×
Ad

ಸಿದ್ದರಾಮಯ್ಯ, ಕಾಂಗ್ರೆಸ್ ಹೈಕಮಾಂಡ್ ಮಧ್ಯೆ ಸಂಬಂಧ ಹಳಸಿದೆ : ವಿಜಯೇಂದ್ರ

Update: 2025-07-12 20:35 IST

ವಿಜಯೇಂದ್ರ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಹೈಕಮಾಂಡ್ ಮಧ್ಯೆ ಸಂಬಂಧ ಹಳಸಿಹೋಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಮೊನ್ನೆ ಹೊಸದಿಲ್ಲಿಯಲ್ಲಿದ್ದರು. ಸಿದ್ದರಾಮಯ್ಯನವರಿಗೆ ಕಾಂಗ್ರೆಸ್ ಹೈಕಮಾಂಡ್ ಅಥವಾ ರಾಹುಲ್ ಗಾಂಧಿಯವರ ಭೇಟಿಗೆ ಅವಕಾಶ ಸಿಗದೇ ವಾಪಸ್ ಕರ್ನಾಟಕಕ್ಕೆ ಬಂದಿದ್ದಾರೆ’ ಎಂದು ದೂರಿದರು.

ಸರಕಾರದ ಮೇಲೆ ಒಂದು ರೀತಿ ಮೋಡ ಕವಿದ ವಾತಾವರಣವಿದೆ. ಗುಡುಗು, ಸಿಡಿಲಿನ ಮಳೆ ಯಾವಾಗ ಪ್ರಾರಂಭವಾಗುತ್ತದೋ ಕಾದು ನೋಡಬೇಕಿದೆ. ಕಾಂಗ್ರೆಸ್ ಪಕ್ಷ ಮತ್ತು ಸರಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದಂತೂ ಸತ್ಯ. ಮುಖ್ಯಮಂತ್ರಿ-ಉಪ ಮುಖ್ಯಮಂತ್ರಿ ಹಗ್ಗಜಗ್ಗಾಟ ಮತ್ತು ಕುರ್ಚಿಗಾಗಿ ಪೈಪೋಟಿ ನಡೆದಿದೆ. ಯಾರು ಮುಖ್ಯಮಂತ್ರಿ? ಇವರೇ ಇರುತ್ತಾರೋ, ಬದಲಾವಣೆ ಆಗುತ್ತಾರೋ ಎಂಬುದರಿಂದ ಜನರ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ತಿಳಿಸಿದರು.

ರಾಹುಲ್ ಗಾಂಧಿಯವರ ಭೇಟಿಗೆ ಅವಕಾಶ ಸಿಗದೇ ವಾಪಸ್ ಆಗಿರುವುದು ಒಳ್ಳೆಯ ಸಂಕೇತವಲ್ಲ, ಏನೇನು ಬೆಳವಣಿಗೆ ಆಗುತ್ತದೋ ಕಾದುನೋಡೋಣ. ಕಾಂಗ್ರೆಸ್ ಪಕ್ಷ-ಸರಕಾರದಲ್ಲಿ ಸುನಾಮಿ ಬರುವ ಭೀತಿ ಇದೆ. ಅದಕ್ಕಾಗಿ ಬೇರೆ ಬೇರೆ ಹೇಳಿಕೆ ಕೊಟ್ಟು ವಿಚಾರಗಳನ್ನು ಬದಲಿಸುವ ಪ್ರಯತ್ನ- ಕುತಂತ್ರ ನಡೆಯುತ್ತಿದೆ ಎಂದು ಅವರು ಉತ್ತರಿಸಿದರು.

ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಸಿದುಬಿದ್ದಿದೆ. ಮುಖ್ಯಮಂತ್ರಿ ಹಾಗೂ ಶಾಸಕರ ಮಧ್ಯೆ ಯಾರು ಸಿಎಂ ಆಗಬೇಕೆಂಬ ವಿಷಯದಲ್ಲಿ ಪೈಪೋಟಿ ನಡೆಯುತ್ತಿದೆ. ಇದರ ನಡುವೆ ರಾಜ್ಯದ ಜನರು ಪರದಾಡುತ್ತಿದ್ದಾರೆ. ನಾವು ವಿಪಕ್ಷದಲ್ಲಿ 3 ವರ್ಷ ಆರಾಮವಾಗಿ ಇರಲಿದ್ದೇವೆ. ಆ ವಿಷಯದಲ್ಲಿ ಆತಂಕ ಇಲ್ಲ. 2028ರಲ್ಲಿ ನಮ್ಮ ಸ್ವಂತ ಬಲದ ಮೇಲೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದ್ದೇವೆಯೇ ಹೊರತು ಇವರ ಜೊತೆ ಸೇರಿ ಗುದ್ದಾಡುವ ಅವಶ್ಯಕತೆ ನಮಗಿಲ್ಲ ಎಂದು ಅವರು ಉತ್ತರಿಸಿದರು.

ನವೆಂಬರ್‍ನಲ್ಲಿ ಕ್ರಾಂತಿ-ಮಹಾಕ್ರಾಂತಿ ಏನೇನು ಆಗಲಿದೆಯೋ ಕಾದುನೋಡಿ. ಆದರೆ, ರಾಜ್ಯದ ಆಡಳಿತ ಪಕ್ಷದಲ್ಲಿ ಯುದ್ಧ ಪ್ರಾರಂಭವಾಗಿದೆ ಎಂಬುದು ಸತ್ಯ. ಯಾರ್ಯಾರನ್ನು ಇದು ಬಲಿ ತೆಗೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕು. ನಾವು ವಿಪಕ್ಷವಾಗಿದ್ದು, ಸರಕಾರದ ವಿರುದ್ಧ ಹೋರಾಟ ಮಾಡುತ್ತೇವೆ ಎಂದರು.

ಒಳ್ಳೆಯದೇ ಆಗಲಿದೆ: ನಮ್ಮ ಪಕ್ಷದ ವರಿಷ್ಠರನ್ನು ದಿಲ್ಲಿಯಲ್ಲಿ ಭೇಟಿ ಮಾಡಿದ್ದೇನೆ. ಎಲ್ಲವೂ ಒಳ್ಳೆಯದಾಗಲಿದೆ. ಸೋಮಣ್ಣನವರು ಕೇಂದ್ರದ ಸಚಿವರು, ಪಕ್ಷದ ಹಿರಿಯರಿದ್ದು, ಪಕ್ಷದ ಬಗ್ಗೆ ಕಾಳಜಿ, ಬದ್ಧತೆ ಇಟ್ಟುಕೊಂಡವರು. ಸೋಮಣ್ಣನವರು ಸಮಸ್ಯೆ ಬಗೆಹರಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಾರೆ. ಶ್ರೀರಾಮುಲು-ಜನಾರ್ದನ ರೆಡ್ಡಿ ವಿಷಯದಲ್ಲಿ ಮಾತನಾಡಿದರೆ ಅದು ಸ್ವಾಗತಾರ್ಹ ಎಂದು ವಿಜಯೇಂದ್ರ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News