×
Ad

ಧರ್ಮಸ್ಥಳ ಪ್ರಕರಣದ ತನಿಖೆ ವಿಸ್ತರಿಸಲು ಎಸ್ಐಟಿ ಸಿದ್ಧತೆ: ವರದಿ

Update: 2025-08-29 15:58 IST

ಸಾಂದರ್ಭಿಕ ಚಿತ್ರ

ಬೆಂಗಳೂರು: ಬೆಂಗಳೂರು: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣದ ಪ್ರಕರಣದ ತನಿಖೆ ವಿಸ್ತರಿಸಲು ಎಸ್ಐಟಿ ಸಜ್ಜಾಗಿದೆ. ಧರ್ಮಸ್ಥಳ ಸುತ್ತಮುತ್ತಲ ಪ್ರದೇಶಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಅನುಮಾನಾಸ್ಪದ ಸಾವುಗಳ ಬಗ್ಗೆ ಉಲ್ಲೇಖಿಸಿದ 7 ವರ್ಷಗಳ ಹಿಂದಿನ ಸಮಿತಿಯೊಂದರ ವರದಿಯನ್ನು ಪರಿಶೀಲಿಸಲು ವಿಶೇಷ ತನಿಖಾ ತಂಡ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ ಎಂದು deccanherald.com ವರದಿ ಮಾಡಿದೆ.

ಧರ್ಮಸ್ಥಳಕ್ಕೆ ಬಂದು ನಾಪತ್ತೆಯಾಗಿದ್ದಾರೆ ಎಂದು ನೆರೆಯ ರಾಜ್ಯಗಳಾದ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ತೆಲಂಗಾಣ ಹಾಗೂ ಗೋವಾದಂತಹ ರಾಜ್ಯಗಳಲ್ಲಿ ದಾಖಲಾಗಿರುವ ನಾಪತ್ತೆ ದೂರುಗಳನ್ನು ಆಧರಿಸಿ ದಾಖಲಾಗಿರುವ ಎಫ್‌ಐಆರ್ ಗಳನ್ನೂ ವಿಶೇಷ ತನಿಖಾ ತಂಡ ಪರಿಶೀಲಿಸಲಿದೆ ಎಂದು ಮೂಲಗಳೂ ತಿಳಿಸಿವೆ ಎಂದು Deccan Herald ಸುದ್ದಿ ಸಂಸ್ಥೆ ವರದಿ ಮಾಡಿದೆ. ಆ ಮೂಲಕ, ಸಾಕ್ಷಿ ದೂರುದಾರನ ಬಂಧನವಾಗಿರುವುದರಿಂದ, ವಿಶೇಷ ತನಿಖಾ ತಂಡದ ತನಿಖೆ ಅಂತ್ಯಗೊಳ್ಳಲಿದೆ ಎಂಬ ವರದಿಗಳನ್ನು ಈ ಮೂಲಗಳು ಅಲ್ಲಗಳೆದಿವೆ.

ಮಹಿಳೆಯರು ಹಾಗೂ ಬಾಲಕಿಯರ ಮೇಲಿನ ಲೈಂಗಿಕ ಕಿರುಕುಳವನ್ನು ತಡೆಯಲು ಮಾಜಿ ಶಾಸಕ ವಿ.ಎಸ್.ಉಗ್ರಪ್ಪ ನೇತೃತ್ವದಲ್ಲಿ ರಚಿಸಲಾಗಿದ್ದ ಸಮಿತಿಯು ಧರ್ಮಸ್ಥಳದ ಸುತ್ತಮುತ್ತ ಮಹಿಳೆಯರು ನಾಪತ್ತೆಯಾಗಿರುವ ಹಲವು ನಿದರ್ಶನಗಳನ್ನು ತನ್ನ 5,000 ಪುಟಗಳ ವರದಿಯಲ್ಲಿ ಉಲ್ಲೇಖಿಸಿತ್ತು.

ನಾಪತ್ತೆಯಾಗಿರುವ ಮಹಿಳೆಯರು ಹಾಗೂ ಬಾಲಕಿಯರ ಪತ್ತೆಗೆ ವಿಶೇಷ ಪೊಲೀಸ್ ಪಡೆಯನ್ನು ರಚಿಸಬೇಕು ಹಾಗೂ ಅಸಹಜ ಸಾವುಗಳ ನಿದರ್ಶನಗಳು ಅತಿ ಹೆಚ್ಚಿರುವ ಬೆಳ್ತಂಗಡಿ ತಾಲೂಕಿನಲ್ಲಿ ವಿಶೇಷ ಪೊಲೀಸ್ ಘಟಕವನ್ನು ಸ್ಥಾಪಿಸಬೇಕು ಎಂದು ಈ ಸಮಿತಿ ಶಿಫಾರಸು ಮಾಡಿತ್ತು.

ಇದಲ್ಲದೆ, 1995ರಿಂದ 2014ರ ನಡುವೆ ಯಾವುದಾದರೂ ಯಾತ್ರಿಕರ ಧರ್ಮಸ್ಥಳದಲ್ಲಿ ಕಣ್ಮರೆಯಾಗಿದ್ದಾರೆಯೇ ಎಂಬ ವರದಿಗಳನ್ನೂ ವಿಶೇಷ ತನಿಖಾ ತಂಡ ಪರಿಶೀಲಿಸಲಿದೆ. ಮೂಲಗಳ ಪ್ರಕಾರ, ಹಾಲಿ ದೂರುದಾರರಲ್ಲದೆ, ಸೂಕ್ತ ಮರಣೋತ್ತರ ಪರೀಕ್ಷೆ ನಡೆಸದೆ ಅನುಮಾನಾಸ್ಪದವಾಗಿ ಹೂಳಲಾಗಿರುವ ಮೃತದೇಹಗಳ ಕುರಿತು ದಾಖಲಾಗಿರುವ ದೂರುಗಳ ಕುರಿತೂ ವಿಶೇಷ ತನಿಖಾ ತಂಡ ಪರಿಶೀಲನೆ ನಡೆಸಲಿದೆ.

ವಿಶೇಷ ತನಿಖಾ ತಂಡದ ಪ್ರಕಾರ, ಧರ್ಮಸ್ಥಳದ ಸುತ್ತಮುತ್ತ ಸಾಮೂಹಿಕ ಹತ್ಯೆಗಳು ಹಾಗೂ ಅಂತ್ಯಕ್ರಿಯೆಗಳು ನಡೆದಿವೆ ಎಂಬ ದೂರುದಾರನ ಪ್ರತಿಪಾದನೆ ಸಂಪೂರ್ಣ ಸುಳ್ಳಲ್ಲ. ಹೀಗಾಗಿ, ಈ ಪ್ರದೇಶದಲ್ಲಿ ಹೂಳಲಾಗಿರುವ ಮೃತದೇಹಗಳಿಗಾಗಿ ನಡೆಯುತ್ತಿರುವ ಶೋಧ ಕಾರ್ಯಾಚರಣೆ ಜೊತೆಗೆ ತನ್ನ ತನಿಖೆಯನ್ನು ವಿಸ್ತರಿಸಲು ವಿಶೇಷ ತನಿಖಾ ತಂಡ ಮುಂದಾಗಿದೆ.

ಹಲವಾರು ಸ್ಥಳಗಳನ್ನು ಅಗೆದಾಗ ಸಿಕ್ಕಿದ ಕೆಲವು ಅವಶೇಷಗಳ ವಿಧಿವಿಜ್ಞಾನ ವರದಿಗಳಿಗಾಗಿ ನಾವು ಕಾಯುತ್ತಿದ್ದೇವೆ. ಶಂಕಿತ ಸ್ಥಳಗಳಲ್ಲಿ ಅವಶೇಷಗಳ ಹುಡುಕಾಟ ಮುಂದುವರಿಯಲಿದೆ. ನೆರೆಯ ರಾಜ್ಯಗಳಿಂದ ಬಂದು ಧರ್ಮಸ್ಥಳದಲ್ಲಿ ನಾಪತ್ತೆಯಾಗಿರುವವರ ಬಗ್ಗೆಯೂ ನಾವು ಪರಿಶೀಲಿಸುತ್ತೇವೆ ಎಂದು ಮೂಲಗಳು ತಿಳಿಸಿರುವ ಬಗ್ಗೆ ವರದಿಯಾಗಿದೆ.

ಎಸ್ಐಟಿ ಈಗಾಗಲೇ ವಿಧಿವಿಜ್ಞಾನ ತನಿಖೆಯನ್ನು ಪ್ರಾರಂಭಿಸಿದೆ. ಈ ಪ್ರದೇಶದ ಮಣ್ಣು ಹೆಚ್ಚು ಆಮ್ಲೀಯವಾಗಿದ್ದು, 15 ವರ್ಷಗಳಿಗೂ ಹಿಂದಿನ ದೇಹಗಳ ಅಸ್ಥಿಪಂಜರದ ಅವಶೇಷಗಳು ಉಳಿದಿರುವ ಸಾಧ್ಯತೆ ಕಡಿಮೆ. ಆದರೆ, ಮೃತದೇಹ ಕೊಳೆತ ನಂತರ ಮಣ್ಣಿನಲ್ಲಿ ಫಾಸ್ಫೇಟ್‌ಗಳು, ನೈಟ್ರೇಟ್‌ಗಳು, ಲಿಪಿಡ್‌ಗಳು ಮತ್ತು ಡಿಎನ್ಎ ಮೊದಲಾದ ಅಂಶಗಳು ದಶಕಗಳವರೆಗೆ ಉಳಿಯುವ ಸಾಧ್ಯತೆ ಇದೆ.

ಆದರೆ, ಅಂತಹ ರಾಸಾಯನಿಕಗಳ ಕುರುಹುಗಳು ಇತರ ನೈಸರ್ಗಿಕ ಕಾರಣಗಳಿಂದಲೂ ಮಣ್ಣಿನಲ್ಲಿ ಉಂಟಾಗಬಹುದು. ಆದ್ದರಿಂದ ಅವುಗಳನ್ನು ಸಾಮೂಹಿಕ ಹತ್ಯೆ ಮತ್ತು ಸಮಾಧಿಗಳಿಗೆ ಸಂಬಂಧ ಕಲ್ಪಿಸುವುದು ಕಷ್ಟಕರವಾಗಿದೆ ಎಂದು ವಿಧಿವಿಜ್ಞಾನ ತಜ್ಞರು ಹೇಳುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News