×
Ad

ಸಿದ್ದರಾಮಯ್ಯ ‘ಸಾಮಾಜಿಕ ನ್ಯಾಯದ ಸಂಹಾರಿ’ : ಎಚ್.ಡಿ.ಕುಮಾರಸ್ವಾಮಿ

"ನಿಮಗೆ ಸಿಕ್ಕಿರುವ ಅಧಿಕಾರ ದೇವೇಗೌಡರ ದೇಣಿಗೆ"

Update: 2026-02-22 19:10 IST

ಸಿದ್ದರಾಮಯ್ಯ,ಕುಮಾರಸ್ವಾಮಿ 

ಬೆಂಗಳೂರು : ಸಿದ್ದರಾಮಯ್ಯ ಕುರ್ಚಿಗಾಗಿ ಜಾತಿ ಎಳೆದು ತಂದಿದ್ದಾರೆ ಎಂದು ನಾನು ತಮಾಷೆಗೆ ಹೇಳಿದ್ದಲ್ಲ, ಸೀರಿಯಸ್ಸಾಗೆ(ಗಂಭೀರವಾಗಿಯೆ) ಹೇಳಿದ್ದೇನೆ. ತಮಾಷೆಗೆ ಹೇಳಿದ್ದೇನೆ ಎಂದಿಟ್ಟುಕೊಳ್ಳಿ, ನೀವು ಇಷ್ಟುದ್ದ ಉತ್ತರ ಬರೆಯುವ ಅಗತ್ಯವಿರಲಿಲ್ಲ. ಈ ಬಗ್ಗೆ ನೀವು ಸೀರಿಯಸ್ ಆಗಿದ್ದೀರಿ ಎಂಬುದನ್ನು ಬಲ್ಲೆ. ಹಾಗಿದ್ದರೂ ನನ್ನ ಹೇಳಿಕೆಯನ್ನು ನೀವು ತಮಾಷೆಯಾಗಿಯೆ ಸ್ವೀಕರಿಸಿ, ಅಭ್ಯಂತರವಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ರವಿವಾರ ಈ ಸಂಬಂಧ ಎಕ್ಸ್‌ ನಲ್ಲಿ ಪೋಸ್ಟ್ ಹಾಕಿರುವ ಅವರು, ಸಾಮಾಜಿಕ ನ್ಯಾಯದ ಸೋಗುಕಾರ, ಸಾಮಾಜಿಕ ನ್ಯಾಯದ ಸಂಹಾರಿ ನೀವು. ನಿಮಗೆ ರಾಜಕೀಯ ಶಕ್ತಿ-ಬದುಕು ಕೊಟ್ಟ ದೇವೇಗೌಡರ ಕಡೆ ಬೆಟ್ಟು ಮಾಡುವುದು ಆಘಾತಕಾರಿ. ಇವತ್ತು ನಿಮಗೆ ಸಿಕ್ಕಿರುವ ಅಧಿಕಾರ, ಸಾಮಾಜಿಕ ನ್ಯಾಯಕಾರ ಎಂಬ ಪೋಷಾಕು ಎಲ್ಲವೂ ದೇವೇಗೌಡರ ದೇಣಿಗೆ ಎಂದು ಹೇಳಿದ್ದಾರೆ.

ನೀವೂ ಅವರ ಸಾಮಾಜಿಕ ನ್ಯಾಯದ ಫಲ ಮತ್ತು ಫಲಾನುಭವಿ. ಸ್ವಜಾತಿ, ಕುಟುಂಬ ಎಂದು ಅವರು ಆವತ್ತೆ ಭಾವಿಸಿದ್ದಿದ್ದರೆ ನೀವು ಹಣಕಾಸುಮಂತ್ರಿ ಆಗುವುದಿರಲಿ, ಅಟ್‍ಲೀಸ್ಟ್ ಒಂದು ನಿಗಮದ ಅಧ್ಯಕ್ಷಗಿರಿಯೂ ದಕ್ಕುತ್ತಿರಲಿಲ್ಲ. ಅಂದು ನಿಮ್ಮನ್ನು ಹಣಕಾಸು ಮಂತ್ರಿ ಮಾಡಲೇಬೇಕೆಂದು ಹಠತೊಟ್ಟ ಗೌಡರಿಗೆ ಅವತ್ತಿನ ಅವರ ಸಮಕಾಲೀನರು ನಿಮ್ಮ ಬಗ್ಗೆ ಏನೆಲ್ಲಾ ಗುಣಾವಗಾನ ಮಾಡಿ ಬಣ್ಣಿಸಿದ್ದರೆನ್ನುವುದು ನಿಮಗೆ ತಿಳಿದಿರಬೇಕಲ್ಲವೇ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ನೀವು ಪಟ್ಟಿ ಮಾಡಿರುವ ಒಕ್ಕಲಿಗ ನಾಯಕರ ಹೆಸರುಗಳನ್ನು ಓದಿದೆ. ಪಾಪ.. ನೀವು ಅವರ ಹೆಸರುಗಳನ್ನ ಉಲ್ಲೇಖಿಸಿ ಅವರನ್ನೂ ಅಪಹಾಸ್ಯ ಮಾಡಿದ್ದೀರಿ. ನೀವೂ ಅಪಹಾಸ್ಯಕ್ಕೆ ತುತ್ತಾಗಿದ್ದಲ್ಲದೆ, ನಗೆಪಾಟಲಿಗೀಡಾಗಿದ್ದೀರಿ. ನಿಮ್ಮ ರಾಜಕೀಯ ಸ್ವಾರ್ಥಕ್ಕೆ ಆ 13 ಜನರ ಶೆಲ್ಟರ್(ರಕ್ಷಣೆ) ಪಡೆದಿದ್ದೀರಿ, ಸರಿ ಎಂದು ಅವರು ಹೇಳಿದ್ದಾರೆ.

ಹಾಗಿದ್ದರೆ ಅವರೆಲ್ಲರೂ ದೇವೇಗೌಡರಿಂದ ಅಧಿಕಾರ ಅನುಭವಿಸಲೇ ಇಲ್ಲವೇ? ಆಗ ಅವರೆಲ್ಲರೂ ಕೂತಿದ್ದ ಅಧಿಕಾರ ಸ್ಥಾನಗಳಲ್ಲಿ ದೇವೇಗೌಡರೇ ಕೂತಿದ್ದರಾ? ಅವರೆಲ್ಲರೂ ನಿಮ್ಮಂತೆಯೇ ದೇವೇಗೌಡರ ಶ್ರಮ, ತ್ಯಾಗದಿಂದ ಅಧಿಕಾರ ಉಂಡು, ಪೊಗದಸ್ತಾಗಿ ಬೆಳೆದು ಬೇಲಿ ಹಾರಿದವರು! ನೀವು ಹೇಳಿದಂತೆ ಕುಟುಂಬವೇ ಮಿಗಿಲು ಎಂದು ಗೌಡರು ಭಾವಿಸಿದ್ದಿದ್ದರೆ ಈ ಪಟ್ಟಿಯಲ್ಲಿನ ಒಬ್ಬರೂ ಶಾಸಕ, ಮಂತ್ರಿ, ಸಂಸದ ಆಗುತ್ತಲೇ ಇರಲಿಲ್ಲ. ನಿಮ್ಮನ್ನೂ ಸೇರಿಸಿ! ಏನಂತೀರಿ? ನೀವೆಲ್ಲರೂ ನೆರಳು ಕೊಟ್ಟ ವೃಕ್ಷಕ್ಕೆ ನಿರ್ದಯದಿಂದ ಕೊಡಲಿ ಹಾಕಿದಿರಿ. ಉಂಡು ಹೋದರಿ, ಕೊಂಡು ಹೋದರಿ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.

ಸಿದ್ದರಾಮಯ್ಯನವರೇ.. ನಿಮ್ಮ ಸ್ವಾರ್ಥಕ್ಕೆ ಜಾತಿ ಎಳೆದು ತಂದಂತೆ ಹಿರಿಯರಾದ ಕೆಂಗಲ್ ಹನುಮಂತಯ್ಯ, ಕಡಿದಾಳ್ ಮಂಜಪ್ಪ, ಎಸ್.ಎಂ.ಕೃಷ್ಣ ಅವರನ್ನು ಏಕೆ ಎಳೆದು ತರುತ್ತೀರಿ? ಎಸ್.ಎಂ.ಕೃಷ್ಣ ಅವರ ಹೆಸರೇಳುವ ಸಾಸಿವೆ ಕಾಳಷ್ಟು ಯೋಗ್ಯತೆ, ನೈತಿಕತೆ ನಿಮಗಿದೆಯೇ? ಹಿ ಈಸ್ ಅನ್ ಪಾಲಿಲ್ಡ್‌ ಡೈಮಂಡ್ ಎಂದು ಸೋನಿಯಾ ಗಾಂಧಿ ಅವರ ಮುಂದೆ ಹೇಳಿ ನೀವು ಕಾಂಗ್ರೆಸ್ ಮೆಟ್ಟಿಲು ಹತ್ತಲು ಕಾರಣರಾದ ಎಸ್.ಎಂ.ಕೃಷ್ಣರನ್ನು ಎಷ್ಟು ಕ್ರೂರವಾಗಿ ವಂಚಿಸಿದಿರೆನ್ನುವುದು ಜಗತ್ತು ಬಲ್ಲ ಸತ್ಯ ಎಂದು ಅವರು ಹೇಳಿದ್ದಾರೆ.

ರಾಜಕೀಯದ ಕಡೆಗಾಲದಲ್ಲಿ ಅವರನ್ನು ನೀವೆಷ್ಟು ತುಚ್ಛವಾಗಿ ನಡೆಸಿಕೊಂಡಿರಿ ಎನ್ನುವುದನ್ನು ಜನ ಮರೆತಿಲ್ಲ. ಅನ್ ಪಾಲಿಲ್ಡ್‌ ಡೈಮಂಡ್ ಕೃಷ್ಣರಿಗೆ ಚೂರಿ ಆಗಿದ್ದು ಎಲ್ಲರೂ ಬಲ್ಲರು. ಒಕ್ಕಲಿಗರನ್ನು ಬೆಳೆಸಿದ್ದು ಕಾಂಗ್ರೆಸ್ಸು ಅಂತೀರಿ.. ಬರೀ ಬುರುಡೆ.. ವಿಧಾನಸೌಧ ಕಟ್ಟಿದ ಕೆಂಗಲ್ ಅವರಿಗೆ ನಿಮ್ಮ ನೆಹರು ಕೊಟ್ಟ ಕಿರುಕುಳ, ಮಾಡಿದ ಅಪಮಾನ ಅಷ್ಟಿಷ್ಟಾ? ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು ಅವರಿಗೆ ಬೆನ್ನಿಗಿರಿದ ದೂರ್ತರು ಯಾರು? ಯಾವ ಪಕ್ಷದವರು? ಒಕ್ಕಲಿಗರನ್ನು ಮುಖ್ಯಮಂತ್ರಿ ಮಾಡುವುದು ಕಾಂಗ್ರೆಸ್ಸೇ ಎನ್ನುವುದಾದರೆ, ತತ್ ಕ್ಷಣಕ್ಕೇ ನೀವು ಕುರ್ಚಿ ಬಿಡಬೇಕಲ್ಲವೇ? ಒಕ್ಕಲಿಗರ ಮೇಲೆ ನಿಮ್ಮ ಪ್ರೀತಿ ಪ್ರದರ್ಶನಕ್ಕೆ ಇದು ಸಕಾಲ ಎಂದು ಅವರು ಆಗ್ರಹಿಸಿದ್ದಾರೆ.

ಸಿದ್ದರಾಮಯ್ಯನವರೇ. ಒಕ್ಕಲಿಗ ಸಮುದಾಯಕ್ಕೆ ಸಮರ್ಥ ನಾಯಕತ್ವ ನೀಡುವ ಕಾಂಗ್ರೆಸ್ ಉದಾರತೆಯನ್ನು ನಾನು ಸ್ವಾಗತಿಸುವೆ. ಈ ಉದಾರತೆ ನಿಮಗೂ ಬೇಕಲ್ಲವೇ? ಈಗ ನೀವು ಉದಾರತೆ ತೋರಬೇಕು. ಎರಡನೇ ಅವಧಿಗೆ ನೀವು ಮುಖ್ಯಮಂತ್ರಿ ಆಗುವ ಮುನ್ನ ಅಗ್ರಿಮೆಂಟ್(ಒಪ್ಪಂದ) ಆಗಿತ್ತಲ್ಲಾ, ಅದನ್ನು ಬಹಿರಂಗವಾಗಿ ಹೇಳುವ ಉದಾರತೆ ತೋರಿ ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ದಿಲ್ಲಿಯಲ್ಲಿ ನಿಮ್ಮಿಬ್ಬರ ನಡುವೆ ಆಗಿದ್ದ ಆ ಅಗ್ರಿಮೆಂಟ್‍ಗೆ ಸಾಕ್ಷಿ ಆಗಿದ್ದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ವೇಣುಗೋಪಾಲ್, ಸುರ್ಜೆವಾಲಾಗೆ ನಿಮ್ಮ ಸಾಮಾಜಿಕ ನ್ಯಾಯ, ಒಕ್ಕಲಿಗ ಪ್ರೀತಿಯ ಪರಾಕಾಷ್ಟೆ ಈಗೀಗ ಅರ್ಥವಾಗಿದೆ ಎಂದು ಭಾವಿಸುತ್ತೇನೆ. ಅವರೆಲ್ಲರ ಮಾನಸಿಕ ಸ್ವಾಸ್ಥ್ಯ ಸರಿ ಇದೆ ಎಂದು ನಾನಾದರೂ ನಂಬಿದ್ದೇನೆ ಎಂದು ಅವರು ವ್ಯಂಗ್ಯವಾಡಿದ್ದಾರೆ.

ಸಾಮಾಜಿಕ ನ್ಯಾಯದ ಸಂಹಾರಿಯೇ ಅದೇ ಸಾಮಾಜಿಕ ನ್ಯಾಯ ಬಗ್ಗೆ ಪದೇಪದೆ ಮಾತನಾಡುವುದು ಅಸಹ್ಯ ತರಿಸುತ್ತದೆ. ನಿಮ್ಮ ಸಾಮಾಜಿಕ ನ್ಯಾಯಕ್ಕೆ ಅಂತಃಕರಣವಿಲ್ಲ. ಇದ್ದಿದ್ದರೆ ನಿಮಗಿಂತ ಮೊದಲೇ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಆಗಬೇಕಿತ್ತು. ಇದ್ದ ಪ್ರತಿಪಕ್ಷ ಸ್ಥಾನವನ್ನೂ ಕಿತ್ತುಕೊಂಡು ಅವರನ್ನು ಅತ್ಯಂತ ಅಪಮಾನಕರವಾಗಿ ದಿಲ್ಲಿಗೆ ಓಡಿಸಿದಿರಿ ಎಂದು ಅವರು ಟೀಕಿಸಿದ್ದಾರೆ.

ಇನ್ನೊಬ್ಬ ದಲಿತ ನಾಯಕ ಡಾ.ಜಿ.ಪರಮೇಶ್ವರ್ ಅವರನ್ನು ನಿಮ್ಮ ದಾರಿಗೆ ಅಡ್ಡ ಬರುತ್ತಾರೆಂದು ಚುನಾವಣೆ ಕಣದಲ್ಲೇ ಮುಗಿಸಿದಿರಿ, ನಿಮ್ಮನ್ನು ಕಾಂಗ್ರೆಸ್ಸಿಗೆ ಕರೆತಂದ ಎಚ್. ವಿಶ್ವನಾಥ್‍ರನ್ನು ಎಲ್ಲಿ ಇಟ್ಟಿದ್ದೀರಿ? ನೀವು ಮುಖ್ಯಮಂತ್ರಿ ಪಟ್ಟಕ್ಕೆ ಏರಿ ಕೂತಿರಿ? ಎರಡು ಸಲ ನೀವು ಮುಖ್ಯಮಂತ್ರಿ ಆಗಿದ್ದಲ್ಲ, ಅರ್ಹತೆಯಿಂದ ಆಗಿದ್ದೂ ಅಲ್ಲವೇ ಅಲ್ಲ. ಪಕ್ಷದಲ್ಲಿದ್ದ ಸಮರ್ಥರನ್ನು ಸಾಮಾಜಿಕ ನ್ಯಾಯದ ನೆಪದಲ್ಲಿ ರಾಜಕೀಯನರಮೇಧ ಮಾಡಿ ಆಕ್ರಮಿಸಿದ್ದು ಎಂದು ಅವರು ದೂರಿದ್ದಾರೆ.

ಇನ್ನೆಷ್ಟು ಸುಳ್ಳು ಹೇಳುತ್ತೀರಿ? ಇನ್ನೆಷ್ಟು ದಿನ ಈ ಊಸರವಳ್ಳಿ ಅವತಾರ? ಅಸಲಿಗೆ ಅಹಿಂದ ನಾಯಕ, ಸಾಮಾಜಿಕ ನ್ಯಾಯದ ಪ್ರತಿನಿಧಿಯೇ ನೀವಾಗಿದ್ದಿದ್ದರೆ ಈ ಸೂಕ್ಷ್ಮ ಸಂದರ್ಭದಲ್ಲಿ ನೀವು ಹುಟ್ಟಿದ ಜಾತಿಯನ್ನು ಎಳೆದು ತರುತ್ತಿರಲಿಲ್ಲ. ಇದನ್ನೇ ನಾನು ಪ್ರಶ್ನಿಸಿದ್ದು. ಬಸವಣ್ಣ, ನಾರಾಯಣ ಗುರು, ಕುವೆಂಪು, ದೇವರಾಜ ಅರಸು ವಿಚಾರ, ತತ್ವಾದರ್ಶಗಳನ್ನು ನಂಬಿದವನು ಎನ್ನುವ ನೀವು, ಇನ್ನು ಮುಂದೆ ಆ ಮಹನೀಯರ ಹೆಸರೇಳಬೇಡಿ. ನಿಮಗಿಂತ ವಯಸ್ಸಿನಲ್ಲಿ ಚಿಕ್ಕವನಾದ ನಾನು ನಿಮಗೆ ನೀಡುವ ವಿನಮ್ರ ಸಲಹೆ ಇದು ಎಂದು ಕುಮಾರಸ್ವಾಮಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News