×
Ad

ರಾಜ್ಯದ ನಾಲ್ಕು ರಕ್ತನಿಧಿ ಕೇಂದ್ರಗಳನ್ನು ರೀಜನಲ್ ಸೆಂಟರ್ ಆಫ್ ಎಕ್ಸಲೆನ್ಸ್ ಆಗಿ ಮೇಲ್ದರ್ಜೆಗೇರಿಸಲು ಕ್ರಮ: ಸಚಿವ ದಿನೇಶ್ ಗುಂಡೂರಾವ್

Update: 2025-06-16 20:37 IST

ಬೆಂಗಳೂರು: ರಾಜ್ಯದಲ್ಲಿ ಅತಿ ಹೆಚ್ಚು ರಕ್ತ ಸಂಗ್ರಹಿಸುವ ನಾಲ್ಕು ಸರಕಾರಿ ರಕ್ತನಿಧಿ ಕೇಂದ್ರಗಳನ್ನು ರೀಜನಲ್ ಸೆಂಟರ್ ಆಫ್ ಎಕ್ಸಲೆನ್ಸ್ ರಕ್ತ ಕೇಂದ್ರಗಳಾಗಿ ಮೇಲ್ದರ್ಜೆಗೇರಿಸಲು ಕ್ರಮವಹಿಸಲಾಗುತ್ತಿದ್ದು, ದೇಶದಲ್ಲಿಯೇ ಎಕ್ಸಲೆನ್ಸ್ ರಕ್ತ ಕೇಂದ್ರಗಳನ್ನು ಮೊದಲ ಬಾರಿಗೆ ಅನುಷ್ಟಾನ ಮಾಡಲಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಸೋಮವಾರ ನಗರದ ಶೇಷಾದ್ರಿಪುರಂ ಕಾಲೇಜಿನ ಸಭಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಿಶ್ವರಕ್ತದಾನಿಗಳ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬೆಂಗಳೂರು, ಹುಬ್ಬಳ್ಳಿ, ಬಳ್ಳಾರಿ ಮತ್ತು ಮಂಗಳೂರಿನಲ್ಲಿ ರೀಜನಲ್ ಸೆಂಟರ್ ಆಫ್ ಎಕ್ಸಲೆನ್ಸ್ ರಕ್ತನಿಧಿ ಕೇಂದ್ರಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ಕೇಂದ್ರಗಳು ಹಬ್-ಅಂಡ್-ಸ್ಪೋಕ್ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಪ್ರತಿ ಕೇಂದ್ರವು ತನ್ನ ಕಾರ್ಯ ವ್ಯಾಪ್ತಿಯಲ್ಲಿರುವ ರಕ್ತ ನಿಧಿಗಳನ್ನು ಮೇಲ್ವಿಚಾರಣೆ ಮಾಡುತ್ತದೆ ಎಂದು ಅವರು ವಿವರಿಸಿದರು.

ರೀಜನಲ್ ಸೆಂಟರ್ ಆಫ್ ಎಕ್ಸಲೆನ್ಸ್ ರಕ್ತನಿಧಿ ಕೇಂದ್ರಗಳ ಜೊತೆಗೆ ಹೊಸದಾಗಿ 11 ಸರಕಾರಿ ರಕ್ತ ಕೇಂದ್ರಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಇದರಿಂದ ರಾಜ್ಯದ ಸರಕಾರಿ ಆಸ್ಪತ್ರೆಗೆ ಬರುವ ಬಡಜನರಿಗೆ ರಕ್ತ ಮತ್ತು ಅದರ ಅಂಗಾಂಶಗಳನ್ನು ಪೂರೈಸಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.

ನುರಿತ ತಜ್ಞರಿಂದ ಎಲ್ಲ ರಕ್ತ ಕೇಂದ್ರಗಳಿಗೆ ತರಬೇತಿ ಕಾರ್ಯಕ್ರಮಗಳು, ಜಿಲ್ಲೆಗಳಲ್ಲಿ ರಕ್ತದ ಕೊರತೆಯಿರುವ ರಕ್ತ ಕೇಂದ್ರಗಳಿಗೆ, ರಕ್ತ ಶೇಖರಣಾ ಘಟಕಗಳಿಗೆ ಹಾಗೂ ಆಸ್ಪತ್ರೆಗಳಿಗೆ ಸಮರ್ಪಕವಾದ, ಸುರಕ್ಷಿತ ಮತ್ತು ಗುಣಮಟ್ಟದ ರಕ್ತ ಒದಗಿಸುವುದನ್ನು ಖಚಿತಪಡಿಸುವುದರ ಮುಖಾಂತರ ಕರ್ನಾಟಕವು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ರಕ್ತದ ಗುಣಮಟ್ಟವನ್ನು ಕಾಯ್ದುಕೊಳ್ಳಲಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ರಾಜ್ಯ ಸರಕಾರದಿಂದ ರಕ್ತ ಸಂಗ್ರಹಣೆಗೆ ಉತ್ತಮ ವ್ಯವಸ್ಥೆ ಕಲ್ಪಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ತಾಯಂದಿರ ಸಾವುಗಳನ್ನು ತಡೆಯುವಲ್ಲಿ ರಕ್ತದ ಪಾತ್ರ ಪ್ರಮುಖವಾಗಿದೆ. ತಾಲೂಕು ಸರಕಾರಿ ಆಸ್ಪತ್ರೆಗಳಲ್ಲಿ ಪ್ಲಾಸ್ಮಾ ರಕ್ತ ಸಂಗ್ರಹಣೆಯ ವ್ಯವಸ್ಥೆ ಇರಲಿಲ್ಲ. ಇದೀಗ ಎಲ್ಲ 147 ತಾಲೂಕು ಆಸ್ಪತ್ರೆಗಳಲ್ಲಿ ಪ್ಲಾಸ್ಮಾ ರಕ್ತ ಸಂಗ್ರಹಣೆ ವ್ಯವಸ್ಥೆ ಜಾರಿಗೆ ತರಲಾಗುತ್ತಿದ್ದು, ಅಗತ್ಯ ಉಪಕರಣಗಳ ಖರೀದಿಗೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.

ಸರಕಾರದ ವತಿಯಿಂದ 9 ರಕ್ತ ಸಾಗಣಿಕ ವಾಹನಗಳು ಚಾಲನೆಯಲ್ಲಿದೆ. ಹೊಸದಾಗಿ 4 ರಕ್ತ ಸಾಗಣಿಕ ಮತ್ತು ರಕ್ತ ಸಂಗ್ರಹಣಾ ವಾಹನಗಳ ಖರೀದಿ ಪ್ರಕ್ರಿಯೆ ಚಾಲನೆಯಲ್ಲಿದ್ದು, ಶೀಘ್ರದಲ್ಲೆ ರಕ್ತ ಸಂಗ್ರಹಣೆ ಮತ್ತು ಸಾಗಣಿಕೆ ಸೇವೆಗೆ ಅನುವು ಮಾಡಿಕೊಡಲಾಗುವುದು ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‍ಷನ್ ಸೊಸೈಟಿಯ ಯೋಜನಾ ನಿರ್ದೇಶಕಿ ವಿನೋತ್ ಪ್ರಿಯಾ ಆರ್. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕರಾದ ಡಾ. ಉಮಾ ಬುಗ್ಗಿ ಸೇರಿದಂತೆ ಶೇಷಾದ್ರಿಪುರಂ ಕಾಲೇಜಿನ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.

‘ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ.1ರಷ್ಟು ಜನರಿಗೆ ರಕ್ತದ ಅವಶ್ಯಕತೆ ಇದೆ. 2024-25ರಲ್ಲಿ 8,15,402 ರಕ್ತದ ಯುನಿಟ್‍ಗಳನ್ನು ಸಂಗ್ರಹಿಸುವ ಗುರಿ ನಿಗದಿಪಡಿಸಲಾಗಿದ್ದು, 10,11,073 ರಕ್ತದ ಯುನಿಟ್‍ಗಳನ್ನು ಸಂಗ್ರಹಿಸಲಾಗಿದೆ. ಈ ಮೂಲಕ ರಾಜ್ಯದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ನಿಗದಿಪಡಿಸಿದ ರಕ್ತ ಸಂಗ್ರಹಣೆಯ ಗುರಿಗಿಂತ ಶೇ.124ರಷ್ಟು ಪ್ರಗತಿ ಸಾಧಿಸಲಾಗಿದೆ. ಒಂದು ಯುನಿಟ್ ರಕ್ತವು ನಾಲ್ಕು ಜೀವಗಳನ್ನು ಉಳಿಸಬಹುದು. ಹೀಗಾಗಿ ನಮ್ಮ ಯುವಕ, ಯುವತಿಯರು ರಕ್ತದಾನಕ್ಕೆ ಮುಂದಾಗಬೇಕು’

-ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ

ರಕ್ತದಾನ ಮಾಡಿ ಮಾದರಿಯಾದ ದಿನೇಶ್ ಗುಂಡೂರಾವ್

ಇದೇ ವೇಳೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಲಯನ್ಸ್ ಬ್ಲಡ್ ಸೆಂಟರ್‍ನ ಜೀವಧಾರ ಸಂಚಾರಿ ರಕ್ತದಾನ ವಾಹನದಲ್ಲಿ ರಕ್ತದಾನ ಮಾಡಿ ಸಾರ್ವಜನಿಕರಿಗೆ ಮಾದರಿಯಾದರು.

ರಕ್ತದಾನಿಗಳಿಗೆ ಸನ್ಮಾನ:

ಅತೀ ಹೆಚ್ಚು ಬಾರಿ ರಕ್ತದಾನ ಮಾಡಿದ ಡಾ. ರಾಜನ್, ರಾಮದಾಸ್ ಗೌಡ್ರು, ದೇವಣ್ಣ, ಸುಜಾತ, ವೈಟ್ ಫೀಲ್ಡ್ ನ ಸಹಾಯಕ ಪೊಲೀಸ್ ಆಯುಕ್ತ ರೀನಾ ಸುವರ್ಣ ಎನ್. ಹಾಗೂ ಇನ್ನಿತರರನ್ನು ಸನ್ಮಾನಿಸಲಾಯಿತು. ಹಾಗೆಯೇ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ವಿಶ್ವ ರಕ್ತದಾನಿಗಳ ದಿನ ಕುರಿತು ಆಯೋಜಿಸಿದ್ದ ಪ್ರಬಂಧ ಸ್ಪರ್ಧೆ, ಭಿತ್ತಿಪತ್ರಗಳ ಸಿದ್ದಪಡಿಸುವಿಕೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News