‘ಯುಜಿಸಿಇಟಿ 25- ಸೀಟು ಹಂಚಿಕೆ ಮಂಥನ’ಕ್ಕೆ ನಿರೀಕ್ಷೆಗೂ ಮೀರಿ ಸ್ಪಂದನೆ
ಬೆಂಗಳೂರು : ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಪ್ರಕ್ರಿಯೆ ಸುಗಮಗೊಳಿಸುವ ಉದ್ದೇಶದಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ(ಕೆಇಎ) ವತಿಯಿಂದ ಶನಿವಾರ ರಾಜ್ಯದ ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಯುಜಿಸಿಟಿಇ 25- ಸೀಟು ಹಂಚಿಕೆ ಮಂಥನ’ ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿ ಸ್ಪಂದನೆ ವ್ಯಕ್ತವಾಗಿದೆ.
ರಾಜ್ಯದ 16 ಸರಕಾರಿ ಎಂಜಿನಿಯರಿಂಗ್, 8 ಅನುದಾನಿತ, 6 ವಿಟಿಯು ಸಂಯೋಜಿತ ಎಂಜಿನಿಯರಿಂಗ್ ಕಾಲೇಜುಗಳು ಹಾಗೂ 9 ಜಿಲ್ಲೆಗಳ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ನಡೆದ ಕಾರ್ಯಕ್ರಮಕ್ಕೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ಚಿಂತಾಮಣಿಯ ವಿಟಿಯು ಸಂಯೋಜಿತ ಎಂಜಿನಿಯರಿಂಗ್ ಕಾಲೇಜಿನಲ್ಲಿ ಚಾಲನೆ ನೀಡಿದರು. ಸ್ವತಃ ಸಚಿವರು ಈ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರೊಂದಿಗೆ ಸಂವಾದ ನಡೆಸಿ, ಅವರಿಂದ ಕೇಳಿಬಂದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಹಾಸನದ ಸರಕಾರಿ ಎಂಜಿನಿಯರಿಂಗ್ ಕಾಲೇಜಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿದ್ಯಾರ್ಥಿಳ ಪ್ರಶ್ನೆಗಳಿಗೆ ಉತ್ತರಿಸಿದರು. ಕಾರ್ಯಕ್ರಮ ನಡೆದ ಪ್ರತಿಯೊಂದು ಕಾಲೇಜಿಗೂ ತಲಾ ಒಬ್ಬ ಕೆಇಎ ಪ್ರತಿನಿಧಿಯನ್ನು ಹಾಗೂ ಅಗತ್ಯ ತಾಂತ್ರಿಕ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ನಿರೀಕ್ಷೆಗೂ ಮೀರಿ ಜನ ಸೇರಿದ್ದರಿಂದ ಬಹುಸಂಖ್ಯೆಯ-ಸೆಷನ್‍ಗಳನ್ನು ನಡೆಸುವ ಮೂಲಕ ಅನುಕೂಲ ಮಾಡಿಕೊಡಲಾಯಿತು.
ಬೆಂಗಳೂರಿನಲ್ಲಿ ಬಿಎಂಎಸ್, ಅಂಬೇಡ್ಕರ್ ಮತ್ತು ಎಸ್.ಕೆ.ಐ.ಟಿ ಕಾಲೇಜುಗಳಲ್ಲಿ ಮಂಥನ ನಡೆಯಿತು. ಬಿಎಂಎಸ್ ಕಾಲೇಜಿನಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಜನ ಸೇರಿದ್ದರಿಂದ 19 ಕೊಠಡಿಗಳನ್ನು ಬಳಸಿಕೊಂಡು ಬಹುಸಂಖ್ಯೆಯ-ಸೆಷನ್‍ಗಳನ್ನು ನಡೆಸಲಾಯಿತು.
75 ಸಾವಿರಕ್ಕೂ ಹೆಚ್ಚು ಪೋಷಕರು, ವಿದ್ಯಾರ್ಥಿಗಳು ಈ ಸಂವಾದ ಕಾರ್ಯಕ್ರಮದ ನೇರ ಉಪಯೋಗ ಪಡೆದಿದ್ದಾರೆ. ಮಂಥನ ಕಾರ್ಯಕ್ರಮದಲ್ಲಿ ಬಳಸಿದ ಎಲ್ಲ ವಿಡಿಯೊಗಳನ್ನು ಕೆಇಎ ವಿಕಸನ ಯೂಟ್ಯೂಬ್ ಚಾನಲ್‍ನಲ್ಲಿ ಅಪ್ ಲೋಡ್ ಮಾಡಲಾಗುವುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಪ್ರಕಟನೆಯಲ್ಲಿ ತಿಳಿಸಿದ್ದಾರೆ.