ರಾಜ್ಯ ಕ್ಷಯರೋಗ ನಿವಾರಣಾ ಸಂಸ್ಥೆಯನ್ನು ಮುಚ್ಚಿದ ಸರಕಾರ
ಬೆಂಗಳೂರು, ಅ.18: ಕರ್ನಾಟಕ ರಾಜ್ಯ ಕ್ಷಯರೋಗ ನಿವಾರಣಾ ಸಂಸ್ಥೆಯನ್ನು ಮುಚ್ಚಲಾಗಿದ್ದು, ಸಂಸ್ಥೆಯ ಕೆಲಸ ಕಾರ್ಯಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಆಯುಕ್ತಾಲಯದ ಕ್ಷಯರೋಗ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ ಎಂದು ರಾಜ್ಯ ಸರಕಾರವು ಶನಿವಾರದಂದು ಆದೇಶ ಹೊರಡಿಸಿದೆ.
ಕರ್ನಾಟಕ ರಾಜ್ಯ ಕ್ಷಯ ರೋಗ ನಿವಾರಣಾ ಸಂಸ್ಥೆಯಲ್ಲಿ ಯಾವುದೇ ಕಾರ್ಯಚರಣೆ ನಡೆಸದ ಕಾರಣ, 2024ರ ಡಿ.26ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿನ ತೀರ್ಮಾನದಂತೆ ಇದೀಗ ಆದೇಶ ಹೊರಡಿಸಲಾಗಿದೆ.
ಕರ್ನಾಟಕ ರಾಜ್ಯ ಕ್ಷಯ ರೋಗ ನಿವಾರಣಾ ಸಂಸ್ಥೆಯನ್ನು ಮುಕ್ತಾಯಗೊಳಿಸಿ, ಸಂಸ್ಥೆಯ ಆಸ್ತಿ/ಹೊಣೆಗಾರಿಗಳನ್ನು ಹಾಗೂ ಕೆಲಸ ಕಾರ್ಯಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಅಧೀನದ ಕ್ಷಯರೋಗ ವಿಭಾಗಕ್ಕೆ ಹಸ್ತಾಂತರಿಸಿ ಆದೇಶಿಸಿದೆ.
ಕರ್ನಾಟಕ ರಾಜ್ಯ ಕ್ಷಯರೋಗ ನಿವಾರಣಾ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಒಟ್ಟು ನಾಲ್ಕು ಜನ ಸಿಬ್ಬಂದಿಗಳ ಪೈಕಿ ಮೂವರು ಸಿಬ್ಬಂದಿಗಳು ಇತ್ತೀಚೆಗೆ ನಿವೃತ್ತರಾಗಿದ್ದು, ಅವರ ಬಾಕಿ ಮೊತ್ತವನ್ನು ಆರ್ಥಿಕ ಇಲಾಖೆಯ ಸಹಮತಿಯ ನಂತರ ಇತ್ಯರ್ಥ ಪಡಿಸುವುದು. ಉಳಿದ ಒಬ್ಬ ಸಿಬ್ಬಂದಿಯನ್ನು ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ನಿಯಮನುಸಾರ ತೆಗೆದುಕೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಿದೆ.
ಕರ್ನಾಟಕ ರಾಜ್ಯ ಕ್ಷಯರೋಗ ನಿವಾರಣಾ ಸಂಸ್ಥೆಗೆ ಸೇರಿದ ಘೋಷಾ ಆಸ್ಪತ್ರೆಯ ಹಿಂಭಾಗದಲ್ಲಿರುವ ಕಟ್ಟಡ ಮತ್ತು ಭೂಮಿಯನ್ನು ಎದೆ, ಶ್ವಾಸಕೋಶದ ಆರೋಗ್ಯದ ಮೇಲೆ ಗಮನಹರಿಸುವ ಆರೋಗ್ಯ ಸೌಲಭ್ಯಕ್ಕಾಗಿ ಉಳಿಸಿಕೊಳ್ಳಲಾಗುತ್ತದೆ.
ಕರ್ನಾಟಕ ರಾಜ್ಯ ಕ್ಷಯರೋಗ ನಿವಾರಣಾ ಸಂಸ್ಥೆಯ ಸುಮಾರ 98 ಲಕ್ಷ ರೂ.ಗಳ ಸ್ಥಿರ ಠೇವಣಿಯ ಮೊತ್ತವನ್ನು ನೌಕರರ ಅನುಮತಿಸಬಹುದಾದ ವೇತನ, ಪಿಂಚಣಿ ಬಾಕಿಗಳನ್ನು ಪಾವತಿಸಲು ಮತ್ತು ಕಟ್ಟಡದ ನವೀಕರಣ, ಉಪಕರಣಗಳ ಪೂರೈಕೆಗಾಗಿ ಬಳಸಲಾಗುವುದು ಎಂದು ಆದೇಶದಲ್ಲಿ ಹೇಳಿದೆ.