ಸಚಿವ ಸ್ಥಾನ ಕೈತಪ್ಪಿದಕ್ಕೆ ಬೇಸರ ಇದೆ: ಶಾಸಕ ಎ.ಎಸ್. ಪೊನ್ನಣ್ಣ
ಕಾಂಗ್ರೆಸ್ ಶಾಸಕ ಎ.ಎಸ್. ಪೊನ್ನಣ್ಣ (File Photo)
ಬೆಂಗಳೂರು: ನನಗೂ ಸಂಪುಟದಲ್ಲಿ ಸಚಿವ ಸ್ಥಾನ ಕೈತಪ್ಪಿದ ಕಾರಣ ಬೇಸರ ಆಗಿದೆ ಎಂದು ಕಾಂಗ್ರೆಸ್ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರನಾಗಿ ನಿಷ್ಠೆಯಿಂದ ಸೇವೆ ಸಲ್ಲಿಸಿದ್ದೇನೆ. ನಿಸ್ವಾರ್ಥವಾಗಿ ಹಲವು ಶಾಸಕರನ್ನು ಕಾನೂನಿನ ಗಂಡಾಂತರಗಳಿಂದ ಪಾರು ಮಾಡಿದ್ದೇನೆ. ಮಂತ್ರಿ ಮಂಡಲದಲ್ಲಿ ನನ್ನನ್ನು ಸೇರಿಸಿಕೊಳ್ಳುವ ವಿಶ್ವಾಸ ಇತ್ತು. ಆದರೆ ನನಗೆ ಮಂತ್ರಿಮಂಡಲದಲ್ಲಿ ಅವಕಾಶ ಕೊಟ್ಟಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪಕ್ಷ ಕೆಲವು ಮಾನದಂಡದ ಮೇಲೆ ತೀರ್ಮಾನ ಮಾಡಿದೆ. ಅದಕ್ಕೆ ನಾನು ತಲೆಬಾಗಿ ಕೆಲಸ ಮಾಡುತ್ತೇನೆ. ಇವತ್ತು ಮುಖ್ಯಮಂತ್ರಿ ಪರವಾಗಿ ಪ್ರತಿಯೊಬ್ಬ ಶಾಸಕರು ನಿಲ್ಲಬೇಕಾಗುತ್ತದೆ. ವಿರೋಧ ಪಕ್ಷದವರು ಸಹಜವಾಗಿ ಸರಕಾರಕ್ಕೆ ಮುಜುಗರ ತರುವ ಕೆಲಸ ಮಾಡುತ್ತಾರೆ. ಅದನ್ನು ಎದುರಿಸಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ನಾನು ಕೂಡ ಕೊಡಗು ಭಾಗಕ್ಕೆ ಕೊಟ್ಟಿಲ್ಲ ಎಂದು ಹೇಳಬಹುದು. ಆದರೆ ಪಕ್ಷಕ್ಕೆ ತಮ್ಮದೇ ಆದ ರಾಜಕೀಯ ಲೆಕ್ಕಾಚಾರಗಳ ಮೇಲೆ ತೀರ್ಮಾನ ಮಾಡಿರುತ್ತದೆ. ಅದನ್ನು ನುಂಗಿಕೊಂಡು, ಜೀರ್ಣಿಸಿಕೊಂಡು ಮುಂದೆ ಹೋಗಬೇಕಾಗುತ್ತದೆ ಎಂದು ನುಡಿದರು.