ಪ್ರಶ್ನೆ ಪತ್ರಿಕೆ ಭದ್ರತೆ, ಗೌಪ್ಯತೆ ಕಾಯ್ದುಕೊಳ್ಳಲು AI ಬಳಕೆಗೆ ಸಿಎಂ ಡಿ.ಕೆ.ಶಿವಕುಮಾರ್ ಸಲಹೆ
Photo: X/@DKShivakumar
ಬೆಂಗಳೂರು: ಸರಕಾರಿ ವ್ಯವಸ್ಥೆಗಳಲ್ಲಿ ನಡೆಯುವ ವಂಚನೆ ತಡೆಗಟ್ಟುವಿಕೆ ಹಾಗೂ ವಿವಿಧ ಸರಕಾರಿ ಮತ್ತು ಶಿಕ್ಷಣ ಸಂಸ್ಥೆಗಳು ನಡೆಸುವ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವಲ್ಲಿ ದಕ್ಷತೆ, ಭದ್ರತೆ ಮತ್ತು ಗೌಪ್ಯತೆಯನ್ನು ಹೆಚ್ಚಿಸಲು ಕೃತಕ ಬುದ್ಧಿಮತ್ತೆ(ಎಐ) ನೆರವು ಬೇಕಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆಂಥ್ರೋಪಿಕ್‍ನ ತಾಂತ್ರಿಕ ಸಲಹೆ ಕೋರಿದರು.
ಗುರುವಾರ ವಿಧಾನಸೌಧದಲ್ಲಿ ಆಡಳಿತ, ಉನ್ನತ ಶಿಕ್ಷಣ, ಆರೋಗ್ಯ ರಕ್ಷಣೆ, ಸಂಶೋಧನೆ ಹಾಗೂ ರಾಜ್ಯದ ಸ್ಟಾರ್ಟ್‍ಅಪ್ ಪರಿಸರ ವ್ಯವಸ್ಥೆಯಲ್ಲಿ ಕೃತಕ ಬುದ್ಧಿಮತ್ತೆಯ (ಎಐ) ಬಳಕೆ ಹೆಚ್ಚಿಸಲು ಸುದೀರ್ಘ ಸಹಭಾಗಿತ್ವ ಸಾಧಿಸುವ ಕುರಿತು ‘ಆಂಥ್ರೋಪಿಕ್' ಸಂಸ್ಥೆಯ ನಿಯೋಗದೊಂದಿಗೆ ಮುಖ್ಯಮಂತ್ರಿ ಚರ್ಚೆ ನಡೆಸಿದರು.
ಈ ವೇಳೆ ಎಐ ಶಿಕ್ಷಣ ಮತ್ತು ಸಂಶೋಧನೆಯನ್ನು ಬಲಪಡಿಸಲು ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಸೇರಿದಂತೆ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಆಂಥ್ರೋಪಿಕ್‍ನ ‘ಕ್ಲಾಡ್ ಎಐ' ವೇದಿಕೆಯ ಲಭ್ಯತೆಗೆ ರಿಯಾಯಿತಿ, ಸಬ್ಸಿಡಿ ನೀಡುವಂತೆ ಡಿ.ಕೆ.ಶಿವಕುಮಾರ್ ಪ್ರಸ್ತಾಪಿಸಿದರು. ‘ಸಿಎಂ 100 ದಿನಗಳ' ಮೈಲಿಗಲ್ಲನ್ನು ಈ ಸಹಯೋಗದೊಂದಿಗೆ ಸಾಧಿಸುವ ಕುರಿತೂ ಚರ್ಚಿಸಲಾಯಿತು. ಜತೆಗೆ, ಕರ್ನಾಟಕದ ಸ್ಟಾರ್ಟ್‍ಅಪ್ ಪರಿಸರ ವ್ಯವಸ್ಥೆಗೆ ಬೆಂಬಲ ನೀಡಲು, ವಿಶೇಷವಾಗಿ ಡೀಪ್‍ಟೆಕ್ ಕ್ಷೇತ್ರದಲ್ಲಿರುವ ರಾಜ್ಯದ 20,000 ಕ್ಕೂ ಹೆಚ್ಚು ಸ್ಟಾರ್ಟ್‍ಅಪ್‍ಗಳಿಗೆ ಆಂಥ್ರೋಪಿಕ್‍ನಿಂದ ಬೆಂಬಲ ವಿಸ್ತರಿಸುವ ಬಗ್ಗೆ ಪರಿಶೀಲಿಸಲಾಯಿತು.
ಪ್ರಸ್ತಾವಿತ ‘ಎಐ ವಿವಿ', ಬೃಹತ್ ಮಟ್ಟದ ಕೌಶಲ್ಯಾಭಿವೃದ್ಧಿ ಯೋಜನೆಗಳು ಮತ್ತು ಡೀಪ್-ಟೆಕ್ ಅನ್ವೇಷಣೆಗಳಿಗೆ ನೀಡುವ ಬೆಂಬಲ ಒಳಗೊಂಡಂತೆ ಸಮಗ್ರ ಎಐ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ರಾಜ್ಯದ ದೃಷ್ಟಿಕೋನವನ್ನು ಮುಖ್ಯಮಂತ್ರಿ ವಿವರಿಸಿದರು. ದೇಶದಲ್ಲೇ ಅತಿ ದೊಡ್ಡ ಎಐ ಪ್ರಮಾಣಿಕೃತ ಪ್ರತಿಭಾವಂತರನ್ನು ರೂಪಿಸಲು, ರಾಜ್ಯದ ‘ನಿಪುಣ' ಕಾರ್ಯಕ್ರಮದಡಿ ‘ಕ್ಲಾಡ್' ಸರ್ಟಿಫಿಕೇಶನ್ ಸೇರಿದಂತೆ ಎಐ-ಸಂಬಂಧಿತ ಸರ್ಟಿಫಿಕೇಶನ್ ಕೋರ್ಸ್‍ಗಳನ್ನು ಪರಿಚಯಿಸುವ ಬಗ್ಗೆ ಚರ್ಚಿಸಿದರು
ಇ-ಆಡಳಿತ, ಗೃಹ ಇಲಾಖೆ ಹಾಗೂ ಇತರ ಸರಕಾರಿ ಸಂಸ್ಥೆಗಳಲ್ಲಿ ಎಐ ಅನ್ವಯಿಕೆಗಳನ್ನು ಗುರುತಿಸಲು ಇಲಾಖಾವಾರು ಕಾರ್ಯಪಡೆಗಳನ್ನು ರಚಿಸುವ ಕುರಿತೂ ಸಭೆಯಲ್ಲಿ ಪರಿಶೀಲಿಸಲಾಯಿತು. ಸೈಬರ್ ಬೆದರಿಕೆಗಳ ವಿರುದ್ಧದ ಸುರಕ್ಷತಾ ಕ್ರಮಗಳು, ನಾಗರಿಕರ ಡೇಟಾ ಮತ್ತು ಗೌಪ್ಯತೆಯ ರಕ್ಷಣೆ ಸೇರಿದಂತೆ ಜವಾಬ್ದಾರಿಯುತ ಎಐ ಪದ್ಧತಿಗಳನ್ನು ಭವಿಷ್ಯದ ಯೋಜನಾ ಅಳವಡಿಕೆಗಳ ಅಗತ್ಯ ಅಂಶಗಳಾಗಿ ಉಲ್ಲೇಖ ಮಾಡಲಾಯಿತು.
ಸಭೆಯಲ್ಲಿ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಆಂಥ್ರೋಪಿಕ್ ಸಂಸ್ಥೆಯ ಪರವಾಗಿ ಅಂತಾರಾಷ್ಟ್ರೀಯ ನೀತಿ ವಿಭಾಗದ ಮುಖ್ಯಸ್ಥ ಮೈಕೆಲ್ ಸೆಲ್ಲಿಟೋ, ಅಂತಾರಾಷ್ಟ್ರೀಯ ಮಾರುಕಟ್ಟೆಗಳ ವ್ಯವಸ್ಥಾಪಕ ನಿರ್ದೇಶಕ ಕ್ರಿಸ್ ಸಿಯೌರಿ, ಭಾರತದ ವ್ಯವಸ್ಥಾಪಕ ನಿರ್ದೇಶಕಿ ಐರಿನಾ ಘೋಷ್, ಭಾರತದ ನೀತಿ ವಿಭಾಗದ ಮುಖ್ಯಸ್ಥ ಆಮ್ಲಾನ್ ಮೊಹಾಂತಿ ಮತ್ತು ಸಾರ್ವಜನಿಕ ವಲಯ, ಆರೋಗ್ಯ ಹಾಗೂ ಶಿಕ್ಷಣ ವಿಭಾಗದ ಗೋ-ಟು-ಮಾರ್ಕೆಟ್ ಉಸ್ತುವಾರಿ ಸಮರ್ಥ್ ಮಸ್ಸೋನ್, ಸಿಎಂ ಆರ್ಥಿಕ ಸಲಹೆಗಾರ ಎಲ್.ಕೆ.ಅತೀಕ್ ಸೇರಿದಂತೆ ಪ್ರಮುಖರಿದ್ದರು.