ ಎಂದು ಬಹಳಷ್ಟು ಜನ ತಿಳಿದುಕೊಂಡಿದ್ದಾರೆ. ಆದರೆ, ಆರ್ ಸಿಬಿ ತಂಡದಲ್ಲಿ ಕರ್ನಾಟಕದ ಆಟಗಾರರೇ ಇಲ್ಲ, ಆದರೂ, ಜನರು ಆ ತಂಡದ ಪರವಾಗಿದ್ದಾರೆ. ಟ್ರೋಫಿಗೆದ್ದ ಮೇಲೆ ಕರ್ನಾಟಕವೇ ವಿಜಯ ಸಾಧಿಸಿದೆ ಎಂಬ ಭಾವನೆಯಿಂದ ಸಂಭ್ರಮಾಚರಣೆ ಮಾಡಿದರು ಎಂದು ಹೇಳಿದರು.

ರಾಜಕೀಯ ಸಲಹೆಗಾರ ಕೆ.ಗೋವಿಂದರಾಜ್ ಬೆಳಗ್ಗೆ ನನಗೆ ಕರೆ ಮಾಡಿ ಸಂಭ್ರಮಾಚರಣೆ ಇದೆ ಬರಬೇಕು ಎಂದಿದ್ದರು. ನಮ್ಮ ತಂಡ ಅಲ್ಲ, ರಾಜ್ಯದ ಒಬ್ಬರು ಆಟಗಾರರು ಇಲ್ಲ. ಫೈನಲ್‍ನಲ್ಲಿ ಒಬ್ಬರು ಕರ್ನಾಟಕದ ಆಟಗಾರ ಇರಲಿಲ್ಲ. ಆದರೂ ಅಭಿಮಾನಿಗಳು ಆ ತಂಡವನ್ನು ಬೆಂಗಳೂರು ಅಸ್ಮಿತೆ ಅಂದುಕೊಂಡಿದ್ದಾರೆ. ಹೀಗಾಗಿ ರಾತ್ರಿಯೆಲ್ಲ ಸಂಭ್ರಮಾಚರಣೆ ಮಾಡಿದ್ದಾರೆ. ಇದೆ ಸಮೂಹ ಸನ್ನಿ. ಎಷ್ಟೇ ವಿರೋಧ ಮಾಡಿದರು ಜನ ಕೇಳಲ್ಲ. ‘ವಿಜಯೋತ್ಸವಕ್ಕೆ ನಿರಾಕರಣೆ ಮೂಲಕ ಗೃಹ ಸಚಿವ ಅಸಮರ್ಥ’ ಎಂದು ಬಿಜೆಪಿಯವರು ಟ್ವೀಟ್ ಮಾಡಿದ್ದಾರೆ ಎಂದು ಉಲ್ಲೇಖಿಸಿದರು.

ಯಾವ ಸಿಎಂ ರಾಜೀನಾಮೆ ಕೊಡಲಿಲ್ಲ: ‘ಕಾಲ್ತುಳಿತ ಪ್ರಕರಣಗಳಲ್ಲಿ ಯಾವ ಸಿಎಂ ರಾಜೀನಾಮೆ ಕೊಟ್ಟಿಲ್ಲ. ಯೋಗಿ ಆದಿತ್ಯನಾಥ್ ರಾಜೀನಾಮೆ ಕೊಡಲಿಲ್ಲ. ವಿಮಾನ ದುರಂತದ ಹೊಣೆಹೊತ್ತು ಗುಜರಾತ್ ಸಿಎಂ ರಾಜೀನಾಮೆ ನೀಡಿದರೇ?. ಹಾವೇರಿಯಲ್ಲಿ ಗೊಬ್ಬರ ಕೇಳಿದ್ದಕ್ಕೆ ಗೋಲಿಬಾರ್ ಮಾಡಿ ಇಬ್ಬರು ರೈತರನ್ನು ಕೊಂದರು. ಆಗ ಯಡಿಯೂರಪ್ಪ ರಾಜೀನಾಮೆ ನೀಡಲಿಲ್ಲವೇಕೆ?’ ಎಂದು ವಾಗ್ದಾಳಿ ನಡೆಸಿದರು.

ವಿಜಯೋತ್ಸವದ ಬಗ್ಗೆ ಉನ್ಮಾದ ಹೆಚ್ಚಿತ್ತು. ಹೀಗಾಗಿ ಗೊಂದಲ ಆಗುತ್ತೆ. ನಾವು ಪ್ರಕರಣದಲ್ಲಿ ತಕ್ಷಣವೇ ಕ್ರಮ ಕೈಗೊಂಡು, ಐವರು ಅಧಿಕಾರಿಗಳ ಅಮಾನತ್ತು ಮಾಡಿದ್ದೇವೆ. ಆರ್ ಸಿಬಿ, ಕೆಎಸ್‍ಸಿಎ, ಡಿಎನ್‍ಎ ವಿರುದ್ಧ ಕ್ರಿಮಿನಲ್ ಕೇಸ್ ಹಾಕಿ ಅವರನ್ನು ಬಂಧಿಸಿದ್ದೇವೆ. ನನ್ನ ರಾಜಕೀಯ ಕಾರ್ಯದರ್ಶಿಯನ್ನೇ ತೆಗೆದು ಹಾಕಿದ್ದೇನೆ ಎಂದು ಅವರು ವಿವರಿಸಿದರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏನು ನಡೆದಿತ್ತು ಎಂದು ನನಗೆ ಗೊತ್ತೇ ಇಲ್ಲ. ಏನೆಲ್ಲ ಕ್ರಮ ತಗೊಳ್ಳಬೇಕೋ ಅದೆಲ್ಲವನ್ನು ಮಾಡಿದ್ದೇವೆ. ಇದರಿಂದ ಸಂತ್ರಸ್ತರಿಗೆ ನ್ಯಾಯ ಸಿಕ್ಕಿದೆ. ಹೈಕೋರ್ಟ್ ಸ್ವಯಂ ಪ್ರೇರಣೆಯಿಂದ ಮೊಕದ್ದಮೆ ದಾಖಲಿಸಿಕೊಂಡಿದೆ. ಈ ಪ್ರಕರಣದ ತನಿಖೆ ನಡೆಸಿದ್ದು, ಕೋರ್ಟ್ ಹೇಳಿದ ಕೂಡಲೇ ಜಾರ್ಜ್‍ಶೀಟ್ ಸಲ್ಲಿಕೆ ಮಾಡಲಿದ್ದೇವೆ. ಈ ಘಟನೆಗೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.

ಬಿಜೆಪಿ ಸರಕಾರದವರಂತೆ ನಾವು ದುರಂತ ನಡೆದ ಮೇಲೆ ಕೈಕಟ್ಟಿ ಕೂರಲಿಲ್ಲ. ದುರಂತ ಸಂಭವಿಸಿದ ಕೂಡಲೇ ಡಿಸಿ ತನಿಖೆಗೆ ಆದೇಶ ಮಾಡಿದ್ದು, ಬಳಿಕ ನ್ಯಾ.ಮೈಕೆಲ್ ಡಿ.ಕುನ್ಹಾರ ಏಕಸದಸ್ಯರ ತನಿಖಾ ಆಯೋಗ ನೇಮಿಸಲಾಯಿತು. ಆರ್‍ಸಿಬಿ, ಡಿಎನ್‍ಎ, ಕೆಎಸ್‍ಸಿಎ ಮತ್ತು ನಗರ ಪೊಲಿಸರ ಎಡವಟ್ಟುಗಳಿಂದ ಈ ದುರಂತ ಸಂಭವಿಸಿತು ಎಂಬುದು ಸ್ಪಷ್ಟ. ಕ್ರೀಡಾಂಗಣದ ಕಾರ್ಯಕ್ರಮಕ್ಕೆ ಸರಕಾರ ಅನುಮತಿ ನೀಡಿರಲಿಲ್ಲ ಎಂದು ಹೇಳಿದರು.

ತನಿಖೆಯನ್ನೇ ಮಾಡಲಿಲ್ಲ:

‘ಬಿಜೆಪಿ ಆಡಳಿತದಲ್ಲಿ ಘಟಿಸಿದ ಆಕ್ಸಿಜನ್ ದುರಂತಕ್ಕೆ ಕಾರಣರಾದವರಿಗೆ ಯಾವ ಶಿಕ್ಷೆ ಕೊಟ್ಟಿತ್ತು?, ಯಾರನ್ನು ಅಮಾನತ್ತು ಮಾಡಿದ್ದಿರಿ?. ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಕಾಲ್ತುಳಿತಗಳು ಸಂಭವಿಸಿ ಮರಣ ಹೊಂದಿದ ಪ್ರಕರಣಗಳ ಕುರಿತು ಪರಿಶೀಲಿಸಿದಾಗ ಅನೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಶಿಕ್ಷೆಯನ್ನೂ ಕೊಟ್ಟಿಲ್ಲ, ಬಹುಪಾಲು ಪ್ರಕರಣಗಳಲ್ಲಿ ಸಮರ್ಪಕ ತನಿಖೆಯೂ ಆಗಲಿಲ್ಲ’

-ಸಿದ್ದರಾಮಯ್ಯ ಮುಖ್ಯಮಂತ್ರಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News