ಸಿದ್ದರಾಮಯ್ಯ 'ಸ್ಟಿಂಗ್' ವಿಡಿಯೊ ಪ್ರಕರಣ: ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ ರಾಕೇಶ್ ಶೆಟ್ಟಿ
CCB ಮುಖ್ಯಸ್ಥರಿಗೂ ಪವರ್ ಟಿವಿ MDಗೂ ಒಬ್ಬರೇ ವಕೀಲರು!; ಚರ್ಚೆಗೆ ಗ್ರಾಸವಾದ ಆಯ್ಕೆ
ರಾಕೇಶ್ ಶೆಟ್ಟಿ Photo: screengrab/fb.com/powertvnews
ಬೆಂಗಳೂರು : ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ಉದ್ದೇಶಪೂರ್ವಕವಾಗಿ ಮಾನಹಾನಿ ಮಾಡಲು ಸೃಷ್ಟಿಸಿದ್ದ ವಿಡಿಯೋ ಸಂಬಂಧಿಸಿದಂತೆ ಖಾಸಗಿ ವಾಹಿನಿ ಪವರ್ ಟಿವಿ ಎಂ. ಡಿ ರಾಕೇಶ್ ಶೆಟ್ಟಿ ಮಧ್ಯಂತರ ನಿರೀಕ್ಷಣಾ ಜಾಮೀನು ಕೋರಿ ಸಿಟಿ ಸಿವಿಲ್ ಹಾಗೂ ಸೆಷನ್ಸ್ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಗುರುವಾರ ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಾಲಯ ಶುಕ್ರವಾರಕ್ಕೆ ಅದೇಶ ಕಾಯ್ದಿರಿಸಿದೆ. ವಕೀಲ ಸ್ವರೂಪ್ ಆನಂದ್ ಎಂಬುವರು ರಾಕೇಶ್ ಶೆಟ್ಟಿ ಪರವಾಗಿ ಅರ್ಜಿಯನ್ನು ಸಲ್ಲಿಸಿ ವಾದ ಮಾಡಿದ್ದರು.
ಮಾಜಿ ಸಿಎಂ ಸಿದ್ದರಾಮಯ್ಯ ಅ.6 ರಂದು ನಗರ ಪೊಲೀಸ್ ಆಯುಕ್ತರಿಗೆ ಸುದೀರ್ಘ 12 ಅಂಶಗಳ ದೂರನ್ನು ನೀಡಿದ್ದರು. ಇದರ ಅನ್ವಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಕ್ರೈಂ ನಂಬರ್ 56/2026 ರ ಅಡಿಯಲ್ಲಿ ಎಫ್ ಐ ಆರ್ ದಾಖಲಾಗಿದ್ದು ಸಿಸಿಬಿ ಪೊಲೀಸರು ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದಾರೆ.
ಈಗಾಗಲೇ ಎರಡು ಬಾರಿ ಪವರ್ ಟಿವಿ ಎಂ.ಡಿ ರಾಕೇಶ್ ಶೆಟ್ಟಿಯ ವಿಚಾರಣೆಯನ್ನು ಸಿಸಿಬಿಯ ಸೈಬರ್ ಕ್ರೈಂ ಪೊಲೀಸರು ನಡೆಸಿದ್ದರು. ಆದರೆ ಪ್ರಕರಣ ದಾಖಲಾಗಿ 17 ದಿನ ಕಳೆದರೂ ಪ್ರಕರಣದಲ್ಲಿ ಯಾರನ್ನೂ ಸಿಸಿಬಿ ಪೊಲೀಸರು ಬಂಧಿಸಿಲ್ಲ. ಇದರ ನಡುವೆ ರಾಕೇಶ್ ಶೆಟ್ಟಿ ಮಧ್ಯಂತರ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿರುವುದು ಹಲವು ಅನುಮಾನಗಳನ್ನ ಹುಟ್ಟುಹಾಕಿದೆ.
ಸ್ಟಿಂಗ್ ಮಾಡಿದ್ದು ತಾನೇ ಎಂದು ಒಪ್ಪಿಕೊಂಡಿದ್ದ ರಾಕೇಶ್ ಶೆಟ್ಟಿ...?
ಇನ್ನೂ ತನ್ನದೇ ಖಾಸಗಿ ವಾಹಿನಿ ಪವರ್ ಟಿವಿಯಲ್ಲಿ ʼಅಲ್ಲೋಲ ಕಲ್ಲೋಲʼ ಎನ್ನುವ ಕಾರ್ಯಕ್ರಮ ನಡೆಸಿದ್ದ ರಾಕೇಶ್ ಶೆಟ್ಟಿ, ಅಪಾದಿತ ವಿಡೀಯೋ ಮಾಡಿದ್ದು ತಾನೇ ಎಂಬುದನ್ನು ಒಪ್ಪಿಕೊಂಡಿದ್ದರು ಅಲ್ಲದೆ ತಾನೇ ವಿಚಾರಣೆಗೆ ಹೋಗಿದ್ದಾಗಿಯೂ ಹೇಳಿದ್ದರು. ಇದರ ಹಿಂದೆ ಯಾವುದೇ ದುರುದ್ದೇಶವಿರಲಿಲ್ಲ ಎಂದಿದ್ದರು. ಆದರೆ ಈಗ ರಾಕೇಶ್ ಶೆಟ್ಟಿ ಯಾಕೆ ಮಧ್ಯಂತರ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ ಎನ್ನುವ ಪ್ರಶ್ನೆ ವ್ಯಾಪಕವಾಗಿ ಎದ್ದಿದೆ.
ಸಿಸಿಬಿ ಮುಖ್ಯಸ್ಥರಿಗೂ ರಾಕೇಶ್ ಶೆಟ್ಟಿಗೂ ಒಬ್ಬರೇ ವಕೀಲರು..!
ಇನ್ನೂ ಈ ಪ್ರಕರಣದ ತನಿಖೆಯನ್ನ ಸಿಸಿಬಿ ನಡೆಸುತ್ತಿದೆ. ಸಿಸಿಬಿ ಮುಖ್ಯಸ್ಥರಾಗಿ ಅಜಯ್ ಹಿಲೋರಿ ಕೆಲಸ ಮಾಡುತ್ತಿದ್ದಾರೆ. ಐಎಂಎ ಪ್ರಕರಣ ಸಂಬಂಧಿಸಿದಂತೆ ಅಜಯ್ ಹಿಲೋರಿ ಪರವಾಗಿ ವಕೀಲ ಸ್ವರೂಪ್ ಆನಂದ್ ವಾದ ಮಾಡುತ್ತಿದ್ದಾರೆ. ಈಗ ಸಿಸಿಬಿಯಿಂದ ವಿಚಾರಣೆಗೆ ಒಳಗಾಗಿರುವ ರಾಕೇಶ್ ಶೆಟ್ಟಿಗೂ ಇದೇ ಸ್ವರೂಪ್ ಅನಂದ್ ವಕೀಲರಾಗಿ ಮಧ್ಯಂತರ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.