ಆಡಿಯೋ ವೈರಲ್ ವಿವಾದ; ತಿಮ್ಮಾಪುರ ಜೊತೆ ಮಾತನಾಡಿದ್ದು ನಿಜ, ಆದರೆ ವಿಷಯ ತಿರುಚಲಾಗಿದೆ : ಎಸ್.ಜಿ.ನಂಜಯ್ಯನಮಠ

"ಹೈಕಮಾಂಡ್ ಅಥವಾ ಪೇಮೆಂಟ್ ಸೀಟ್ ಕುರಿತು ನಾವು ಯಾವುದೇ ಮಾತುಕತೆ ನಡೆಸಿಲ್ಲ"

Update: 2026-08-06 13:09 IST

ಬಾಗಲಕೋಟೆ : ಮಾಜಿ ಸಚಿವ ಆರ್.ಬಿ.ತಿಮ್ಮಾಪುರ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿರುವುದು ನಿಜ. ಆದರೆ ಆ ಮಾತುಕತೆಯಲ್ಲಿ ಇಲ್ಲದ ವಿಷಯಗಳನ್ನು ಸೇರಿಸಿ ಷಡ್ಯಂತ್ರ ರೂಪಿಸಿ ವೈರಲ್ ಮಾಡಲಾಗಿದೆ ಎಂದು ಕಾಂಗ್ರೆಸ್ ಬಾಗಲಕೋಟೆ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಸ್ಪಷ್ಟನೆ ನೀಡಿದ್ದಾರೆ.

ನಗರದ ನವನಗರ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಚಿವರಾದ ಬಳಿಕ ವಿಜಯಾನಂದ ಕಾಶಪ್ಪನವರ ಅವರನ್ನು ಭೇಟಿ ಮಾಡಿ ಸನ್ಮಾನಿಸಿದ್ದೇನೆ. ಅವರು ನನ್ನೊಂದಿಗೆ ಗೌರವಯುತವಾಗಿ ನಡೆದುಕೊಂಡಿದ್ದಾರೆ. ಸನ್ಮಾನ ಕಾರ್ಯಕ್ರಮದಿಂದ ಹಿಂದಿರುಗುವ ವೇಳೆ ಕಾರಿನಲ್ಲಿ ತಿಮ್ಮಾಪುರ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದೇನೆ ಎಂದು ಹೇಳಿದರು.

ಸಚಿವ ಸಂಪುಟದ ಬಗ್ಗೆ ತಿಮ್ಮಾಪುರ ಅವರೊಂದಿಗೆ ಅಸಮಾಧಾನ ವ್ಯಕ್ತಪಡಿಸಿರುವುದು ನಿಜ. ಆದರೆ ವೈರಲ್ ಆಗಿರುವ ಆಡಿಯೋದಲ್ಲಿ ಕೆಲವೊಂದು ವಿಷಯಗಳನ್ನು ಉದ್ದೇಶಪೂರ್ವಕವಾಗಿ ಸೇರಿಸಲಾಗಿದೆ. ಹೈಕಮಾಂಡ್ ಅಥವಾ ‘ಪೇಮೆಂಟ್ ಸೀಟ್’ ಕುರಿತು ನಾವು ಯಾವುದೇ ಮಾತುಕತೆ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದರು.

ತಮ್ಮ ಹಾಗೂ ತಿಮ್ಮಾಪುರ ಅವರ ನಡುವೆ ಭಿನ್ನಾಭಿಪ್ರಾಯ ಉಂಟುಮಾಡುವ ಉದ್ದೇಶದಿಂದ ಈ ಷಡ್ಯಂತ್ರ ರೂಪಿಸಲಾಗಿದೆ. ಇದರ ಹಿಂದೆ ಬಿಜೆಪಿ ಕಾರ್ಯಕರ್ತರ ಕೈವಾಡ ಇರಬಹುದೆಂಬ ಅನುಮಾನವಿದೆ ಎಂದು ಆರೋಪಿಸಿದರು.

ಈ ಪ್ರಕರಣದ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿ, ಆಡಿಯೋ ವೈರಲ್ ಮಾಡಿದವರು ಯಾರು ಹಾಗೂ ಅದರಲ್ಲಿ ಸುಳ್ಳು ಮಾಹಿತಿಯನ್ನು ಸೇರಿಸಿರುವವರ ವಿರುದ್ಧ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸುವುದಾಗಿ ತಿಳಿಸಿದರು.

“ನಾನು ಕಟ್ಟಾ ಕಾಂಗ್ರೆಸ್ ಕಾರ್ಯಕರ್ತ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷವನ್ನು ಬಿಡುವುದಿಲ್ಲ” ಎಂದು ಎಸ್.ಜಿ. ನಂಜಯ್ಯನಮಠ ಸ್ಪಷ್ಟಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News