ಬಾಕಿ ಬಿಡುಗಡೆ ಆಗ್ರಹಿಸಿ ಕಾಮಗಾರಿ ಸ್ಥಗಿತ: ಮಾ.5ರಿಂದ ರಾಜ್ಯಾದ್ಯಂತ ಗುತ್ತಿಗೆದಾರರ ಮುಷ್ಕರ
ಸಾಂದರ್ಭಿಕ ಚಿತ್ರ (Image by freepik)
ಬೆಂಗಳೂರು: ರಾಜ್ಯ ಸರಕಾರ ವಿವಿಧ ಇಲಾಖೆಗಳಿಂದ ಗುತ್ತಿಗೆದಾರರಿಗೆ ಬರಬೇಕಾದ 38ಸಾವಿರ ಕೋಟಿ ರೂ.ಗಳ ಬಾಕಿ ಮೊತ್ತವನ್ನು ಮಾ.5ರೊಳಗೆ ಬಿಡುಗಡೆ ಮಾಡದಿದ್ದರೆ ರಾಜ್ಯಾದ್ಯಂತ ಎಲ್ಲ ಕಾಮಗಾರಿಗಳನ್ನು ನಿಲ್ಲಿಸಿ, ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ರಾಜ್ಯ ಗುತ್ತಿಗೆದಾರರ ಸಂಘ ನಿರ್ಧರಿಸಿದೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಆರ್.ಮಂಜುನಾಥ್, ಪ್ರಮುಖ ಹಬ್ಬಗಳಾದ ಗೌರಿ ಗಣೇಶ, ದಸರಾ ಮತ್ತು ದೀಪಾವಳಿ ಸಮಯದಲ್ಲಿ ಗುತ್ತಿಗೆದಾರರಿಗೆ ಯಾವುದೇ ಸರಕಾರವಾದರೂ ಬಾಕಿ ಹಣವನ್ನು ಬಿಡುಗಡೆ ಮಾಡುವ ಪರಿಪಾಠವನ್ನು ಬೆಳೆಸಿಕೊಂಡು ಬಂದಿದೆ. ಆದರೆ ಇದುವರೆಗೂ ಕಾಂಗ್ರೆಸ್ ಸರಕಾರದಿಂದ ಹಣ ಬಿಡುಗಡೆ ಮಾಡಿರುವುದಿಲ್ಲ ಎಂದರು.
ಮೂರು ವರ್ಷದಿಂದ ಬಿಲ್ ಪಾವತಿಯಾಗದ್ದರಿಂದ ಗುತ್ತಿಗೆದಾರರು ಆರ್ಥಿಕ ಸಂಕಷ್ಟದಲ್ಲಿದ್ದು, ಸಾಲ ಪಾವತಿಸಲಾಗದೆ ವಿಷ ಕುಡಿಯುವ ಸ್ಥಿತಿಗೆ ತಲುಪಿದ್ದಾರೆ. ಲೋಕೋಪಯೋಗಿ, ಜಲಸಂಪನ್ಮೂಲ, ಗ್ರಾಮೀಣಾಭಿವೃದ್ಧಿ, ಸಣ್ಣ ನೀರಾವರಿ, ನಗರಾಭಿವೃದ್ಧಿ, ವಸತಿ, ಕಾರ್ಮಿಕ, ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ)ನಲ್ಲಿ 2021-22, 2022-23, 2023-24 ರಿಂದ 38ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಹಣ ಬಾಕಿ ಉಳಿದಿದೆ ಎಂದು ಅವರು ಮಾಹಿತಿ ನೀಡಿದರು.
ಸರಕಾರ ಮೊತ್ತವನ್ನು ಒಂದೇ ಬಾರಿಯಲ್ಲದಿದ್ದರೂ ಹಂತ-ಹಂತವಾಗಿ ಬಿಡುಗಡೆ ಮಾಡುವ ಪ್ರಾಮಾಣಿಕತೆಯನ್ನು ತೋರಬೇಕಿತ್ತು. ಆದರೆ ಗುತ್ತಿಗೆದಾರರನ್ನು ನಿರ್ಲಕ್ಷ್ಯ ಮಾಡುತ್ತಾ ಬಂದಿದೆ. ಹಿಂದಿನ ಸರಕಾರಕ್ಕಿಂತ ಈ ಸರಕಾರದಲ್ಲಿ ಕಮಿಷನ್ ಹೆಚ್ಚಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕೃತ ಸಭೆ ಕರೆದರೆ ಎಲ್ಲ ಮಾಹಿತಿಯನ್ನು ದಾಖಲೆ ಸಹಿತ ನೀಡಲಾಗುವುದು. 2025ರ ಎಪ್ರಿಲ್‍ನಲ್ಲಿ ಹಣ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದರು, ಅದನ್ನು ಉಳಿಸಿಕೊಂಡಿಲ್ಲ. ನಮ್ಮ ಸಮಸ್ಯೆ ಆಲಿಸಲು ಸಭೆಯನ್ನೂ ಕರೆದಿಲ್ಲ ಎಂದು ಮಂಜುನಾಥ್ ದೂರಿದರು.