×
Ad

ಕೆಲಸ ಮಾಡುತ್ತಿದ್ದ ಮಳಿಗೆಯಲ್ಲೇ ಚಿನ್ನಾಭರಣ ದೋಚಿದ್ದ ಇಬ್ಬರು ಆರೋಪಿಗಳ ಸೆರೆ

Update: 2023-10-11 17:27 IST

ವಶಪಡಿಸಿಕೊಂಡಿರುವ ಚಿನ್ನಾಭರಣ

ಬೆಂಗಳೂರು, ಅ.11: ಕೆಲಸ ಮಾಡುತ್ತಿದ್ದ ಮಳಿಗೆಯಲ್ಲಿ ಸಂಚು ರೂಪಿಸಿ 1 ಕೆ.ಜಿ 262 ಗ್ರಾಂ ಚಿನ್ನಾಭರಣಗಳನ್ನು ದೋಚಿದ್ದ ಸೇಲ್ಸ್ ಮ್ಯಾನ್ ಸೇರಿ ಇಬ್ಬರನ್ನು ಬಂಧಿಸಿರುವ ಹಲಸೂರು ಗೇಟ್ ಪೊಲೀಸರು 75 ಲಕ್ಷ ರೂ. ಮೌಲ್ಯದ ಚಿನ್ನವನ್ನು ಜಪ್ತಿ ಮಾಡಿದ್ದಾರೆ.

ಬುಧವಾರ ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ, ರಾಜಸ್ಥಾನದ ಜಾಲೂರು ಜಿಲ್ಲೆಯ ಆನಂದನಗರದ ಲಾಲ್‍ಸಿಂಗ್ ರಾವ್(20), ರಾಜು ಯಾನೆ ರಾಜಾರಾವ್(23) ಬಂಧಿತ ಆರೋಪಿಗಳಾಗಿದ್ದು, ಕೃತ್ಯದಲ್ಲಿ ಭಾಗಿ ಪರಾರಿಯಾಗಿರುವ ಮತ್ತಿಬ್ಬರ ಬಂಧನಕ್ಕೆ ತೀವ್ರ ಶೋಧ ನಡೆಸಲಾಗಿದೆ. ಬಂಧಿತರಿಂದ 75 ಲಕ್ಷ ಮೌಲ್ಯದ 1 ಕೆ.ಜಿ 262 ಗ್ರಾಂ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದರು.

ಬಂಧಿತ ಆರೋಪಿ ಲಾಲ್‍ಸಿಂಗ್ ರಾವ್ 8 ತಿಂಗಳಿನಿಂದ ಹಲಸೂರು ಗೇಟ್‍ನ ಅಭಿಷೇಕ್ ಜೈನ್ ಅವರ ಲಕ್ಷ್ಮಿ ಜುವೆಲ್ಲರಿ ಮಳಿಗೆಯಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಾ ಮಾಲಕ ನಂಬಿಕೆ ಗಳಿಸಿದ್ದ. ಆತನನ್ನು ನಂಬಿದ ಮಾಲಕರು ಸೆ.28ರಂದು ಆಂಧ್ರಪ್ರದೇಶದ ನಲ್ಲೂರಿನಲ್ಲಿರುವ ಮುಕೇಶ್ ಮತ್ತು ಶುಭಂ ಗೋಲ್ಡ್ ಜ್ಯೂವಲ್ಲರ್ಸ್ ಅಂಗಡಿಯ ಮಾಲಕರಿಗೆ 1 ಕೆ.ಜಿ 262ಗ್ರಾಂ ತೂಕದ ಚಿನ್ನದ ಆಭರಣಗಳನ್ನು ಕೊಟ್ಟು ಬರುವಂತೆ ಕಳುಹಿಸಿಕೊಟ್ಟಿದ್ದರು ಎಂದು ಅವರು ತಿಳಿಸಿದರು.

ಅದರಂತೆ ಚಿನ್ನಾಭರಣಗಳನ್ನು ತೆಗೆದುಕೊಂಡು ಲಾಲ್‍ಸಿಂಗ್ ರಾವ್ ನೆಲ್ಲೂರಿಗೆ ಹೋಗಿ ಮೊಬೈಲ್‍ನಲ್ಲಿ ಮಾಲಕರಿಗೆ ತಿಳಿಸಿ ನೆಲ್ಲೂರಿನಲ್ಲಿ ತನಗೆ ಯಾರೋ ಅಪರಿಚಿತರು ಗನ್‍ಪಾಯಿಂಟ್ ಮಾಡಿ, ಕೈಗಳಿಗೆ ಚಾಕುವಿನಿಂದ ಹಲ್ಲೆಮಾಡಿ, ಚಿನ್ನವಿರುವ ಬ್ಯಾಗ್‍ನ್ನು ಕಿತ್ತುಕೊಂಡು ಹೋಗಿರುತ್ತಾರೆಂದು ತಿಳಿಸಿದ್ದಾನೆ ಎಂದು ಬಿ.ದಯಾನಂದ ಹೇಳಿದರು.

ಇದರಿಂದ ಆತಂಕಗೊಂಡ ಲಕ್ಷ್ಮಿ ಜ್ಯೂವೆಲ್ಲರಿ ಮಾಲಕ ಅಭಿಷೇಕ್ ಜೈನ್, ನೆಲ್ಲೂರಿಗೆ ಹೋಗಿ ಸೇಲ್ಸ್ ಮ್ಯಾನ್ ಲಾಲ್‍ಸಿಂಗ್ ರಾವ್ ಅಲ್ಲಿಂದ ಕರೆದುಕೊಂಡು ಬಂದು ಅ.2ರಂದು ಹಲಸೂರುಗೇಟ್ ಪೆÇಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಂಡ ಇನ್‍ಸ್ಪೆಕ್ಟರ್ ಹನುಮಂತ ಭಜಂತ್ರಿ ಮತ್ತವರ ಸಿಬ್ಬಂದಿ ಸೇಲ್ಸ್ ಮ್ಯಾನ್ ಲಾಲ್‍ಸಿಂಗ್ ರಾವ್‍ರನ್ನು ಸುದೀರ್ಘ ವಿಚಾರಣೆ ನಡೆಸಿದಾಗ ಇನ್ನೂ ಮೂವರ ಗುಂಪು ಕಟ್ಟಿಕೊಂಡು ಕೃತ್ಯ ನಡೆಸಿರುವುದನ್ನು ಬಾಯ್ಬಿಟ್ಟಿದ್ದಾನೆ ಎಂದು ಬಿ.ದಯಾನಂದ ತಿಳಿಸಿದರು.

ಪ್ರಕರಣದ ಬಗ್ಗೆ ಖಚಿತವಾದ ಮಾಹಿತಿಯನ್ನು ಆಧರಿಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಕೃತ್ಯದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಮತ್ತಿಬ್ಬರ ಬಂಧನಕ್ಕೆ ಶೋಧ ನಡೆಸಲಾಗಿದೆ ಎಂದು ಬಿ.ದಯಾನಂದ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್, ಡಿಸಿಪಿ ಶೇಖರ್ ಎಚ್.ಟಿ, ಎಸಿಪಿ ಶಿವಾನಂದ ಚಲವಾದಿ ಇದ್ದರು.


 



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News