×
Ad

ಸರಕಾರಿ ವೈದ್ಯರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಐಪಿಡಿ ಚಿಕಿತ್ಸೆ ನೀಡಲು ಅವಕಾಶ ಇಲ್ಲ: ಸಚಿವ ದಿನೇಶ್ ಗುಂಡೂರಾವ್

"ಸರಕಾರಿ ವೈದ್ಯರು ತಮ್ಮ ಕರ್ತವ್ಯಕ್ಕೆ ಅಡ್ಡಿಯಾಗದಂತೆ ಖಾಸಗಿ ಸೇವೆ ನಿರ್ವಹಿಸಬಹುದು"

Update: 2026-01-29 14:12 IST

ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಸೇವೆಯಲ್ಲಿ ಉಂಟಾಗುತ್ತಿರುವ ವ್ಯತ್ಯಯದಿಂದ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳ ಕುರಿತು ವಿಧಾನಸಭೆಯಲ್ಲಿ ಶಾಸಕ ಶಿವಲಿಂಗೇಗೌಡ ಅವರು ಕೇಳಿದ ಪ್ರಶ್ನೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಉತ್ತರಿಸಿದರು.

ಆರೋಗ್ಯ ಇಲಾಖೆ ತಾಲ್ಲೂಕು ಆಸ್ಪತ್ರೆಗಳಲ್ಲಿ ವೈದ್ಯರ ಮರುಹೊಂದಾಣಿಕೆ ಮೂಲಕ 24 ಗಂಟೆಯೂ ಆರೋಗ್ಯ ಸೇವೆ ಲಭ್ಯವಾಗುವಂತೆ ಮಾಡಲು ಎಲ್ಲಾ ಸಿದ್ಧತೆಗಳನ್ನು ಕೈಗೊಂಡಿದೆ ಎಂದು ಅವರು ತಿಳಿಸಿದರು.

ಇದೇ ವೇಳೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ವೈದ್ಯರ ಖಾಸಗಿ ಸೇವೆ ಕುರಿತು ಮಾತನಾಡಿದ ಸಚಿವರು, ಪ್ರಸ್ತುತ ಜಾರಿಯಲ್ಲಿರುವ ಸರ್ಕಾರಿ ಆದೇಶಗಳ ಪ್ರಕಾರ ಸರ್ಕಾರಿ ವೈದ್ಯರು ತಮ್ಮ ಕರ್ತವ್ಯದ ಅವಧಿ ನಂತರ, ಸರ್ಕಾರಿ ಕರ್ತವ್ಯಗಳಿಗೆ ಅಡ್ಡಿಯಾಗದಂತೆ ಖಾಸಗಿ ಸೇವೆ ನೀಡಲು ಅನುಮತಿ ಇದೆ ಎಂದು ಹೇಳಿದರು.

ಆದರೆ ಇನ್ನು ಮುಂದೆ ಸರ್ಕಾರಿ ವೈದ್ಯರು ಖಾಸಗಿ ಸೇವೆಯನ್ನು ಹೊರರೋಗಿಗಳಿಗೆ (OPD) ಮಾತ್ರ ನೀಡಬಹುದಾಗಿದ್ದು, ಖಾಸಗಿ ಸೇವೆಯಲ್ಲಿ ಒಳರೋಗಿಗಳಿಗೆ (IPD) ಚಿಕಿತ್ಸೆ ನೀಡುವಂತಿಲ್ಲ ಎಂದು ಆದೇಶಿಸಲಾಗಿದೆ. ಈ ಆದೇಶ ನೀಡಲು ಕಾರಣಗಳನ್ನು ವಿವರಿಸಿದ ಸಚಿವರು, ಒಳರೋಗಿಗಳಿಗೆ ನಿರಂತರ ಆರೈಕೆ ಹಾಗೂ ನಿಯಮಿತ ಪರೀಕ್ಷೆಯ ಅಗತ್ಯವಿರುತ್ತದೆ. ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಒಳರೋಗಿಗಳ ಚಿಕಿತ್ಸೆಗೆ ಸೇವೆ ಸಲ್ಲಿಸಿದರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಅವರ ಸೇವೆಯಲ್ಲಿ ವ್ಯತ್ಯಯ ಉಂಟಾಗಿ ರೋಗಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಿದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ಆರೈಕೆಯಲ್ಲಿನ ನಿರ್ಲಕ್ಷ್ಯದಿಂದ ಹಲವು ಸಮಸ್ಯೆಗಳು ಉಂಟಾಗಿರುವ ನಿದರ್ಶನಗಳಿದ್ದು, ಕೆಲವು ಸಂದರ್ಭಗಳಲ್ಲಿ ಸಾವಿಗೂ ಕಾರಣವಾಗಿರುವ ಬಗ್ಗೆ ಮಾನ್ಯ ಲೋಕಾಯುಕ್ತರು ಸೇರಿದಂತೆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಇದಲ್ಲದೆ, ಕರ್ನಾಟಕ ಆಡಳಿತ ಸುಧಾರಣಾ ಆಯೋಗವು ತನ್ನ ವರದಿಯಲ್ಲಿ ಸಾರ್ವಜನಿಕ ಸೇವೆಗೆ ಆದ್ಯತೆ ನೀಡುವ ಉದ್ದೇಶದಿಂದ ಸರ್ಕಾರಿ ವೈದ್ಯರ ಖಾಸಗಿ ಸೇವೆಯನ್ನು ನಿಯಂತ್ರಿಸುವಂತೆ ಶಿಫಾರಸು ಮಾಡಿದೆ ಎಂದು ಸಚಿವರು ಹೇಳಿದರು.

ಕೇರಳ ಸೇರಿದಂತೆ ಇತರ ರಾಜ್ಯಗಳಲ್ಲಿ ಇದೇ ರೀತಿಯ ನಿರ್ಬಂಧಗಳು ಜಾರಿಯಲ್ಲಿದ್ದು, ಅಲ್ಲಿ ಕಟ್ಟುನಿಟ್ಟಾದ ಷರತ್ತುಗಳ ಅಡಿಯಲ್ಲಿ ಸರ್ಕಾರಿ ವೈದ್ಯರಿಗೆ ಖಾಸಗಿ ಸೇವೆಯಲ್ಲಿ OPD ಸೇವೆಗಳಿಗೆ ಮಾತ್ರ ಅನುಮತಿ ನೀಡಲಾಗಿದೆ ಎಂದು ಅವರು ವಿವರಿಸಿದರು.

ಈ ಎಲ್ಲಾ ಕಾರಣಗಳಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ವೈದ್ಯರ ಖಾಸಗಿ ಸೇವೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ, ಹಿಂದಿನ ಎಲ್ಲಾ ಸೂಚನೆಗಳ ಜೊತೆಗೆ ಈ ಆದೇಶವನ್ನು ಹೊರಡಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಇನ್ನು ಮುಂದೆ ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಒಳರೋಗಿಗಳಿಗೆ (IPD) ಚಿಕಿತ್ಸೆ ನೀಡುವುದು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದ್ದು, ತಮ್ಮ ಕರ್ತವ್ಯದ ಅವಧಿಯ ನಂತರ ಹಾಗೂ ನಿಗದಿತ ಸರ್ಕಾರಿ ಕರ್ತವ್ಯಗಳಿಗೆ ಅಡ್ಡಿಯಾಗದಂತೆ ಹೊರರೋಗಿ ವಿಭಾಗದಲ್ಲಿ (OPD) ಮಾತ್ರ ಖಾಸಗಿ ಕ್ಲಿನಿಕ್ ಅಥವಾ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸಬಹುದಾಗಿದೆ. ಅದರ ಸಂಪೂರ್ಣ ವಿವರಗಳನ್ನು ಸರ್ಕಾರಕ್ಕೆ ಘೋಷಿಸುವುದು ಕಡ್ಡಾಯವಾಗಿದೆ.

ಮೇಲಿನ ಷರತ್ತುಗಳನ್ನು ಉಲ್ಲಂಘಿಸಿದಲ್ಲಿ ಕಾನೂನಿನಡಿಯಲ್ಲಿ ಅನುಮತಿಸಲಾದ ಕ್ರಮ ಕೈಗೊಳ್ಳಲಾಗುವುದು ಹಾಗೂ ಕರ್ನಾಟಕ ನಾಗರಿಕ ಸೇವಾ ನಿಯಮಗಳ ಅಡಿಯಲ್ಲಿ ಶಿಸ್ತು ಕ್ರಮಕ್ಕೆ ಒಳಪಡಿಸಲಾಗುತ್ತದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News