ಸಿದ್ದರಾಮಯ್ಯನವರೇ... ಕೆಲಸ ಮಾಡುವುದು ಬಿಟ್ಟು ಕೌಂಟರ್ ಕೊಡುವುದರಲ್ಲಿ ಹೆಚ್ಚು ಬ್ಯುಸಿಯಾಗಿದ್ದೀರಿ : ಎಚ್‌ಡಿಕೆ ವ್ಯಂಗ್ಯ
"ನಿಮ್ಮ ಪಕ್ಷದಲ್ಲಿನ ಕುರ್ಚಿ ಕಾಳಗದ ಮುಂದುವರಿದ ಭಾಗವೇ ಫೋನ್ ಕದ್ದಾಲಿಕೆ ಎನ್ನುವ ಅನುಮಾನ ಪ್ರತಿಪಕ್ಷಗಳದ್ದು"
ಎಚ್.ಡಿ.ಕುಮಾರಸ್ವಾಮಿ/ಸಿದ್ದರಾಮಯ್ಯ
ಬೆಂಗಳೂರು, ಮಾ. 3: ‘ಮಿಸ್ಟರ್ ಸಿದ್ದರಾಮಯ್ಯನವರೇ.. ನಿಮ್ಮ ಕುಚುಕು ಗೆಳೆಯನ ಮೇಲೆ ಪ್ರೀತಿ ತೋರಿಸಿ.. ಗುಂಡಿಗೆ ಸಾಲುತ್ತಿಲ್ಲವೇ?. ಸೋತರೆ ಸೋಲಬೇಕು ಬಾಹುಬಲಿಯಂತೆ, ನಾನು ಸೋತಿದ್ದೇನೆ, ಓಡಿ ಹೋಗಿಲ್ಲ. ನಾನು ರಣಹೇಡಿಯಂತೆ ಪಲಾಯನ ಮಾಡುವುದಿಲ್ಲ, ನೆನಪಿರಲಿ’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಸಿಎಂ ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿದ್ದಾರೆ.
ಮಂಗಳವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಸಿದ್ದರಾಮಯ್ಯನವರೇ ಈ ನಡುವೆ ನೀವು ಬಹಳ ಪುರುಸೊತ್ತಾಗಿದ್ದೀರಿ ಎಂದು ಭಾವಿಸಿದ್ದೇನೆ. ಕೆಲಸ ಮಾಡುವುದು ಬಿಟ್ಟು ಕೌಂಟರ್ ಕೊಡುವುದರಲ್ಲಿ ಹೆಚ್ಚು ಬ್ಯುಸಿಯಾಗಿದ್ದೀರಿ. ಕುಂಬಳಕಾಯಿ ಕಳ್ಳ ಎಂದರೆ ನಾನೇ.. ನಾನೇ.. ಹೆಗಲು ಮುಟ್ಟಿ ನೋಡಿಕೊಂಡರೆ ನಾನೇನು ಮಾಡಲಿ?. ಫೋನ್ ಕದ್ದಾಲಿಕೆ ಬಗ್ಗೆ ಮಾಧ್ಯಮಗಳೇ ಮಾತನಾಡುತ್ತಿವೆ. ಆ ಬಗ್ಗೆ ನಾನು ಪ್ರತಿಕ್ರಿಯಿಸಿದ್ದೇನೆ, ಅಷ್ಟೇ’ ಎಂದು ಸ್ಪಷ್ಟನೆ ನೀಡಿದ್ದಾರೆ
‘ನಿಮ್ಮ ಪುರಾಣ ನೋಡಿದರೆ ನಿಮಗೆ ಆಡಳಿತಕ್ಕಿಂತ ಮತ್ತೊಬ್ಬರನ್ನು ಆಡಿಕೊಳ್ಳುವುದರಲ್ಲೇ ಹೆಚ್ಚು ಮುತುವರ್ಜಿ, ಆಸಕ್ತಿ ಇದ್ದಂತಿದೆ. ವಿಪಕ್ಷಗಳು ತಮ್ಮ ಕೆಲಸ ತಾವು ಮಾಡುತ್ತಿವೆ. ಜನರು ನಿಮಗೆ 140 ಸೀಟು ಕೊಟ್ಟರೆ ಆಡಳಿತ ನಡೆಸುವುದು ಬಿಟ್ಟು ಹಾದಿಬೀದಿಯಲ್ಲಿ ಕಚ್ಚಾಡುತ್ತಿದ್ದೀರಿ. ನಿಮ್ಮ ಪಕ್ಷದಲ್ಲಿನ ಕುರ್ಚಿ ಕಾಳಗದ ಮುಂದುವರಿದ ಭಾಗವೇ ಫೋನ್ ಕದ್ದಾಲಿಕೆ ಎನ್ನುವ ಅನುಮಾನ ಪ್ರತಿಪಕ್ಷಗಳದ್ದು. ಪ್ರಶ್ನಿಸುವ ಜಾಗದಲ್ಲಿ ಪ್ರತಿಪಕ್ಷಗಳಿವೆ, ಉತ್ತರಿಸಿ. ವಿಷಯಾಂತರ ಬಿಟ್ಟು ಸತ್ಯ ಹೇಳಿ. ಸತ್ಯ ನಿಮ್ಮನೆ ದೇವ್ರು ಅಲ್ಲವೇ? ಸತ್ಯಮೇವ ಜಯತೇ ನಿಮ್ಮ ಸಿದ್ದಸ್ಲೋಗನ್, ಕಥೆ ಕಟ್ಟಿ ಕಾಲಹರಣ ಮಾಡುತ್ತಿರೇಕೆ?’ ಎಂದು ಪ್ರಶ್ನಿಸಿದ್ದಾರೆ.
‘ನಾನು ಎರಡು ಸಣ್ಣ ಅವಧಿಗೆ ಸಿಎಂ ಆಗಿದ್ದೆ. ಸ್ವತಂತ್ರ ಸರಕಾರವೂ ನನ್ನದಲ್ಲ. ಕದ್ದಾಲಿಸುವ ಕರ್ಮ ನನಗೇಕೆ? ನಿಮ್ಮಂತೆ ಸಿದ್ದವನದಲ್ಲಿ ಕೂತು ಮನೆಹಾಳು ಮಾಡೋದಕ್ಕೆ ಶಾಸಕರಿಗೆ ಬ್ರೈನ್‍ವಾಶ್ ಮಾಡುವ ಹೀನ ಜಾಯಮಾನ ನನ್ನದಲ್ಲ. ನಿಮ್ಮ ಮೊದಲ ಐದು ವರ್ಷದ ಸರಕಾರವೂ.. ಈಗಿನ ನಿಮ್ಮ ಗುಪ್ತಚರವೂ ರಾಜಕಾರಣವನ್ನು ನಾನು ಕಂಡಿರುವುದೇ ಅಲ್ಲವೇ?’ ಎಂದು ಅವರು ಲೇವಡಿ ಮಾಡಿದ್ದಾರೆ.
‘ನನ್ನ ಜತೆ ನೇರ ಸಂಘರ್ಷಕ್ಕೆ ಬಂದಾಗಲೆಲ್ಲ ನೀವು ದೇವೇಗೌಡರನ್ನು ಎಳೆದು ತರುತ್ತೀರಿ. ದೇವೇಗೌಡರು ನಿಮ್ಮ ರಾಜಕೀಯ ಗುರು, ನಿಮ್ಮನ್ನು ಗುರುತಿಸಿ ಬೆಳೆಸಿದವರು. ಅದಕ್ಕಾಗಿ ಎಷ್ಟೋ ನಾಯಕರ ವಿರೋಧ ಕಟ್ಟಿಕೊಂಡರು. ಅದೂ ನಿಮಗೂ ಗೊತ್ತಿದೆ. ಆದರೆ, ಸಮಯಕ್ಕೆ ಕಾಯುತ್ತಿದ್ದ ನೀವು ಗುರುವಿಗೆ ಗುನ್ನ ಇಟ್ಟಿರಿ. ಅಷ್ಟರ ಮಟ್ಟಿಗೆ ನಿಮ್ಮ ಕಪಟತನವನ್ನು ಸ್ವಯಂ ಸ್ಮರಣೆ ಮಾಡುತ್ತಿದ್ದೀರಿ, ಸಂತೋಷ’ ಎಂದು ಅವರು ಟೀಕಿಸಿದ್ದಾರೆ.
‘ದಿಲ್ಲಿಯಲ್ಲಿ ದೇವೇಗೌಡರು ಅಧಿಕಾರ ಕಳೆದುಕೊಂಡಾಗ ನೀವು ಯಾವ ಪಕ್ಷದಲ್ಲಿದ್ದಿರಿ ಎನ್ನುವುದನ್ನು ಅರೆಕ್ಷಣ ನೆನಪು ಮಾಡಿಕೊಳ್ಳಿ. ನಿಮಗೂ ಆತ್ಮಸಾಕ್ಷಿ ಎನ್ನುವುದು ಇರಬೇಕಲ್ಲಾ? ಆಗ ನಿಮ್ಮ ನಾಲಿಗೆಯಿಂದ ಉದುರಿದ್ದ ಸರಣಿ ನುಡಿಮುತ್ತುಗಳನ್ನು ಒಮ್ಮೆ ಪುನಾಸ್ಮರಣೆ ಮಾಡಿಕೊಳ್ಳಿ?. ಅವತ್ತು ಅದೇ ಸೀತಾರಾಂ ಕೇಸರಿ ಬಗ್ಗೆ ತಾವು ಏನೇನು ಹೇಳಿದಿರಿ? ಆ ನಂತರದ ಕಾಲದಲ್ಲಿ ಸೋನಿಯಾ ಗಾಂಧಿ ಅವರನ್ನು ಅದೆಷ್ಟು ವಾಚಾಮಗೋಚರ ನಿಂದಿಸಿದ್ದಿರಿ ಎಂಬುದನ್ನು ಜ್ಞಾಪಕ ಮಾಡಿಕೊಳ್ಳಿ’ ಎಂದು ಅವರು ಸಲಹೆ ನೀಡಿದ್ದಾರೆ.
ಶ್ರೀಮಾನ್ ಸಿದ್ದರಾಮಯ್ಯನವರೇ,
— ಹೆಚ್.ಡಿ.ಕುಮಾರಸ್ವಾಮಿ | HD Kumaraswamy (@hd_kumaraswamy) March 3, 2026
(@siddaramaiah)
ಈ ನಡುವೆ ನೀವು ಬಹಳ ಪುರುಸೊತ್ತಾಗಿದ್ದೀರಿ ಎಂದು ಭಾವಿಸಿದ್ದೇನೆ. ಕೆಲಸ ಮಾಡುವುದು ಬಿಟ್ಟು ಕೌಂಟರ್ ಕೊಡುವುದರಲ್ಲಿ ಹೆಚ್ಚು ಬ್ಯುಸಿಯಾಗಿದ್ದೀರಿ!
ಕುಂಬಳಕಾಯಿ ಕಳ್ಳ ಎಂದರೆ ನಾನೇ.. ನಾನೇ.. ಹೆಗಲು ಮುಟ್ಟಿ ನೋಡಿಕೊಂಡರೆ ನಾನೇನು ಮಾಡಲಿ? ಫೋನ್ ಕದ್ದಾಲಿಕೆ ಬಗ್ಗೆ ಮಾಧ್ಯಮಗಳೇ…
‘ಸಿದ್ದರಾಮಯ್ಯನವರೇ.., ದೇವೇಗೌಡರು ಅಧಿಕಾರವನ್ನು ವಿರೋಚಿತವಾಗಿ ತ್ಯಜಿಸಿದರು. ರಾಜೀನಾಮೆ ಘೋಷಿಸಿದ ಮರುಕ್ಷಣದಲ್ಲೇ ಸಂಸತ್ತಿನಲ್ಲಿಯೇ ವಾಜಪೇಯಿ ಅವರು ಮುಕ್ತ ಬೆಂಬಲ ಕೊಡುತ್ತೇವೆ ಎಂದರೂ ಆ ಅಧಿಕಾರ ಬೇಡವೆಂದು ವಿನಯದಿಂದ ಧಿಕ್ಕರಿಸಿದರು. ಅವರ ಗರಡಿಯಲ್ಲಿ ಪಳಗಿ, ಈಗಲೂ ಬೆಳಗುತ್ತಿರುವ ನೀವೂ ಅಂತಹ ಕೆಚ್ಚನ್ನು, ವಿರೋಚಿತ ತ್ಯಾಗವನ್ನು ಒಮ್ಮೆ ಪ್ರದರ್ಶಿಸಿ’
-ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸಚಿವ