×
Ad

ರಾಜ್ಯಪಾಲರಿಗೆ ಫೈನಾನ್ಸ್ ಕಂಪೆನಿಯೊಂದಿಗೆ ಒಡನಾಟ ಇದೆಯಾ? : ಉಗ್ರಪ್ಪ ಪ್ರಶ್ನೆ

Update: 2025-02-09 20:47 IST

ಬೆಂಗಳೂರು : ಮೈಕ್ರೋ ಫೈನಾನ್ಸ್ ಸಂಸ್ಥೆಗಳ ವಿರುದ್ಧ ರಾಜ್ಯ ಸರಕಾರ ಜಾರಿಗೆ ಮುಂದಾಗದ್ದ ಸುಗ್ರೀವಾಜ್ಞೆಗೆ ರಾಜ್ಯಪಾಲ ಥಾವರ್‌ ಚಂದ್ ಗೆಹ್ಲೋಟ್ ಅವರು ಅಂಕಿತ ಹಾಕದ ವಾಪಸ್ ಕಳುಹಿಸಿರುವುದು ಖಂಡನೀಯವಾಗಿದ್ದು, ರಾಜ್ಯಪಾಲರಿಗೆ ಫೈನಾನ್ಸ್ ಕಂಪೆನಿಯೊಂದಿಗೆ ಏನಾದರೂ ಒಡನಾಟ ಇದೆಯೇ? ಎಂದು ಮಾಜಿ ಸಂಸದ, ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್.ಉಗ್ರಪ್ಪ ಪ್ರಶ್ನೆ ಮಾಡಿದ್ದಾರೆ.

ರವಿವಾರ ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಿರುಕುಳ ತಡೆಯುವ ಶಿಫಾರಸ್ಸನ್ನು ತಿರಸ್ಕಾರ ಮಾಡಿ ರಾಜ್ಯಪಾಲರು ವಾಪಾಸ್ ಕಳಿಸಿದ್ದಾರೆ. ಬಿಜೆಪಿಯವರು ಏನಾದರೂ ಸರಕಾರಕ್ಕೆ ಒಳ್ಳೆಯ ಹೆಸರು ಬರುತ್ತೆಂದು ರಾಜ್ಯಪಾಲರ ಮೇಲೆ ಒತ್ತಡ ಹೇರಿ ವಾಪಾಸ್ ಕಳುಹಿಸುವ ಪ್ರಯತ್ನ ಮಾಡಿದ್ದಾರೆ ಎಂದು ಟೀಕಿಸಿದರು.

ಬಡವರ ವಿರೋಧಿ ಕೃತ್ಯ ನಡೆಸಲು ರಾಜ್ಯಪಾಲರು ಮುಂದಾಗಿರುವುದು ಸರಿಯಲ್ಲ. ಈಗಲೂ ಸಹ ಅವಧಿ ಇದ್ದು, ರಾಜ್ಯ ಸರಕಾರದ ಶಿಫಾರಸು ಅಂಗಿಕರಿಸಬೇಕು.ಅಷ್ಟೇ ಮಾತ್ರವಲ್ಲದೆ, ಬಿಜೆಪಿಯವರು ರಾಜ್ಯಪಾಲರಿಗೆ ಮನವಿ ಮಾಡಬೇಕು.ಜನರಿಗೆ ಒಳ್ಳೆಯ ರೀತಿ ಇರುವ ಕಾನೂನುಗಳನ್ನು ಪರಿಚಯ ಮಾಡಿಸುವ ಕಾರ್ಯ ಎಲ್ಲ ಪಕ್ಷಗಳಿಂದ ಆಗಲೇಬೇಕು ಎಂದು ಅವರು ನುಡಿದರು.

ರಾಜ್ಯಪಾಲರು ಸ್ಪಷ್ಟನೆ ಕೇಳಬಾರದು ಎಂದೇನಿಲ್ಲ. ಬಿಜೆಪಿ ಮತ್ತು ಜೆಡಿಎಸ್ ಅವರ ವಿಚಾರದಲ್ಲಿ ರಾಜ್ಯಪಾಲರು ವರ್ಷವಾದರೂ ಸ್ಪಷ್ಟನೆ ಕೇಳಲ್ಲ. ಆದರೆ, ಬಡವರ ಕಾರ್ಯಕ್ಕೆ ಕಾಲಹರಣ ಮಾಡುವ ಪ್ರವೃತ್ತಿ ರಾಜ್ಯಪಾಲರು ತೋರಿದ್ದಾರೆ ಎಂದ ಅವರು, ರಾಜಕೀಯ ಉದ್ದೇಶ ಇಟ್ಟುಕೊಂಡು ರಾಜ್ಯಪಾಲರು ಸರಕಾರಕ್ಕೆ ತೊಂದರೆ ನೀಡಬಾರದು ಎಂದು ಉಗ್ರಪ್ಪ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಎಚ್.ಎಂ.ರೇವಣ್ಣ ಸೇರಿದಂತೆ ಪ್ರಮುಖರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News