ಶಾಸಕರಿಗೆ ರಕ್ಷಣೆ ನೀಡುವ ಕೆಲಸ ಸ್ಪೀಕರ್ ಮಾಡಬೇಕು: ಬಿಜೆಪಿ ಶಾಸಕ ಮುನಿರತ್ನ
"ನಾನೊಬ್ಬ ಶಾಸಕನಾಗಿ ರಸ್ತೆಯಲ್ಲಿ ಓಡಾಡುತ್ತಿದ್ದರೆ ನನಗೆ ಮೊಟ್ಟೆ ಹೊಡೆಯುವುದು, ಮಸಿ ಬಳಿಯುವುದು ಮಾಡುತ್ತಿದ್ದಾರೆ"
ಬಿಜೆಪಿ ಶಾಸಕ ಮುನಿರತ್ನ (File Photo)
ಬೆಂಗಳೂರು: ನಾನೊಬ್ಬ ಶಾಸಕನಾಗಿ ರಸ್ತೆಯಲ್ಲಿ ಓಡಾಡುತ್ತಿದ್ದರೆ ನನಗೆ ಮೊಟ್ಟೆ ಹೊಡೆಯುವುದು, ಶರ್ಟ್ ಹರಿಯುವುದು, ಮಸಿ ಬಳಿಯುವುದು ಮಾಡುತ್ತಿದ್ದಾರೆ. ನಮಗೆ ರಕ್ಷಣೆ ನೀಡುವ ಕೆಲಸ ನೀವು(ಸ್ಪೀಕರ್) ಮಾಡಬೇಕು ಎಂದು ಬಿಜೆಪಿ ಸದಸ್ಯ ಮುನಿರತ್ನ ಮನವಿ ಮಾಡಿದರು.
ಗುರುವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಬಳ್ಳಾರಿಯಲ್ಲಿ ಬ್ಯಾನರ್, ಫ್ಲೆಕ್ಸ್ ಕಟ್ಟುವ ವಿಚಾರದಲ್ಲಿ ಎಂತಹ ಅನಾಹುತ ಆಯಿತು. ದಯಮಾಡಿ ಈ ಫ್ಲೆಕ್ಸ್ ಗಳನ್ನು ನಿಷೇಧ ಮಾಡಿ ಎಂದು ಕೋರಿದರು.
ನಾನು ಪ್ರತಿನಿಧಿಸುವ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ 138 ಮದ್ಯದಂಗಡಿ(ಬಾರ್) ಗಳು ಇವೆ. ಮಹಿಳೆಯರು ಈ ಮದ್ಯದಂಗಡಿಗಳನ್ನು ಮುಚ್ಚುವಂತೆ ಆಗ್ರಹಿಸಿದರೆ, ಅವರ ವಿರುದ್ಧವೆ ಎಫ್‍ಐಆರ್ ದಾಖಲಾಗುತ್ತಿದೆ. ಬಾರ್ ಹಾಗೂ ರೆಸ್ಟೊರೇಂಟ್‍ಗಳ ಕುರಿತು ಕಾನೂನು ಏನು ಹೇಳುತ್ತದೆ ಎಂದು ಮಾಹಿತಿ ಕೊಡಿ ಎಂದರೆ ಅಧಿಕಾರಿಗಳು ಕೊಡುವುದಿಲ್ಲ. ಈ ಸಂಬಂಧ ಸುಮಾರು 1380 ಆರ್ ಟಿಐ ಅರ್ಜಿಗಳನ್ನು ಹಾಕಿದ್ದೇನೆ. ಆದರೂ, ಮಾಹಿತಿ ಕೊಡುತ್ತಿಲ್ಲ ಎಂದು ಅವರು ತಿಳಿಸಿದರು.
ಗನ್ ಮ್ಯಾನ್ ಪಡೆಯಲು ಸುಪ್ರೀಂ ಮೊರೆ: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ನನಗೆ ಜೀವ ಬೆದರಿಕೆಯಿದೆ. ಯಾವುದೆ ಸಮಯದಲ್ಲಿ ನನ್ನ ಮೇಲೆ ಏನು ಬೇಕಾದರೂ ಆಗಬಹುದು. ನನಗೆ ಗನ್ ಮ್ಯಾನ್ ಕೊಡಿ ಎಂದು ಮನವಿ ಮಾಡಿದರೂ ಕೊಟ್ಟಿಲ್ಲ. ಕೊನೆಗೆ ಸುಪ್ರೀಂಕೋರ್ಟ್‍ಗೆ ಹೋಗಿ ಆದೇಶ ತರುವಂತಾಯಿತು. ಮುಖ್ಯಮಂತ್ರಿಗೆ ನೇರವಾಗಿ ಮನವಿ ಮಾಡಿದ ಬಳಿಕ ನನಗೆ ಗನ್ ಮ್ಯಾನ್ ಕೊಟ್ಟರು ಎಂದು ಮುನಿರತ್ನ ಹೇಳಿದರು.
ಆದರೆ, ಉಪ ಮುಖ್ಯಮಂತ್ರಿ ನನ್ನ ಕ್ಷೇತ್ರಕ್ಕೆ ಬಂದು ಇಲ್ಲಿ ಸೋತಿರುವ ಅಭ್ಯರ್ಥಿಯೆ ಶಾಸಕರು ಎನ್ನುತ್ತಾರೆ. ಪ್ರತಿಯೊಂದು ವಿಚಾರದಲ್ಲೂ ಅವರೇ ಅಧಿಕಾರ ಚಲಾಯಿಸುತ್ತಿದ್ದಾರೆ. ಒಬ್ಬ ಜನಪ್ರತಿನಿಧಿಗೆ ಈ ರೀತಿ ತೊಂದರೆ ಮಾಡಿ, ಹಿಂಸೆ ಮಾಡಿ ಆನಂದ ಪಡಬಾರದು. ನನ್ನ ಕ್ಷೇತ್ರದಲ್ಲಿ ಕೆಲಸಗಳು ಆಗುತ್ತಿಲ್ಲ. ಶಾಸಕರ ಮೇಲೆ ದೂರು ದಾಖಲಿಸುವ, ಅತ್ಯಾಚಾರ ಪ್ರಕರಣ ದಾಖಲಿಸಿದರೆ ಮಾತ್ರ ಪೊಲೀಸ್ ಅಧಿಕಾರಿಗಳಿಗೆ ನನ್ನ ಕ್ಷೇತ್ರದಲ್ಲಿ ಸ್ಥಳ ನಿಯುಕ್ತಿ ಮಾಡುತ್ತಾರಂತೆ ಎಂದು ಅವರು ದೂರಿದರು.