×
Ad

ತುಮಕೂರು-ಯಶವಂತಪುರ ಮಾರ್ಗವಾಗಿ ಮೆಮು ರೈಲು ಓಡಾಟಕ್ಕೆ ರೈಲ್ವೆ ಇಲಾಖೆ ಅಸ್ತು

Update: 2024-09-03 21:11 IST

ಬೆಂಗಳೂರು : ತುಮಕೂರು ಜನತೆಯ ಬಹುದಿನಗಳ ಬೇಡಿಕೆಯಾದ ‘ರೆಗ್ಯುಲರ್ ಪ್ಯಾಸೆಂಜರ್ ಫ್ರೆಂಡ್ಲಿ ಮೆಮು ಟ್ರೈನ್ ಸರ್ವಿಸ್’ ಓಡಾಟಕ್ಕೆ ರೈಲ್ವೆ ಇಲಾಖೆ ಅನುಮೋದನೆ ನೀಡಿರುವುದಾಗಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ತುಮಕೂರಿನಿಂದ ಬೆಂಗಳೂರು ಹಾಗೂ ಬೆಂಗಳೂರಿನಿಂದ ತುಮಕೂರಿಗೆ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಪ್ಯಾಸೆಂಜರ್ ರೈಲು ಓಡಾಡಿಸಲು ತುಮಕೂರು ಜನತೆಯ ಬಹಳ ದಿನಗಳ ಬೇಡಿಕೆ ಇತ್ತು, ಇದರ ಪ್ರತಿಫಲವಾಗಿ ಸೆ.2ರಂದು ರೈಲ್ವೆ ಇಲಾಖೆ ತುಮಕೂರು-ಯಶವಂತಪುರ ಮಾರ್ಗವಾಗಿ ಮೆಮು ರೈಲು ಓಡಾಟಕ್ಕೆ ಅನುಮೋದನೆ ಹೊರಡಿಸಿದೆ ಎಂದು ಹೇಳಿದ್ದಾರೆ.

ಮೆಮು ರೈಲು ಸೇವೆ ವಿವರ: ತುಮಕೂರು-ಯಶವಂತಪುರ ಮೆಮು ರೈಲು ಸಂಖ್ಯೆ 06201(66561) ಬೆಳಗ್ಗೆ 8.55ಕ್ಕೆ ತುಮಕೂರಿಂದ ಹೊರಟು 10.25ಕ್ಕೆ ಯಶವಂತಪುರ ತಲುಪಲಿದೆ. ರೈಲು ಸಂಖ್ಯೆ  06202(66562) ಯಶವಂತಪುರದಿಂದ ಸಂಜೆ 5.40ಕ್ಕೆ ಹೊರಟು 7.05ಕ್ಕೆ ತುಮಕೂರು ತಲುಪಲಿದೆ.

ಪ್ರತಿ ಸೋಮವಾರ ವಿಶೇಷ ಮೆಮು ರೈಲು ಸಂಖ್ಯೆ 06205(6565) ಬಾಣಸವಾಡಿ ರೈಲ್ವೆ ನಿಲ್ದಾಣದಿಂದ ಸಂಜೆ 6.15ಕ್ಕೆ ಹೊರಟು ತುಮಕೂರಿಗೆ ರಾತ್ರಿ 8.35ಕ್ಕೆ ತಲುಪಲಿದೆ. ಅದೇ ರೀತಿ ಪ್ರತಿ ಶನಿವಾರ ವಿಶೇಷ ಮೆಮು ರೈಲು ಸಂಖ್ಯೆ 06206(66566)ತುಮಕೂರಿನಿಂದ ಸಾಯಂಕಾಲ 7.40ಕ್ಕೆ ಹೊರಟು ರಾತ್ರಿ 10.05ಕ್ಕೆ ಬಾಣಸವಾಡಿ ತಲುಪಲಿದೆ.

ಈ ಮೆಮು ರೈಲು ಮಾರ್ಗಮಧ್ಯದಲ್ಲಿ ಕ್ಯಾತಸಂದ್ರ, ಹೀರೇಹಳ್ಳಿ, ದಾಬಸ್ ಪೇಟೆ, ನಿಡವಂದ, ಮುದ್ದಲಿಂಗನಹಳ್ಳಿ, ದೊಡ್ಡಬೆಲೆ, ಭೈರನಾಯಕನಹಳ್ಳಿ, ಗೊಲ್ಲಹಳ್ಳಿ, ಸೋಲದೇವನಹಳ್ಳಿ, ಚಿಕ್ಕಬಾಣಾವರ ರೈಲ್ವೆ ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ. ರವಿವಾರ ಹೊರತುಪಡಿಸಿ ವಾರದ 6 ದಿನಗಳಲ್ಲಿ ತುಮಕೂರು-ಯಶವಂತಪುರ ಮಾರ್ಗದಲ್ಲಿ ಈ ಮೆಮು ರೈಲು ಚಲಿಸಲಿದೆ.

ಯಶವಂತಪುರ-ಹೊಸೂರು ಮೆಮು ರೈಲು: ಯಶವಂತಪುರ-ಹೊಸೂರು ಮೆಮು ರೈಲು ಓಡಾಟಕ್ಕೂ ರೈಲ್ವೆ ಇಲಾಖೆ ಅನುಮೋದನೆ ನೀಡಿದೆ. ರೈಲು ಸಂಖ್ಯೆ 06203(66563) ಯಶವಂತಪುರ-ಹೊಸೂರು ಮಾರ್ಗವಾಗಿ ಮೆಮು ರೈಲು ಚಲಿಸಲಿದ್ದು, ಬೆಳಗ್ಗೆ 10.45ಕ್ಕೆ ಯಶವಂತಪುರದಿಂದ ಹೊರಟು ಮಧ್ಯಾಹ್ನ 12.30ಕ್ಕೆ ಹೊಸೂರು ತಲುಪಲಿದೆ.

ಅದೇ ರೀತಿ 06204(66564) ಹೊಸೂರು-ಯಶವಂತಪುರ ಮೆಮು ಮಧ್ಯಾಹ್ನ 3.20ಕ್ಕೆ ಹೊಸೂರಿನಿಂದ ಹೊರಟು ಸಾಯಂಕಾಲ 5.15ಕ್ಕೆ ಯಶವಶವಂತಪುರ ತಲುಪಲಿದೆ. ಈ ರೈಲು ಮಾರ್ಗ ಮದ್ಯದಲ್ಲಿ ಹೆಬ್ಬಾಳ, ಬಾಣಸವಾಡಿ, ಬೆಳ್ಳಂದೂರು ರಸ್ತೆ, ಕಾರ್ಮೆಲರಾಂ, ಹೀಲಲಿ, ಆನೆಕಲ್ ರಸ್ತೆ ರೈಲ್ವೆ ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ.

ಇನ್ನೂ ಕೆಲವೇ ದಿನಗಳಲ್ಲಿ ಈ ಎರಡು ಮಾರ್ಗಮಧ್ಯದಲ್ಲಿ ಮೆಮು ರೈಲುಗಳ ಓಡಾಟಕ್ಕೆ ಚಾಲನೆ ನೀಡುವುದಾಗಿ ಸೋಮಣ್ಣ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News