‘ಟನೆಲ್ ರಸ್ತೆ’ ಯೋಜನೆ ವಿರೋಧಿಸಿ ಬಿಜೆಪಿಯಿಂದ ಹೋರಾಟ : ತೇಜಸ್ವಿ ಸೂರ್ಯ
ತೇಜಸ್ವಿ ಸೂರ್ಯ
ಬೆಂಗಳೂರು : ಬೆಂಗಳೂರಿನಲ್ಲಿ ಸುರಂಗ ಮಾರ್ಗದ ಮೂಲಕ ರಸ್ತೆ ನಿರ್ಮಿಸಿ, ತೆರಿಗೆ ಹಣದ ಲೂಟಿಯ ಯೋಜನೆಗೆ ಬಿಜೆಪಿ ಅವಕಾಶ ನೀಡುವುದಿಲ್ಲ. ಟನಲ್ ರಸ್ತೆ ಯೋಜನೆ ವಿರೋಧಿಸಿ ಹೋರಾಟ ರೂಪಿಸಲಾಗುವುದು ಎಂದು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯಾಧ್ಯಕ್ಷ ತೇಜಸ್ವಿ ಸೂರ್ಯ ಅವರು ಎಚ್ಚರಿಸಿದ್ದಾರೆ.
ಸೋಮವಾರ ಬಿಜೆಪಿ ಕಾರ್ಯಾಲಯ ‘ಜಗನ್ನಾಥ ಭವನದ’ದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಟನೆಲ್ ರಸ್ತೆ ಯೋಜನೆಯನ್ನು ಬಿಜೆಪಿ ವಿರೋಧಿಸುತ್ತದೆ. ಸಾರ್ವಜನಿಕರ ಒಂದೊಂದು ರೂಪಾಯಿಗೆ ನ್ಯಾಯ ಸಿಗುವ ರೀತಿಯಲ್ಲಿ ನಾವು ಹೋರಾಟ ಮಾಡಲಿದ್ದೇವೆ. ಟನೆಲ್ ರಸ್ತೆಯ ಡಿಪಿಆರ್, ಸಾಧ್ಯಾಸಾಧ್ಯತೆ ವರದಿಯಲ್ಲಿ ಸಮಸ್ಯೆ ಇದೆ. ಡಿಬಾರ್ ಆದ ಕನ್ಸಲ್ಟೆಂಟ್ ಅನ್ನು ನೇಮಿಸಿ ಇದನ್ನು ಸಿದ್ಧಪಡಿಸಿದ್ದಾರೆ ಎಂದು ಆರೋಪಿಸಿದರು.
ಟನೆಲ್ ರಸ್ತೆಯು ಕಾಂಗ್ರೆಸ್ ಜೇಬನ್ನು ತುಂಬಿಸುವ ಯೋಜನೆ. ಮಾಧ್ಯಮಗಳ ಮೂಲಕ ಇವತ್ತು ಜನಜಾಗೃತಿ ಶುರು ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಬೆಂಗಳೂರಿನ ಎಲ್ಲ ಸಂಸದರು, ಶಾಸಕರು, ನಮ್ಮ ರಾಜ್ಯಾಧ್ಯಕ್ಷರು, ಬೆಂಗಳೂರಿನ ಬಿಜೆಪಿಯ ನಮ್ಮೆಲ್ಲ ನಾಯಕರು ಚರ್ಚೆ ಮಾಡಲಿದ್ದೇವೆ. ಕಾನೂನಾತ್ಮಕ ಹೋರಾಟ, ಜನಜಾಗೃತಿ ಮೊದಲಾದ ವಿಷಯಗಳ ಚಿಂತನೆ ನಡೆಸುತ್ತೇವೆ. ಇದು ಸಾರ್ವಜನಿಕರ ಹಣದ ಲೂಟಿ ಎಂದು ಅವರು ದೂರಿದರು.
ಡಿಪಿಆರ್ (ವಿಸ್ತೃತ ಯೋಜನಾ ವರದಿ) ಬಹಿರಂಗಪಡಿಸಿಲ್ಲ. ಸಾಧ್ಯಾಸಾಧ್ಯತೆ ವರದಿಗೂ ಮೊದಲೇ ಡಿಪಿಆರ್ ಸಿದ್ಧವಾಗಿತ್ತು. ಸಾಧ್ಯಾಸಾಧ್ಯತೆ ವರದಿಯಲ್ಲಿ ಡಿಪಿಆರ್ ಕನ್ಸಲ್ಟೆಂಟ್ ಯಾರಾಗಬೇಕೆಂದು ಸಲಹೆ ನೀಡಿದ್ದಾರೆ. ಸಾರ್ವಜನಿಕ ವಾಹನ ವ್ಯವಸ್ಥೆ ಇಲ್ಲದ ಕಾರಣ ಏರ್ ಪೋರ್ಟಿಗೆ ಶೇ.72ರಷ್ಟು ಜನರು ಖಾಸಗಿ ವಾಹನದಲ್ಲೇ ಹೋಗಬೇಕಿದೆ. ಬೆಂಗಳೂರಿನ ಸಂಚಾರ ಸಮಸ್ಯೆ ಬಗೆಹರಿಸಲು ನಾವು 2020ರಲ್ಲಿ ಸಮಗ್ರ ಸಂಚಾರ ಯೋಜನೆಯನ್ನು ರೂಪಿಸಿದ್ದೆವು. ಬೆಂಗಳೂರಿಗೆ 16,580 ಬಸ್‍ಗಳು ಬೇಕೆಂದು ಈ ಯೋಜನೆ ಹೇಳಿದೆ. ಇವತ್ತು ಆರು ಸಾವಿರ ಬಸ್ಸುಗಳಿದ್ದು, 9ಸಾವಿರಕ್ಕೂ ಹೆಚ್ಚು ಬಸ್ ಕೊರತೆ ಇದೆ ಎಂದು ವಿಶ್ಲೇಷಿಸಿದರು.
ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರಾಗಿ ಸುರಂಗ ರಸ್ತೆ ಯೋಜನೆ ಬೆಂಗಳೂರಿನವರ ಮುಂದೆ ನಿಂತಿದೆ. 18 ಕಿಮೀ ಯೋಜನೆಗೆ 18,500 ಕೋಟಿ ರೂ.ಗಳನ್ನು ಬಳಸುವುದಾಗಿ ತಿಳಿಸಿದ್ದಾರೆ. ಹೆಬ್ಬಾಳದಿಂದ ಡೈರಿ ವೃತ್ತದ ವರೆಗೆ ಕೇವಲ ಕಾರುಗಳಿಗಾಗಿ ಮಾಡುತ್ತಿರುವ ಯೋಜನೆ ಇದಾಗಿದೆ. ಈ ಯೋಜನೆಯ ಡಿಪಿಆರ್, ಸಾಧ್ಯಾಸಾಧ್ಯತೆ ವರದಿಯಲ್ಲಿ ಸಾಕಷ್ಟು ಅವ್ಯವಹಾರ ಮತ್ತು ತಪ್ಪುಗಳು ಆಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ತಿಳಿಸಿದರು.
ಕೋಟ್ಯಧಿಪತಿಗಳ ಯೋಜನೆ: ಟನೆಲ್ ಯೋಜನೆಗೆ ಟೋಲ್ ಹಾಕಬೇಕಿದೆ ಎಂದು ಡಿಸಿಎಂ ಹೇಳಿದ್ದಾರೆ. ಡಿಪಿಆರ್‍ನಲ್ಲಿ 660ರೂ.ಅವರೇ ವಿಧಿಸಲುದ್ದೇಶಿಸಿ ಟೋಲ್ ಶುಲ್ಕ. ದಿನಕ್ಕೆ ಆ ಕಡೆಯಿಂದ ಈ ಕಡೆ ಹೋಗಲು 660ರೂ. ಕಟ್ಟುವಂತಹ ಜನರು ಬೆಂಗಳೂರಿನಲ್ಲಿ ಎಷ್ಟಿದ್ದಾರೆ? ಈ ಡಿಪಿಆರ್ ಪ್ರಕಾರ ಬಸ್, ಆಟೋ, ದ್ವಿಚಕ್ರ ವಾಹನ ಚಲಿಸುವಂತಿಲ್ಲ, ಕೇವಲ ಕಾರಿಗಷ್ಟೇ ಅವಕಾಶ ಇದೆ. ಸದಾಶಿವನಗರ, ಡಾಲರ್ಸ್ ಕಾಲನಿ, ಕೋರಮಂಗಲದ 4ನೇ ಬ್ಲಾಕಿನಲ್ಲಿರುವ ಕೋಟ್ಯಧಿಪತಿಗಳಿಗೆ ಮಾತ್ರ ಉಪಯೋಗ ಆಗುವ ಟನೆಲ್ ಯೋಜನೆ ಇದು ಎಂದು ಅವರು ಟೀಕಿಸಿದರು.