×
Ad

ಟಿಡಿಆರ್ ಹಗರಣ : ದಲ್ಲಾಳಿಗಳು, ನಕಲಿ ಮಾಲಕರಿಗೆ ಸೇರಿದ 4.06 ಕೋಟಿ ರೂ.ಮೌಲ್ಯದ ಭೂಮಿ, ಸ್ತಿರಾಸ್ಥಿ ಜಪ್ತಿ

Update: 2025-08-15 19:55 IST

ಸಾಂದರ್ಭಿಕ ಚಿತ್ರ | PTI

ಬೆಂಗಳೂರು, ಆ.15: ಗ್ರೇಟರ್ ಬೆಂಗಳೂರು ಪ್ರಾಧಿಕಾರ ನೀಡುವ ಅಭಿವೃದ್ಧಿ ಹಕ್ಕು ವರ್ಗಾವಣೆ ಪ್ರಮಾಣ ಪತ್ರ(ಟಿಡಿಆರ್) ಹಗರಣ ಸಂಬಂಧ ದಲ್ಲಾಳಿಗಳು, ನಕಲಿ ಮಾಲಕರಿಗೆ ಸೇರಿದ ಸುಮಾರು 4.06 ಕೋಟಿ ರೂ.ಮೌಲ್ಯದ ಭೂಮಿ ಮತ್ತು ಫ್ಲ್ಯಾಟ್‍ಗಳನ್ನು ಜಾರಿ ನಿರ್ದೇಶನಾಲಯ (ಈ.ಡಿ.)ತಾತ್ಕಾಲಿಕವಾಗಿ ಶುಕ್ರವಾರ ಜಪ್ತಿ ಮಾಡಿರುವುದಾಗಿ ವರದಿಯಾಗಿದೆ.

ಈ ಪ್ರಕರಣ ಸಂಬಂಧ ಮೇ 23ರಂದು ಈ.ಡಿ. ಅಧಿಕಾರಿಗಳು ನಗರದ ವಾಲ್‍ಮಾರ್ಕ್ ರಿಯಾಲ್ಟಿ ಹೋಲ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್ ಕಚೇರಿ, ಅದರ ನಿರ್ದೇಶಕರು, ಕೆಲ ಬಿಲ್ಡರ್‌ಗಳು, ಬ್ರೋಕರ್‌ಗಳು, ನಕಲಿ ಟಿಡಿಆರ್ ಅರ್ಜಿದಾರರ ಮನೆಗಳು ಸೇರಿದಂತೆ 9 ಕಡೆ ಏಕಕಾಲಕ್ಕೆ ದಾಳಿ ನಡೆಸಿ ಶೋಧ ಕೈಗೊಂಡು ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿದ್ದರು. ಇದೀಗ ಆರೋಪಿಗಳ ಸ್ಥಿರಾಸ್ತಿಗಳನ್ನು ಜಪ್ತಿ ಮಾಡಿರುವುದಾಗಿ ಈ.ಡಿ. ಮೂಲಗಳು ತಿಳಿಸಿವೆ.

2009-2015ರ ಅವಧಿಯಲ್ಲಿ ಬಿಬಿಎಂಪಿ/ಬಿಡಿಎ ವ್ಯಾಪ್ತಿಯಲ್ಲಿ ನಡೆದಿದ್ದ ಟಿಡಿಆರ್ ಹಗರಣ ಸಂಬಂಧ ಈ ಹಿಂದೆ ಎಸಿಬಿಯಲ್ಲಿ ಎಫ್‍ಐಆರ್ ದಾಖಲಾಗಿತ್ತು. ವಿಆರ್‌ಎಚ್‍ಪಿಎಲ್ ಕಂಪೆನಿಯು ಟಿಡಿಆರ್ ಪಡೆದು ಬಳಿಕ ಅದನ್ನು ರಿಯಲ್ ಎಸ್ಟೇಟ್ ಕಂಪೆನಿಗಳು ಮತ್ತು ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಿ ಸುಮಾರು 27.68 ಕೋಟಿ ರೂ. ಅಕ್ರಮ ಲಾಭ ಮಾಡಿಕೊಂಡಿರುವುದು ಎಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.

ಈ ಪ್ರಕರಣ ಆಧರಿಸಿ ಈ.ಡಿ. ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‍ಎ) ಅಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು. ಈ ಟಿಡಿಆರ್ ಹಗರಣದಲ್ಲಿ ಬಿಬಿಎಂಪಿ ಅಧಿಕಾರಿಗಳು, ಡೆವಲಪರ್ಸ್‍ಗಳು, ಬ್ರೋಕರ್‌ ಗಳು ಭಾಗಿಯಾಗಿರುವುದು ಈ.ಡಿ. ಅಧಿಕಾರಿಗಳ ತನಿಖೆಯಲ್ಲಿ ಬಯಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News