×
Ad

ಯುಜಿಸಿಇಟಿ : ಅಂತಿಮ ಸುತ್ತಿನ ಫಲಿತಾಂಶ ಪ್ರಕಟ

Update: 2025-09-11 21:01 IST

ಬೆಂಗಳೂರು, ಸೆ.11: ಎಂಜಿನಿಯರಿಂಗ್ ಸೇರಿದಂತೆ ಇತರ ಯುಜಿಸಿಇಟಿ ಕೋರ್ಸ್‍ಗಳ ಮೂರನೇ ಹಾಗೂ ಅಂತಿಮ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟಿಸಿದ್ದು, ಶುಲ್ಕ ಪಾವತಿಸಿ ಕಾಲೇಜಿಗೆ ವರದಿ ಮಾಡಿಕೊಳ್ಳಲು ಸೆ.13 ಕೊನೆಯ ದಿನ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.

ಗುರುವಾರ ಪ್ರಕಟನೆ ಹೊರಡಿಸಿರುವ ಅವರು, ಯುಜಿಸಿಇಟಿ ಕೋರ್ಸ್‍ಗಳಲ್ಲಿ ಸೀಟು ಹಂಚಿಕೆಯಾದವರು ಕಡ್ಡಾಯವಾಗಿ ಕಾಲೇಜುಗಳಲ್ಲಿ ಪ್ರವೇಶ ಪಡೆಯಬೇಕಾಗುತ್ತದೆ. ಅಂತಹವರಿಗೆ ಯಾವುದೇ ಛಾಯ್ಸ್ ಆಯ್ಕೆಗೂ ಅವಕಾಶ ಇರುವುದಿಲ್ಲ. ಇದುವರೆಗೂ ಸೀಟು ಹಂಚಿಕೆಯಾದವರು ಶುಲ್ಕ ಪಾವತಿ ಮಾಡದೇ ಇದ್ದರೆ ಸೆ.13ರಂದು ಮಧ್ಯಾಹ್ನ 2.30ರೊಳಗೆ ಕಟ್ಟಬೇಕು. ಅದೇ ದಿನ ಸಂಜೆ 5.30ರೊಳಗೆ ಸೀಟು ಖಾತರಿ ಚೀಟಿ ಡೌನ್‍ಲೋಡ್ ಮಾಡಿಕೊಂಡು ಕಾಲೇಜಿಗೆ ವರದಿ ಮಾಡಿಕೊಳ್ಳಬೇಕು ಎಂದಿದ್ದಾರೆ.

ಹಂಚಿಕೆಯಾಗದೆ ಉಳಿದಿರುವ 14,940 ಎಂಜಿನಿಯರಿಂಗ್ ಹಾಗೂ 413 ಆರ್ಕಿಟೆಕ್ಚರ್ ಕೋರ್ಸ್ ಗಳ ಸೀಟುಗಳನ್ನು ಆಯಾ ಕಾಲೇಜುಗಳಿಗೆ ಹಸ್ತಾಂತರಿಸಲಾಗಿದೆ. ಪ್ರವೇಶಕ್ಕೆ ಅಂತಿಮ ದಿನಾಂಕದ ನಂತರ ಉಳಿಯುವ ಹಂಚಿಕೆಯಾದ ಸೀಟುಗಳನ್ನೂ ಕೊನೆ ದಿನಾಂಕದ ನಂತರ ಕಾಲೇಜುಗಳಿಗೆ ನೀಡಲಾಗುವುದು ಎಂದು ಹೇಳಿದ್ದಾರೆ.

ವೈದ್ಯಕೀಯಕ್ಕೂ ಅವಕಾಶ: ಎಂಜಿನಿಯರಿಂಗ್ ಸೇರಿದಂತೆ ಯುಜಿಸಿಇಟಿ ಹಂಚಿಕೆಯಾಗಿರುವವರೂ ನಂತರದ ಸುತ್ತುಗಳಲ್ಲಿ ಕಾಷನ್ ಡೆಪಾಸಿಟ್ ಕಟ್ಟಿ, ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್‍ಗಳ ಸೀಟು ಹಂಚಿಕೆಯಲ್ಲಿ ಭಾಗವಹಿಸಬಹುದು. ಒಂದು ವೇಳೆ ವೈದ್ಯಕೀಯ ಸೀಟು ಹಂಚಿಕೆಯಾದರೆ ಅಂತಹವರಿಗೆ ಪ್ರವೇಶಕ್ಕೂ ಅವಕಾಶ ಕಲ್ಪಿಸಲಾಗುವುದು ಎಂದು ಅವರು ವಿವರಿಸಿದ್ದಾರೆ.

ಇನ್ನು ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್‌ ಕೋರ್ಸ್‍ಗಳ ಪ್ರವೇಶಕ್ಕೆ ಅಂತಿಮ ಫಲಿತಾಂಶವನ್ನು ಎಂಸಿಸಿ ಫಲಿತಾಂಶದ ನಂತರ ಪ್ರಕಟಿಸಲಾಗುತ್ತದೆ ಎಂದು ಎಚ್.ಪ್ರಸನ್ನ ಸ್ಪಷ್ಟಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News