Uttarakhand | ಜೋಶಿ ಮಠ ಹೆಲಿಕಾಪ್ಟರ್ ದುರಂತ; ಕರ್ನಾಟಕದ ಐವರು ಸೇರಿ ಆರು ಮಂದಿ ಮೃತ್ಯು
ಉತ್ತರಾಖಂಡ : ಬದ್ರಿನಾಥನ ದರ್ಶನ ಪಡೆದುಕೊಂಡು ಡೆಹ್ರಾಡೂನ್ ನ ಸಹಸ್ತ್ರಧಾರ ಕಡೆಗೆ ವಾಪಸ್ಸಾಗುತ್ತಿದ್ದ ಹೆಲಿಕಾಪ್ಟರ್ ಹವಾಮಾನ ವೈಪರಿತ್ಯಕ್ಕೆ ಸಿಲುಕಿ ಪತನಗೊಂಡಿದ್ದು, ಹೆಲಿಕಾಪ್ಟರ್ ಕ್ಯಾಪ್ಟನ್ ಹಾಗೂ ಕರ್ನಾಟಕದ ಐವರು ಪ್ರಯಾಣಿಕರು ಮೃತಪಟ್ಟಿದ್ದಾರೆ.
ಕ್ಯಾಪ್ಟನ್ ಹಿಮಾಂಶು ಹಾಗೂ ಕರ್ನಾಟಕದ ಪ್ರತಾಪ್, ಸುಧೀರ್, ಶಂಕರಗೌಡ, ಅರುಣ್ ಸಾಲುಂಕೆ ಮತ್ತು ನಟರಾಜ್ ಮೃತರು.
ಇಂದು ಮಧ್ಯಾಹ್ನ 1:14ಕ್ಕೆ ಬದರಿನಾಥ್ ನಿಂದ ಟೇಕಾಫ್ ಆದ ಹೆಲಿಕಾಪ್ಟರ್ ಕೆಲವೇ ಕ್ಷಣಗಳಲ್ಲಿ ನಿಯಂತ್ರಣ ಕೊಠಡಿಯೊಂದಿಗೆ ಸಂಪರ್ಕ ಕಡಿತಗೊಂಡಿದೆ. ಇದಾದ ಕೆಲವೇ ನಿಮಿಷಗಳಲ್ಲಿ ಹೆಲಿಕಾಪ್ಟರ್ ಜೋಶಿ ಮಠದ ಕಣಿವೆ ಪ್ರಾಂತ್ಯದಲ್ಲಿ ಪತನಗೊಂಡಿದೆ.
ಸದ್ಯ ಉತ್ತರಖಂಡ್ SDRF ಹಾಗೂ NDRF ಜಂಟಿಯಾಗಿ ಅವಶೇಷಗಳ ಪತ್ತೆ ಕಾರ್ಯಕೈಗೊಂಡಿದ್ದು ಈಗಾಗಲೇ ಹೆಲಿಕಾಪ್ಟರ್ ಹಾಗೂ ಮೃತದೇಹಗಳ ಅವಶೇಷಗಳನ್ನ ಪತ್ತೆ ಮಾಡಿದೆ.
ಚಾರ್ ಧಾಮ್ ಪ್ರವಾಸಕ್ಕೆ ತೆರಳಿದ್ದರು :
ಮೃತ ಐವರು ಪ್ರಯಾಣಿಕರು ಕರ್ನಾಟಕದವರಾಗಿದ್ದು, ಐವರು ಚಾರ್ ಧಾಮ್ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಬದ್ರಿನಾಥ ದರ್ಶನ ಮುಗಿಸಿ ವಾಪಸ್ಸಾಗುವಾಗ ಘಟನೆ ಸಂಭವಿಸಿದೆ.
ಮೃತರು ಯಾರು..?
ಅರುಣ್ ಸಾಲುಂಕೆ
ಘಟನೆಯಲ್ಲಿ ಮೃತಪಟ್ಟಿರುವ ಅರುಣ್ ಸಾಲುಂಕೆ ಮೂಲತಃ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅರಟಾಳ ಗ್ರಾಮದವರು, 2007 ರ ಬ್ಯಾಚ್ ನ ಪೊಲೀಸ್ ಅಧಿಕಾರಿಯಾದ ಅರುಣ್ ಸದ್ಯ ಸಿಸಿಬಿ ಸೈಬರ್ ಕ್ರೈಂ ನಲ್ಲಿ ಇನ್ಸಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದು ರಾಮಮೂರ್ತಿನಗರದಲ್ಲಿ ವಾಸವಿದ್ದರು. ಸಿಸಿಬಿ, ಬಾಣಸವಾಡಿ , ಇಂದಿರಾನಗರ ಪೊಲೀಸ್ ಠಾಣೆಗಳಲ್ಲಿ ಈ ಹಿಂದೆ ಅರುಣ್ ಕರ್ತವ್ಯ ನಿರ್ವಹಿಸಿದ್ದರು.
ನಟರಾಜ್
ನಟರಾಜ್ ತುಮಕೂರು ಜಿಲ್ಲೆ , ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗದವರಾಗಿದ್ದು ಇವರು ಕೋಳಿ ವ್ಯಾಪಾರದ ಉದ್ಯಮ ನಡೆಸುತ್ತಿದ್ದು ಬೆಂಗಳೂರಿನಲ್ಲಿ ವಾಸವಾಗಿದ್ದರು. ಅಲ್ಲದೆ ಶಿಕ್ಷಣ ಸಂಸ್ಥೆಯೊಂದನ್ನು ನಡೆಸುತ್ತಿದ್ದರು.
ಶಂಕರಗೌಡ
ಇವರು ಕೂಡ ಕುಣಿಗಲ್ ಮೂಲದವರಾಗಿದ್ದು ಅರುಣ್ ಸಾಲುಂಕೆ ಕುಣಿಗಲ್ ನ ಅಮೃತೂರು ಠಾಣೆಯಲ್ಲಿ ಸರ್ಕಲ್ ಇನ್ಸಪೆಕ್ಟರ್ ಆಗಿದ್ದಾಗ ಪರಿಚಯ ಆಗಿದ್ದರು. ಶಂಕರೇಗೌಡ ವೃತ್ತಿಯಲ್ಲಿ ವಕೀಲರಾಗಿದ್ದರು ಎಂಬುದು ಗೊತ್ತಾಗಿದೆ.
ಸುಧೀರ್ ಹಾಗೂ ಪ್ರತಾಪ್
ಇದರಲ್ಲಿ ಸುಧೀರ್ ಕೂಡ ವಕೀಲರಾಗಿದ್ದರು. ಪ್ರತಾಪ್ ಕೂಡ ಅರುಣ್ ಸಾಲುಂಕೆಗೆ ಸ್ನೇಹಿತರಾಗಿದ್ದು ಎಲ್ಲರೂ ಚಾರ್ ಧಾಮ್ ಯಾತ್ರೆಗೆ ತೆರಳಿದ್ದರು ಎಂಬುದು ಗೊತ್ತಾಗಿದೆ.