ಮುಂದಿನ ಶೈಕ್ಷಣಿಕ ವರ್ಷ ಆರಂಭದ ಜೂ.1 ರೊಳಗೆ ಶಿಕ್ಷಕರ ನೇಮಕಾತಿ: ಸಚಿವ ಮಧುಬಂಗಾರಪ್ಪ
ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷ ಆರಂಭವಾಗುವ ಜೂ.1 ರೊಳಗೆ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧುಬಂಗಾರಪ್ಪ ಭರವಸೆ ನೀಡಿದ್ದಾರೆ.
ಗುರುವಾರ ವಿಧಾನಸಭೆ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಎನ್.ಎಚ್.ಕೋನರೆಡ್ಡಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 10 ಸಾವಿರ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಪ್ರಕ್ರಿಯೆ ಆರಂಭಿಸಲಾಗಿದೆ. ಕಾಲಮಿತಿಯಲ್ಲಿ ಶಿಕ್ಷಕರ ನೇಮಕಾತಿಯಾಗಲಿದೆ ಎಂದು ಹೇಳಿದರು.
2016ರ ಜ.1ರಿಂದ 2020ರ ಡಿ.31ರ ವರೆಗಿನ ಖಾಸಗಿ ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ನಿವೃತ್ತಿ, ನಿಧನ, ರಾಜೀನಾಮೆ ಮತ್ತು ಇತರ ಕಾರಣಗಳಿಂದ ತೆರವಾದ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆಯನ್ನು ಆನ್‍ಲೈನ್ ಮೂಲಕ ನಡೆಸಲಾಗಿದೆ. ಪದವಿ ಪೂರ್ವ ಕಾಲೇಜುಗಳಲ್ಲಿ 2015ರ ಡಿ.31ರ ಪೂರ್ವದಲ್ಲಿ ಅನುದಾನಿತ ಖಾಸಗಿ ಪದವಿ ಪೂರ್ವ ಕಾಲೇಜುಗಳಲ್ಲಿ ತೆರವಾಗಿದ್ದ 1033 ಬೋಧಕ ಹುದ್ದೆಗಳನ್ನು ಭರ್ತಿ ಮಾಡಲು ಅವಕಾಶ ಕಲ್ಪಿಸಿದ್ದು, ಈ ಪೈಕಿ 468 ಬೋಧಕ ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ ನೀಡಲಾಗಿದೆ ಎಂದು ಅವರು ಹೇಳಿದರು.
ಖಾಸಗಿ ಅನುದಾನಿತ ಪ್ರೌಢಶಾಲೆಗಳಿಗೆ ಸಂಬಂಧಿಸಿದಂತೆ ಆನ್‍ಲೈನ್ ಮೂಲಕ ಖಾಲಿಯಾದ ಬೋಧಕ ಹುದ್ದೆಗಳನ್ನು ಭರ್ತಿ ಮಾಡಲು ಸಂಬಂಧಿಸಿದ ಶಾಲಾ ಆಡಳಿತ ಮಂಡಳಿಗೆ ಸೂಚನೆ ನೀಡಲಾಗಿದೆ. ಪ್ರಾಥಮಿಕ ಶಾಲೆಗಳಿಗೆ ಸಂಬಂಧಿಸಿದಂತೆ ಖಾಲಿಯಾದ ಅನುದಾನಿತ ಶಿಕ್ಷಕರ ಹುದ್ದೆಯನ್ನು ಹೆಚ್ಚುವರಿ ಶಿಕ್ಷಕರ ಹುದ್ದೆಯಿಂದ ತುಂಬಿಕೊಳ್ಳಲು ಅವಕಾಶವಿದೆ. ನೇರ ನೇಮಕಾತಿಗೆ ಅವಕಾಶವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.